ಮಲ್ಲ ಯುದ್ಧದಲ್ಲಿ ಗೆದ್ದ ಯಡಿಯೂರಪ್ಪ ! ಎದುರಾಳಿ ಪಡೆಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು ಹೇಗೆ ? ಕೊನೆಕ್ಷಣದ ತಂತ್ರಗಾರಿಕೆ ಏನಿತ್ತು ? 

28-07-21 09:34 pm       Headline Karnataka Network   ಕರ್ನಾಟಕ

ರಾಜ್ಯದಲ್ಲಿ ಸಿಎಂ ಬದಲಾವಣೆಯ ವಿಚಾರದಲ್ಲಿ ಕೆಲವರಿಗೆ ಅದೃಷ್ಟ ಒಲಿದರೂ, ಪಟ್ಟ ಒಲಿಯಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ…

ಬೆಂಗಳೂರು, ಜುಲೈ 28: ಅದೃಷ್ಟ ಇದ್ದ ಮಾತ್ರಕ್ಕೆ ಭವಿಷ್ಯ ನಿರ್ಧಾರ ಆಗಲ್ಲ ಎನ್ನುತ್ತಾರೆ. ಕೆಲವೊಮ್ಮೆ ಅದೃಷ್ಟದಿಂದ ಏನೋ ಒಂದು ಹುದ್ದೆ ಸಿಕ್ಕಿಬಿಡುತ್ತದೆ. ಆದರೆ ಪ್ರತೀ ಬಾರಿಯೂ ಅದೃಷ್ಟ ಮಾತ್ರ ಕೆಲಸ ಮಾಡುವುದಿಲ್ಲ. ಬುದ್ಧಿವಂತಿಕೆ, ತಂತ್ರಗಾರಿಕೆ, ನಾಜೂಕುತನ ಬೇಕಾಗುತ್ತದೆ.  ಹೌದು.. ರಾಜ್ಯದಲ್ಲಿ ಸಿಎಂ ಬದಲಾವಣೆಯ ವಿಚಾರದಲ್ಲಿ ಕೆಲವರಿಗೆ ಅದೃಷ್ಟ ಒಲಿದರೂ, ಪಟ್ಟ ಒಲಿಯಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಇದೇ ಕಾರಣಕ್ಕೆ ರಾಜ್ಯದಲ್ಲಿ ಒತ್ತಡಕ್ಕೆ ಬಿದ್ದು ಸ್ಥಾನ ಬಿಟ್ಟುಕೊಟ್ಟಿದ್ದ ಬಿಎಸ್ ಯಡಿಯೂರಪ್ಪ ಕೊನೆಕ್ಷಣದಲ್ಲಿ ರಾಜಕೀಯ ದಾಳ ಉರುಳಿಸಿ, ಅಧಿಕಾರವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದು ಬಿಜೆಪಿ ಹೈಕಮಾಂಡಿಗೆ ಸಡ್ಡು ಹೊಡೆದ ಚಾಣಕ್ಯ ತಂತ್ರಗಾರಿಕೆ. 

ಬಸವರಾಜ್ ಬೊಮ್ಮಾಯಿ ಸಿಎಂ ಆಗುತ್ತಾರೆಂದು ಯಾರು ಕೂಡ ಅಂದ್ಕೊಂಡಿರಲಿಲ್ಲ. ಯಾಕಂದ್ರೆ, ಬೊಮ್ಮಾಯಿ ಏನಿದ್ದರೂ ಯಡಿಯೂರಪ್ಪ ಅನುಯಾಯಿ. ಅದಲ್ಲದೆ, ಜನತಾ ಪರಿವಾರದಿಂದ ಬಿಜೆಪಿಗೆ ವಲಸೆ ಬಂದವರು. ಮೂಲ ಬಿಜೆಪಿಗರಲ್ಲ ಎನ್ನುವ ದೂರು ಇದ್ದುದರಿಂದ ಆರೆಸ್ಸೆಸ್ ಕಡೆಯಿಂದ ಬೊಮ್ಮಾಯಿ ಸಿಎಂ ಆಗುವುದಕ್ಕೆ ವಿರೋಧ ಇತ್ತು. ಹಾಗಾದ್ರೆ, ಸಿಎಂ ಆಗೋದು ಯಾರು ಎಂಬ ಪ್ರಶ್ನೆಗೆ ಉತ್ತರ ಇರಲಿಲ್ಲ. 

