ಮಗ ಬಾರ್ ತೆರೆಯಲು ರೆಡಿಯಾಗಿದ್ದರೆ, ಅಪ್ಪ ಆಶ್ರಮ ಕಟ್ಟಲು ತಯಾರಿ ನಡೆಸಿದ್ದ ! ಹೆಣ್ಮಕ್ಕಳ ಬೀದಿ ರಂಪಕ್ಕೆ ಇಡೀ ಕುಟುಂಬ ಅಂತ್ಯ !!

18-09-21 05:41 pm       Headline Karnataka News Network   ಕರ್ನಾಟಕ

ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಪ್ರಕರಣ ಒಂದೆಡೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದ್ದರೆ, ಮಾನವಂತರ ಹೃದಯವನ್ನೇ ಕಲಕುವಂತೆ ಮಾಡಿದೆ.

ಬೆಂಗಳೂರು, ಸೆ.18 : ಒಂದೇ ಕುಟುಂಬದ ನಾಲ್ವರು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿರುವ ಪ್ರಕರಣ ಒಂದೆಡೆ ಹತ್ತು ಹಲವು ಅನುಮಾನಗಳಿಗೆ ಕಾರಣವಾಗಿದ್ದರೆ, ಮಾನವಂತರ ಹೃದಯವನ್ನೇ ಕಲಕುವಂತೆ ಮಾಡಿದೆ. ಐಷಾರಾಮಿ ಮನೆಯ ಯಜಮಾನ ಎನಿಸಿಕೊಂಡಿದ್ದ ಶಂಕರ್ ಕುಟುಂಬಸ್ಥರ ಜೊತೆಗೆ ಜಗಳ ಮಾಡಿಕೊಂಡು ಮನೆಯ ಹೊರಗೆ ಹೋಗಿದ್ದರೆ, ನಾಲ್ಕು ದಿನಗಳಿಂದ ಬಂದಿರಲಿಲ್ಲ. ಈ ನಡುವೆ, ನಾಲ್ವರು ತಮ್ಮ ಜೀವವನ್ನೇ ಆಹುತಿ ತೆಗೆದುಕೊಂಡಿದ್ದರೆ, ಒಂಬತ್ತು ತಿಂಗಳ ಮಗು ಅತ್ತು ಕರೆದು ಪ್ರಾಣ ಬಿಟ್ಟಿದೆ.

ಬ್ಯಾಡರಹಳ್ಳಿಯ ಚೇತನ್ ನಗರದಲ್ಲಿ ನಡೆದಿರುವ ಭಯಾನಕ ಘಟನೆಯ ಬಗ್ಗೆ ಅಲ್ಲಿನ ನಿವಾಸಿಗಳು ಒಂದೊಂದು ಕತೆ ಹೇಳುತ್ತಿದ್ದಾರೆ. ಆ ಮನೆಗೆ ಸ್ಥಳೀಯ ಪತ್ರಿಕೆಯೊಂದರಲ್ಲಿ ಸಂಪಾದಕನಾಗಿದ್ದ ಹಲಗೇರಿ ಶಂಕರ್ ಒಡೆಯ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ. ಜೊತೆಗೊಬ್ಬಳು ಪತ್ನಿ. ಹೆಣ್ಣು ಮಕ್ಕಳಾದ ಸಿಂಧೂರಾಣಿ(30) ಮತ್ತು ಸಿಂಚನಾ(33) ಇಬ್ಬರಿಗೂ ಮದುವೆಯಾಗಿದ್ದರೂ, ಗಂಡಂದಿರ ಜೊತೆಗೆ ಜಗಳವಾಡಿ ತವರು ಮನೆಗೆ ಬಂದಿದ್ದರು. ತಾಯಿ ಭಾರತಿ ಮತ್ತು ಮಗ ಮಧುಸಾಗರ್ (26) ಮನೆಯಲ್ಲಿದ್ದು ಬಂಗಲೆಯಂತಿದ್ದ ಮನೆಯನ್ನು ನಡೆಸುತ್ತಿದ್ದರು. ಮಗ ಬಿಸಿನೆಸ್ ಮ್ಯಾನ್ ಆಗಿದ್ದ. ಅವರಿಗೆ ಹಣದ ವಿಚಾರದಲ್ಲಾಗಲೀ, ಯಾವುದರಲ್ಲಿಯೂ ಕೊರತೆ ಇರಲಿಲ್ಲ.