ಮೊನ್ನೆ ಜುಲೈ 26ರಂದು ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಶೂನ್ಯ ಆವರಿಸಿತ್ತು. ಅತ್ತ ವಲಸಿಗರೆಂದು ಕರೆಸಿಕೊಳ್ಳುವ, ಬಿಜೆಪಿ ಸರಕಾರ ಬರಲು ಕಾರಣವಾಗಿದ್ದ ಗುಂಪು, ಮತ್ತೊಂದು ಕಡೆ ಯಡಿಯೂರಪ್ಪ ಜೊತೆಗಿದ್ದ ನಿಷ್ಠಾವಂತರ ಗುಂಪು ತಮ್ಮ ಅಸ್ತಿತ್ವದ ಬಗ್ಗೆ ಚಿಂತೆಗೆ ಬಿದ್ದಿದ್ದರು. ಆದರೆ, ಅಲ್ಲೀ ವರೆಗೂ ದೆಹಲಿಗೆ ಎಡತಾಕುತ್ತಿದ್ದ ಮುರುಗೇಶ್ ನಿರಾಣಿ, ಬಸವನಗೌಡ ಯತ್ನಾಳ್ ಗೆದ್ದು ಬೀಗಿದ್ದರು. ತಾವು ಅಂದುಕೊಂಡದ್ದು ಆಯ್ತೆಂದು ನಂಬಿದ್ದರು. ಆದರೆ, ಸುದೀರ್ಘ ನಲ್ವತ್ತು ವರ್ಷಗಳಿಂದ ಈ ರೀತಿಯ ತಂತ್ರಗಾರಿಕೆಯನ್ನೇ ಮಾಡಿಕೊಂಡು ಬಂದಿದ್ದ ಯಡಿಯೂರಪ್ಪ ಕರ್ನಾಟಕದಲ್ಲಿ ದೇವೇಗೌಡ ಮಾತ್ರ ಅಲ್ಲ. ತಾನೂ ಚಾಣಾಕ್ಷ ಎನ್ನುವುದನ್ನು ರಾಜ್ಯಕ್ಕೆ ತೋರಿಸಿದ್ದಾರೆ. 


ನಿರಾಣಿ ಸಿಎಂ ಆಗುವುದಕ್ಕೆ ಹೈಕಮಾಂಡ್ ಕಡೆಯ ಅಮಿತ್ ಷಾ ಫುಲ್ ಬ್ಯಾಟಿಂಗ್ ಇತ್ತು. ನಾಲ್ಕು ತಿಂಗಳ ಹಿಂದೆ ನಿರಾಣಿಯ ಅಥೆನಾಲ್ ಪ್ಲಾಂಟ್ ಉದ್ಘಾಟನೆಗೆ ಆಗಮಿಸಿದ್ದ ಅಮಿತ್ ಷಾ, ನಿರಾಣಿಗೆ ತನ್ನ ಆಶೀರ್ವಾದ ಇರುವುದನ್ನು ತೋರಿಸಿದ್ದರು. ಅದಕ್ಕೂ ಮೊದಲೇ ಸಿಎಂ ಬದಲಾವಣೆಗೆ ಕೂಗು ಹಾಕಿದ್ದ ಯತ್ನಾಳ್ ಜೊತೆಗೆ ಆನಂತರ ಸಚಿವ ಯೋಗೀಶ್ವರ್ ಕೂಡ ಸೇರಿಕೊಂಡಿದ್ದರು. ಯತ್ನಾಳ್ ಹೋದಲ್ಲಿ ಬಂದಲ್ಲಿ ಸಿಎಂ ಯಡಿಯೂರಪ್ಪ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿಕೊಂಡು ಬರುತ್ತಿದ್ದರೂ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಆಗಲೀ, ಪಕ್ಷದ ಇತರ ಮಂದಿಯಾಗಲೀ ಗಪ್ ಚುಪ್ ಇದ್ದರು. ಆಮೂಲಕ ಯತ್ನಾಳ್ ಅವರ ಯಡಿಯೂರಪ್ಪ ವಿರೋಧಿ ಕೂಗಿಗೆ ಮತ್ತಷ್ಟು ಬಲ ನೀಡಿದ್ದರು. ಪರೋಕ್ಷವಾಗಿ ಯಡಿಯೂರಪ್ಪ ವಿರೋಧಿಯಾಗಿ ಗುರುತಿಸಿಕೊಂಡಿದ್ದ ಸಂತೋಷ್ ಬಣ, ಯತ್ನಾಳ್ ಬೆನ್ನಿಗೆ ನಿಂತಿದ್ದು ದೃಢವಾಗಿತ್ತು. 

ಯತ್ನಾಳ್ ಜೊತೆಗೆ ಆನಂತರ ಎಚ್.ವಿಶ್ವನಾಥ್, ಯೋಗೀಶ್ವರ್ ಕೂಡ ಯಡಿಯೂರಪ್ಪ ವಿರುದ್ಧ ಕೂಗು ಹಾಕಲಾರಂಭಿಸಿದ್ದರು.  ಎಚ್.ವಿಶ್ವನಾಥ್ ಅಂತೂ, ಯಡಿಯೂರಪ್ಪ ಮಾತ್ರ ಬಿಜೆಪಿ ಕಟ್ಟಿದ್ದಲ್ಲ. ಬಿಬಿ ಶಿವಪ್ಪ, ಎಕೆ ಸುಬ್ಬಯ್ಯ, ಎಕೆ ಶಂಕರಮೂರ್ತಿ, ವಿಎಸ್ ಆಚಾರ್ಯ ಹೀಗೆ ಮುಂತಾದವರು ಪಕ್ಷ ಕಟ್ಟಿದ್ದಾರೆ ಎಂದು ಕೆಣಕುತ್ತಲೇ ಬಂದಿದ್ದರು. ಇವೆಲ್ಲ ಬೆಳವಣಿಗೆ ಹಿಂದೆ ಯಾರಿದ್ದಾರೆ ಎನ್ನುವ ಸೂಕ್ಷ್ಮವನ್ನು ಅರಿತಿದ್ದ ಯಡಿಯೂರಪ್ಪ ಯಾವುದಕ್ಕೂ ಪ್ರತಿಕ್ರಿಯೆಯನ್ನೇ ಕೊಡಲಿಲ್ಲ. ಕಳೆದ ಬಾರಿ ಮೇ ಮೊದಲ ವಾರದಲ್ಲಿ ದೆಹಲಿಗೆ ಹೋಗಿ ಬಂದಿದ್ದ ಯೋಗೀಶ್ವರ್, ಪರೀಕ್ಷೆ ಬರೆದಾಗಿದೆ, ಇನ್ನು ಫಲಿತಾಂಶ ಮಾತ್ರ ಬಾಕಿ ಎನ್ನುತ್ತಲೇ ಯಡಿಯೂರಪ್ಪ ಹೊರ ಬೀಳುವುದು ಖಚಿತ ಎಂದು ಮೀಸೆ ತಿರುವಿದ್ದರು. ಆದರೆ, ಯಡಿಯೂರಪ್ಪ ಮಾತ್ರ ಪಟ್ಟು ಸಡಿಲಿಸಿರಲಿಲ್ಲ. ಇನ್ನೆರಡು ವರ್ಷ ತಾನೇ ಸಿಎಂ ಎನ್ನುತ್ತಲೇ ಹೈಕಮಾಂಡಿಗೆ ಸಡ್ಡು ಹೊಡೆಯುತ್ತಲೇ ಬಂದಿದ್ದರು. 