ಆದರೆ, ಗಂಡನ ಮನೆಯನ್ನು ಬಿಟ್ಟು ಬಂದಿದ್ದ ಪುತ್ರಿಯರು ದಿನವೂ ಒಬ್ಬರಿಗೊಬ್ಬರು ಜಗಳ ಮಾಡುತ್ತಿದ್ದರು. ಸಿಂಧುರಾಣಿಗೆ ಒಂಬತ್ತು ತಿಂಗಳ ಗಂಡು ಮಗು ಇದ್ದರೆ, ಸಿಂಚನಾಗೆ ಮೂರು ವರ್ಷದ ಹೆಣ್ಮಗಳಿದ್ದಳು. ಆದರೆ, ಮಕ್ಕಳ ವಿಚಾರ, ಮನೆಯ ಆಸ್ತಿ ವಿಚಾರ ಹೀಗೆ ಸಿಕ್ಕಿದ್ದಕ್ಕೆಲ್ಲಾ ರಂಪಾಟ ಮಾಡುತ್ತಿದ್ದರು. ಆದರೆ, ಮೊನ್ನೆ ಭಾನುವಾರ ಏನಾಗಿತ್ತೋ ಏನೋ.. ಸತತ ಜಗಳ, ಕುಟುಂಬಸ್ಥರ ಕಿರಿಕಿರಿಯಿಂದ ಬೇಸತ್ತಿದ್ದ ಶಂಕರ್ ಜಗಳ ಮಾಡಿಕೊಂಡು ಮನೆಯನ್ನೇ ಬಿಟ್ಟು ತೆರಳಿದ್ದರು.

ನಾಲ್ಕು ದಿನಗಳಿಂದ ಮನೆಗೆ ಬಂದಿರಲಿಲ್ಲ. ಗುರುವಾರ ಬಂದು ನೋಡಿದ್ದರೂ, ಮನೆಗೆ ಬೀಗ ಹಾಕಿದ್ದನ್ನು ನೋಡಿ ಶಂಕರ್ ಹಿಂತಿರುಗಿದ್ದರು. ಶುಕ್ರವಾರ ಮತ್ತೆ ಬಂದಾಗ, ಮನೆಗೆ ಬೀಗ ಹಾಕಿದ್ದನ್ನು ನೋಡಿ ಏನೋ ಅನುಮಾನ ಬಂದು ಬೀಗ ಒಡೆದು ನೋಡಿದ್ದಾರೆ. ಮನೆ ಒಳಗೆ ನೋಡಿದರೆ, ಭೀಭತ್ಸ ಸ್ಥಿತಿ ಎದುರಾಗಿತ್ತು. ಒಂದೊಂದು ಕೋಣೆಯಲ್ಲಿ ಒಬ್ಬೊಬ್ಬರ ದೇಹಗಳು ನೇತಾಡುತ್ತಿದ್ದವು. ಸತ್ತು ಎರಡು ಮೂರು ದಿನ ಕಳೆದಿದ್ದರಿಂದ ವಾಸನೆ, ದುರ್ನಾತ ಬರುತ್ತಿತ್ತು. 9 ತಿಂಗಳ ಗಂಡು ಮಗು ಹಾಸಿಗೆಯಲ್ಲೇ ಮೃತಪಟ್ಟಿದ್ದರೆ, ಇನ್ನೊಂದು ಮಗು ಅಜ್ಜನನ್ನು ಕಂಡು ಅತ್ತ ಅಳುವುದಕ್ಕೂ ಆಗದೆ, ಉಳಿಯುವುದಕ್ಕೂ ಆಗದೆ ದಿಗ್ಭ್ರಾಂತ ಸ್ಥಿತಿಯಲ್ಲಿತ್ತು. ಸಂಪೂರ್ಣ ಏರ್ ಪ್ರೂಫ್ ಹೊಂದಿದ್ದ ಬಂಗಲೆ ಅಲ್ಲಿನ ಸ್ಥಿತಿ ನೋಡಿದರೆ, ಸ್ಮಶಾನಕ್ಕಿಂತಲೂ ಕಡೆಯಾಗಿತ್ತು.