 

ಪಂಚಮಸಾಲಿಗಳ ತಂತ್ರಕ್ಕೆ ಪ್ರತಿತಂತ್ರ 

ಬಸನಗೌಡ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ಉತ್ತರ ಕರ್ನಾಟಕದ ವಿಜಯಪುರ, ಹುಬ್ಬಳ್ಳಿ ಭಾಗದಲ್ಲಿ ಪ್ರಭಾವಿಯಾಗಿರುವ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಯತ್ನಾಳ್ ಕೂಗಿನ ಹಿಂದೆ ನಿರಾಣಿಯ ಉಪ್ಪು ಸವರುವ ತಂತ್ರವೂ ಇತ್ತು. ಮೇಲಿನ ಹಂತಕ್ಕೆ ಹತ್ತಿರವಿದ್ದ ನಿರಾಣಿ ಮತ್ತು ಯತ್ನಾಳ್, ಆಗಾಗ ದೆಹಲಿಗೆ ಹೋಗಿ ಯಡಿಯೂರಪ್ಪ ಬಗ್ಗೆ ಕಿವಿಯೂದುತ್ತಲೇ ಇದ್ದರು. ಇವೆಲ್ಲದರ ಬಗ್ಗೆ ಗೊತ್ತಿದ್ದ ಯಡಿಯೂರಪ್ಪ ಸದ್ದೇ ಇಲ್ಲದೆ ಪ್ರತಿತಂತ್ರ ಹೆಣೆದಿದ್ದರು. ವಯಸ್ಸಿನ ಕಾರಣಕ್ಕೆ ಒಂದು ವರ್ಷದ ನಂತರ ಬೇರೆಯವರಿಗೆ ಬಿಟ್ಟು ಕೊಡಬೇಕು ಎಂದು ಹೈಕಮಾಂಡ್ ಕಡೆಯಿಂದ ಹೇಳಿದ್ದರೂ, ಯಡಿಯೂರಪ್ಪ ಸ್ಥಾನ ಬಿಟ್ಟು ಕೊಟ್ಟಿರಲಿಲ್ಲ. ಯಾರು ಏನು ಹೇಳಿದರೂ ಮುಖ್ಯಮಂತ್ರಿ ಸ್ಥಾನ ಬಿಟ್ಟು ಕೊಡಲಾರೆ ಎಂದೇ ಹೇಳುತ್ತಾ ಬಂದಿದ್ದರು. ಆದರೆ, ವಿರೋಧಿಗಳ ಕೂಗಾಟ, ಪಕ್ಷದ ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕುತ್ತಿದ್ದುದು ಸಹಿಸದಂತಾಗಿತ್ತು. 

ಮೇ ಮೊದಲ ವಾರದಲ್ಲಿ ಯೋಗಿ ಮತ್ತು ಅರವಿಂದ ಬೆಲ್ಲದ ದೆಹಲಿಗೆ ತೆರಳಿದ ಬೆನ್ನಲ್ಲೇ ವಿಜಯೇಂದ್ರ ಮತ್ತು ಬಸವರಾಜ್ ಬೊಮ್ಮಾಯಿ ಕೂಡ ದೆಹಲಿಗೆ ತೆರಳಿದ್ದರು. ಯಡಿಯೂರಪ್ಪ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಅವರನ್ನು ಮಾಡುವುದಕ್ಕೆ ತಂದೆ ಒಪ್ಪಿದ್ದಾಗಿ ವಿಜಯೇಂದ್ರ ಹೈಕಮಾಂಡಿಗೆ ಮಾಹಿತಿ ರವಾನಿಸಿದ್ದರು. ಅದಕ್ಕೆ ಹೈಕಮಾಂಡ್ ಕಡೆಯಿಂದ ಒಪ್ಪಿಗೆಯೂ ಸಿಕ್ಕಿತ್ತು. ಆದರೆ, ಈ ವಿಚಾರ ತಿಳಿಯುತ್ತಲೇ ವಿರೋಧಿ ಪಡೆ ಮತ್ತಷ್ಟು ಬಿರುಸಾಗಿತ್ತು. ತಮ್ಮದೇ ಬಣದವರನ್ನು ಸಿಎಂ ಮಾಡಬೇಕೆಂದು ಪ್ರಯತ್ನಗಳನ್ನು ಶುರು ಮಾಡಿತ್ತು. 

ಒಂದ್ಕಡೆ ಯತ್ನಾಳ್ ಅಂಡ್ ಟೀಮ್ ನಿರಾಣಿಯನ್ನು ಸಿಎಂ ಮಾಡಬೇಕೆಂದಿದ್ದರೆ, ಸಂತೋಷ್ ಅಂಟ್ ಟೀಂ ಬೇರೆಯದ್ದೇ ಒಂದಷ್ಟು ಹೆಸರುಗಳನ್ನು ಫೈನಲ್ ಮಾಡಿತ್ತು. ಅಶ್ವತ್ಥ ನಾರಾಯಣ, ಸಿ.ಟಿ.ರವಿ, ನಳಿನ್ ಕುಮಾರ್ ಹೆಸರು ಈ ಲಿಸ್ಟಲ್ಲಿದ್ದವು. ಇದೇ ವೇಳೆ, ಅರವಿಂದ ಬೆಲ್ಲದ್ ಹೆಸರು ಕೂಡ ಚಾಲ್ತಿಗೆ ಬಂದಿತ್ತು. ತಂದೆ ಚಂದ್ರಕಾಂತ ಬೆಲ್ಲದ ಆರೆಸ್ಸೆಸ್ ಪ್ರಭಾವಿಯಾಗಿದ್ದರಿಂದ ಉತ್ತರ ಕರ್ನಾಟಕ ಭಾಗದ ಆರೆಸ್ಸೆಸ್ ಗುಂಪು ಅರವಿಂದ ಬೆಲ್ಲದ ಹೆಸರನ್ನು ಮುಂಚೂಣಿಗೆ ತಂದಿತ್ತು. ಆದರೆ, ಯಡಿಯೂರಪ್ಪ ಜುಲೈ 26ಕ್ಕೆ ರಾಜಿನಾಮೆ ನೀಡುತ್ತಾರೆಂದು ಯಾರು ಕೂಡ ಅಂದ್ಕೊಂಡಿರಲಿಲ್ಲ. ಆವತ್ತೇ ನಿರ್ಗಮಿಸಲು ಮೇಲಿನಿಂದ ಸೂಚನೆಯೂ ಬಂದಿರಲಿಲ್ಲ ಎನ್ನಲಾಗುತ್ತಿದೆ. ಆದರೆ, ಹೈಕಮಾಂಡ್ ಸೂಚನೆ ಎನ್ನುತ್ತಲೇ ಯಡಿಯೂರಪ್ಪ ಕಣ್ಣೀರ ಧಾರೆಯೊಂದಿಗೆ ನಿರ್ಗಮಿಸಿದ್ದು ರಾಜ್ಯದಲ್ಲಿ ಪ್ರಬಲ ಲಿಂಗಾಯತ ಸಮುದಾಯವನ್ನೇ ಬಡಿದೆಬ್ಬಿಸಿತ್ತು. 