ಮೇಲ್ನೋಟಕ್ಕೆ ತಾಯಿ ಭಾರತಿ (50) ಮತ್ತು ಹೆಣ್ಣು ಮಕ್ಕಳಿಬ್ಬರ ದೇಹಗಳು ಕೊಳೆತು ಹೋಗಿದ್ದರಿಂದ ಅವರು ಸತ್ತು ಐದು ದಿನಗಳಾಗಿರಬಹುದು ಎಂದು ಅಂದಾಜಿಸಲಾಗಿದೆ. ಮಗ ಮಧುಸಾಗರ್ ದೇಹ ಅಷ್ಟಾಗಿ ಕೊಳೆತಿರಲಿಲ್ಲ. ಹೀಗಾಗಿ ಎರಡು ದಿನಗಳ ಬಳಿಕ ಆತ ಸಾವನ್ಪಪ್ಪಿದನೇ ಅನ್ನುವ ಅನುಮಾನ ಹುಟ್ಟಿಕೊಂಡಿದೆ. ಮೂರು ವರ್ಷದ ಮಗಳು ಸಿಂಚನಾಳನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಕುಟುಂಬದಲ್ಲಿ ಜಗಳಕ್ಕೇನು ಕಾರಣ ?

ಹೆಣ್ಣು ಮಕ್ಕಳಿಬ್ಬರ ಮದುವೆಯ ಬಳಿಕ ಶಂಕರ್ ಮತ್ತು ಆತನ ಪತ್ನಿ ನಡುವೆ ವಿನಾಕಾರಣ ಜಗಳ ಆಗುತ್ತಿತ್ತು. ಹೆಣ್ಣು ಮಕ್ಕಳ ಕಾರಣಕ್ಕೇ ಜಗಳ ಏರ್ಪಡುತ್ತಿತ್ತು ಎನ್ನಲಾಗಿದೆ. ಗಂಡನ ಮನೆ ಬಿಟ್ಟು ಬಂದ ಹೆಣ್ಮಕ್ಕಳು ತವರು ಮನೆಯಲ್ಲೇ ಉಳಿದಿದ್ದು ಶಂಕರ್ ಗೆ ಇಷ್ಟವಿರಲಿಲ್ಲ. ಈ ಬಗ್ಗೆ ಗಂಡನ ಮನೆಗೆ ಹೋಗಲು ತಂದೆ ಹೇಳಿದರೆ, ಅದನ್ನು ಕೇಳುತ್ತಿರಲಿಲ್ಲ. ಶಂಕರ್ ಮಾತಿಗೆ ವಿರೋಧ ನಿಂತಿದ್ದ ತಾಯಿ ಭಾರತಿ, ಹೆಣ್ಮಕ್ಕಳು ಇಲ್ಲಿಯೇ ಇರಲಿ. ನರಕಕ್ಕೆ ಕಳಿಸಿಕೊಡುವುದಿಲ್ಲ ಎಂದು ಹಠ ಹಿಡಿದಿದ್ದಳು. ನೀನೇ ಹೆಣ್ಮಕ್ಕಳ ಜೀವನ ಹಾಳು ಮಾಡ್ತಿದೀಯಾ ಅಂತ ಗಂಡ ರಂಪ ಮಾಡಿದ್ದ.