ಹೈಕಮಾಂಡ್ ಅನ್ನೇ ತಬ್ಬಿಬ್ಬು ಮಾಡಿದ್ದ ಆಡಿಯೋ 

ಸಿಎಂ ಸ್ಥಾನಕ್ಕೆ ನಿರಾಣಿ ಹೆಸರು ಮುಂಚೂಣಿಗೆ ಬರುತ್ತಲೇ ಅದಕ್ಕೆ ಆರೆಸ್ಸೆಸ್ ನಾಯಕರು ಒಪ್ಪಲಿಲ್ಲ. ಆರೋಪ ಎದುರಿಸುತ್ತಿರುವ ಮತ್ತು ಕನಿಷ್ಠ ಲಿಂಗಾಯತ ಸಮುದಾಯಕ್ಕೇ ಸಹಮತ ಇಲ್ಲದ ವ್ಯಕ್ತಿಯನ್ನು ಮುಖ್ಯಮಂತ್ರಿ ಮಾಡಬೇಡಿ ಎಂದಿದ್ದರು. ಇಷ್ಟಾಗುತ್ತಿದ್ದಂತೆ, ಯಡಿಯೂರಪ್ಪ ನಿರ್ಗಮನಕ್ಕೂ ಮೊದಲೇ ಮಠಾಧೀಶರು ಬೀದಿಗೆ ಬಂದಿದ್ದರು. ಅದಕ್ಕೆ ಕಾರಣವಾಗಿದ್ದು ನಳಿನ್ ಕುಮಾರ್ ಆಡಿಯೋ ಬಾಂಬ್. ಕಾಕತಾಳೀಯ ಅಪರಾಧವೋ ಎನ್ನುವಂತೆ ಅದೇ ಸಂದರ್ಭದಲ್ಲಿ ಆಡಿಯೋ ಲೀಕ್ ಆಗಿದ್ದು ಯಡಿಯೂರಪ್ಪ ಪಾಲಿಗೆ ಅಸ್ತ್ರವಾಗಿತ್ತು. ಆಡಿಯೋವನ್ನೇ ಮುಂದಿಟ್ಟುಕೊಂಡ ಯಡಿಯೂರಪ್ಪ ಅಂಡ್ ಟೀಮ್, ಸಮುದಾಯದ ಮಠಾಧೀಶರನ್ನು ಎತ್ತಿಕಟ್ಟುವಲ್ಲಿ ಯಶಸ್ವಿಯಾಗಿದ್ದರು. ಇವೆಲ್ಲದರ ಮಧ್ಯೆ ಆರೆಸ್ಸೆಸ್ ಮತ್ತು ಹೈಕಮಾಂಡ್ ಕಡೆಯಿಂದ ಪ್ರಹ್ಲಾದ ಜೋಷಿ ಹೆಸರು ಕೇಳಿಬಂದಿತ್ತು. ಆದರೆ, ಜೋಷಿಗೇ ರಾಜ್ಯ ರಾಜಕೀಯದ ಜಂಜಾಟಕ್ಕೆ ಬರಲು ಮನಸ್ಸು ಇರಲಿಲ್ವಂತೆ. ಆದರೆ, ಮೊದಲೇ ಕೆರಳಿರುವ ಲಿಂಗಾಯತರ ಮೇಲೆ ಬ್ರಾಹ್ಮಣ ಜಾತಿಯ ಜೋಷಿಯನ್ನು ತಂದರೆ, ಕಷ್ಟ ಎನ್ನುವ ಲೆಕ್ಕಾಚಾರವೂ ಕೇಳಿಬಂತು. 