ಈ ನಡುವೆ, ಶಂಕರ್ ಮತ್ತು ಮಗನ ನಡುವೆ ಹಣಕಾಸಿನ ವ್ಯವಹಾರದಲ್ಲಿ ಭಿನ್ನಾಭಿಪ್ರಾಯ ಎದುರಾಗಿತ್ತು. ಮಗ ಮಧುಸಾಗರ್ ಬಾರ್ ಓಪನ್ ಮಾಡುವುದಕ್ಕಾಗಿ 20 ಲಕ್ಷ ರೂಪಾಯಿ ಒಟ್ಟು ಮಾಡಲು ರೆಡಿ ಮಾಡುತ್ತಿದ್ದ. ಹಣಕಾಸಿನ ವಿಚಾರದಲ್ಲಿ ರಿಜಿಸ್ಟರ್ ಮಾಡಲು ತಂದೆ ಶಂಕರ್ ಸಹಿ ಬೇಕಾಗಿತ್ತು. ಆದರೆ ಸಹಿ ಮಾಡಲು ಶಂಕರ್ ನಿರಾಕರಿಸಿದ್ದರು. ಈ ವಿಚಾರದಲ್ಲಿಯೂ ಕಳೆದ ಭಾನುವಾರ ಮನೆಯಲ್ಲಿ ಜಗಳ ಆಗಿತ್ತು ಎನ್ನಲಾಗಿದೆ. ಮನೆಮಂದಿಯ ರಂಪಾಟ, ಕುಟುಂಬ ಕಲಹದಿಂದ ಬೇಸತ್ತಿದ್ದ ಶಂಕರ್, ಅನಾಥರಿಗಾಗಿ ಆಶ್ರಮ ಕಟ್ಟಲು ಮುಂದಾಗಿದ್ದ. ಇದಕ್ಕಾಗಿ ಮಗ ಮತ್ತು ಹೆಂಡ್ತಿ ಬಳಿಯಿಂದ ಹತ್ತು ಲಕ್ಷ ರೂಪಾಯಿ ಕೇಳಿದ್ದಕ್ಕೆ ಅವರು ನಿರಾಕರಿಸಿದ್ದರು. ಇದರಿಂದ ಮುನಿಸಿಕೊಂಡ ಶಂಕರ್ ಕಳೆದ ಭಾನುವಾರ ಮನೆಯನ್ನೇ ಬಿಟ್ಟುಹೋಗಿದ್ದರು. ಆದರೆ, ಅದೇ ದಿನ ಸಂಜೆ 4.30‌ಕ್ಕೆ ಮಗ ವಾಟ್ಸಪ್ ಮೆಸೇಜ್ ಮಾಡಿದ್ದ. 10 ಲಕ್ಷ ಕೊಡುತ್ತೇನೆ, ಮನೆಗೆ ಬರುವಂತೆ ಮೆಸೇಜ್ ಮಾಡಿದ್ದ. ಇದಕ್ಕೆ ಶಂಕರ್ ಯಾವುದೇ ರೆಸ್ಪಾನ್ಸ್ ನೀಡಿರಲಿಲ್ಲ.

ಆಶ್ರಮ ಕಟ್ಟಲು ಹೊರಟಿದ್ದ ಐದು ಎಕರೆ ಜಮೀನು ಖರೀದಿಸಲು ಮುಂದಾಗಿದ್ದರು. ತಮ್ಮ ಊರಿನ ಬಳಿಯೇ ಐದು ಎಕರೆ ಜಮೀನು ಖರೀದಿಸಿ, ಅಗ್ರಿಮೆಂಟ್ ಮಾಡಿದ್ದರು. ಜಾಗದ ರಿಜಿಸ್ಟ್ರೇಷನ್ ಕೆಲಸ ಮಾತ್ರ ಬಾಕಿ ಉಳಿದಿತ್ತು. ಹೆಣ್ಣು ಮಕ್ಕಳನ್ನ ಗಂಡನ ಮನೆಗೆ ಸೇರಿಸಿ, ಮಗನ ಮದುವೆ ಮಾಡಿ ಆಶ್ರಮ ಸೇರಲು ಶಂಕರ್ ಆಲೋಚನೆ ಮಾಡಿದ್ದ. ಆದರೆ ಈಗ ಮನೆ ಮಂದಿಯೆಲ್ಲಾ ಯಮಲೋಕ ಸೇರಿದ್ದಾರೆ. ಮಕ್ಕಳು, ಮೊಮ್ಮಕ್ಕಳಿಂದ ತುಂಬಿದ್ದ ಮನೆ ಈಗ ಖಾಲಿ, ಖಾಲಿಯಾಗಿದೆ. ಮನೆಯಲ್ಲಿದ್ದ 7 ಜನರ ಪೈಕಿ ಐವರು ಸಾವನ್ನಪ್ಪಿದ್ದಾರೆ. ಶಂಕರ್ ಹಾಗೂ ಮೂರು ವರ್ಷದ ಮಗು ಪ್ರೇಕ್ಷಾ ಬಿಟ್ಟು ಉಳಿದೆಲ್ಲರೂ ಮೃತಪಟ್ಟಿದ್ದಾರೆ. ಪೊಲೀಸರು ತನಿಖೆಯ ದೃಷ್ಟಿಯಿಂದ ಐಷಾರಾಮಿ ಮನೆಗೆ ಬೀಗ ಹಾಕಿದ್ದಾರೆ.