ಯಡಿಯೂರಪ್ಪ ಯಾವಾಗ ರಾಜಿನಾಮೆ ಘೋಷಣೆ ಮಾಡಿದರೋ, ಬಿಜೆಪಿ ಹೈಕಮಾಂಡ್ ಉತ್ತರಾಧಿಕಾರಿ ಯಾರೆಂದು ಹೇಳಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಆದರೆ, ಹೈಕಮಾಂಡ್ ಕಡೆಯಲ್ಲಾಗಲೀ, ಸಂತೋಷ್ ಬಣದಲ್ಲಾಗಲೀ ಸಿಎಂ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಇರಲಿಲ್ಲ. ಯಾರ ಹೆಸರನ್ನು ಘೋಷಣೆ ಮಾಡಿದ್ರೂ ಬಂಡಾಯ ಏಳುವ ಸ್ಥಿತಿ ಇತ್ತು. ಇದಕ್ಕಾಗಿ ವೀಕ್ಷಕರ ಸಮ್ಮುಖದಲ್ಲಿ ಶಾಸಕಾಂಗ ಪಕ್ಷ ಸಭೆ ನಡೆಸುವುದಾಗಿ ನಿರ್ಧಾರಕ್ಕೆ ಬರಲಾಯ್ತು. ಅದೇ ಸಂದರ್ಭದಲ್ಲಿ ಸಭೆಯ ಬಳಿಕ ರಾಜ್ಯ ಉಸ್ತುವಾರಿ ಸಿಎಂ ಅಭ್ಯರ್ಥಿ ಘೋಷಣೆ ಮಾಡುತ್ತಾರೆಂದೂ ಹೇಳಲಾಗಿತ್ತು. ಆದರೆ, ಇದನ್ನೇ ದಾಳವಾಗಿಸ್ಕೊಂಡ ಹಂಗಾಮಿ ಮುಖ್ಯಮಂತ್ರಿಯೂ ಆಗಿದ್ದ ಯಡಿಯೂರಪ್ಪ ಬಸವರಾಜ ಬೊಮ್ಮಾಯಿ ಹೆಸರನ್ನು ಸಭೆಯಲ್ಲಿ ಪ್ರಸ್ತಾವಿಸಿದರು. ಯಡಿಯೂರಪ್ಪ ಪರವಾಗಿಯೇ ಹೆಚ್ಚು ಶಾಸಕರು ಇರುವಾಗ ವಿರೋಧ ಮಾಡಲು ಸಂಖ್ಯಾಬಲ ಬೇಕಲ್ಲ. ರಾಜಾಹುಲಿ ಯಡಿಯೂರಪ್ಪ ವಿರೋಧಿ ಪಡೆಯ ಸಂಚಿಗೆ ಪ್ರತಿ ತಂತ್ರ ಹೂಡುತ್ತಲೇ ತನ್ನಾಪ್ತನನ್ನೇ ಸಿಎಂ ಪಟ್ಟಕ್ಕೇರಿಸಿದ್ದರು. ಶಾಸಕಾಂಗ ಸಭೆಯಲ್ಲಿ ಒಬ್ಬರ ಆಯ್ಕೆಯಾದ ಬಳಿಕ ಇನ್ನಾವುದೇ ಹೆಸರು ಹೇಳುವುದಕ್ಕೆ ಅವಕಾಶ ಇರುವುದಿಲ್ಲ. ಅಲ್ಲಿಗೆ ರಾಜಕೀಯ ಚಾಣಾಕ್ಷ ಯಡಿಯೂರಪ್ಪ ಗೆದ್ದು ಬೀಗಿದ್ದಲ್ಲದೇ, ಎದುರಾಳಿ ಪಡೆಗೆ ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದರು. ಸಭೆಯಲ್ಲೇ ಇದ್ದು ಯಡಿಯೂರಪ್ಪ ಹೆಣೆದ ತಂತ್ರಕ್ಕೆ ವಿರೋಧಿ ಪಡೆ ತಲೆಬಾಗಲೇ ಬೇಕಾಯಿತು. 

ಯಾವ ಕಾರಣಕ್ಕೆ ಸಿಎಂ ಯಡಿಯೂರಪ್ಪ ಅವರನ್ನು ಇಳಿಸಲಾಗಿತ್ತೋ, ಅದೇ ಯಡಿಯೂರಪ್ಪ ಅಧಿಕಾರ ಕೇಂದ್ರವನ್ನು ತನ್ನ ಕೈಯಲ್ಲೇ ಇಟ್ಟುಕೊಂಡಿದ್ದು ರಾಜಕೀಯ ತಂತ್ರಗಾರಿಕೆ. ಅದಕ್ಕೆ ಹೇಳುವುದು ಬರೀಯ ಅದೃಷ್ಣ ನಂಬಿಕೊಂಡರೆ ಸಾಕಾಗಲ್ಲ. ಅದೃಷ್ಟದಿಂದ ರಾಜ್ಯಾಧ್ಯಕ್ಷನಾಗಬಹುದು ಅಷ್ಟೇ. ಮುಖ್ಯಮಂತ್ರಿ ಆಗುವುದಕ್ಕೆ ಸಾಧ್ಯವಿಲ್ಲ. 

Bommai, who has no roots in the BJP’s ideology, is a politician with socialist moorings who followed in the footsteps of his father S R Bommai, a leader of the Janata Party, who was made the Chief Minister by Ramakrishna Hedge in 1988. That government was dismissed unceremoniously — leading to the famous S R Bommai vs Union of India case which laid down norms for ascertaining majority and curbed dismissals of state governments.