ಹಸಿವು ತಾಳಲಾರದೇ ಪ್ರಾಣಬಿಟ್ಟಿದ್ದ ಹಸುಗೂಸು

ಮಲಗಿದ್ದ ಮಂಚದ ಮೇಲೆಯೇ ಏನೂ ಅರಿಯದ 9 ತಿಂಗಳ ಗಂಡು ಮಗು ಪ್ರಾಣ ಬಿಟ್ಟಿದೆ. ಸಾಯುವ ಮೊದಲು ಸಿಂಧೂರಾಣಿ ಮಗುವಿಗೆ ಹಾಲುಣಿಸಿದ್ದಾರೆ. ಹಾಲುಣಿಸಿ ಮಗುವನ್ನ ಮಂಚದ ಮೇಲೆ ಮಲಗಿಸಿದ್ದರು. ಮತ್ತೊಂದು ಮಗು ಪ್ರೇಕ್ಷಾಳಿಗೆ ಊಟ ತಿನ್ನಿಸಿ ಮಲಗಿಸಿದ್ದರು. ಮಕ್ಕಳು ಮಲಗಿದ ಮೇಲೆ ತಾಯಿ, ಮಕ್ಕಳು ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾರೆ. ಎಲ್ಲರೂ ಪ್ರತ್ಯೇಕ ಕೊಠಡಿಗಳಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಿದ್ದೆಯಿಂದ ಎದ್ದ ಒಂಬತ್ತು ತಿಂಗಳ ಗಂಡು ಮಗು ಅಳುವುದಕ್ಕೆ ಶುರು ಮಾಡಿದೆ. ಹಸಿವಿನಿಂದ ಸಾಕಷ್ಟು ಹೊತ್ತು ಅತ್ತಿದೆ. ಮತ್ತೊಂದು ಮಗು ಪ್ರೇಕ್ಷಾ ಕೂಡ ನಿದ್ದೆಯಿಂದ ಎದ್ದು ಅಳುವುದಕ್ಕೆ ಶುರು ಮಾಡಿದೆ‌. ಬಂಗಲೆ ಸೌಂಡ್ ಫ್ರೂಫ್ ಇದ್ದ ಕಾರಣ ಮಕ್ಕಳ ಆಕ್ರಂದನ ಯಾರಿಗೂ ಕೇಳಿಸಿಲ್ಲ. 9 ತಿಂಗಳ ಹಸುಗೂಸು ಹಾಲಿಲ್ಲದೆ ಅತ್ತು ಅತ್ತು ಪ್ರಾಣ ಬಿಟ್ಟಿದೆ ಎನ್ನಲಾಗುತ್ತಿದೆ.

ಅನ್ನ, ನೀರಿಲ್ಲದೆ ಬದುಕಿದ ಮೂರು ವರ್ಷದ ಮಗು

ಇತ್ತ ಮೂರು ವರ್ಷದ ಪ್ರೇಕ್ಷಾ ಪ್ರತಿಯೊಬ್ಬರ ರೂಂ ಬಳಿ ಹೋಗಿ ಅತ್ತಿದ್ದಾಳೆ. ಐದು ದಿ‌ನಗಳ ಕಾಲ ಅನ್ನ, ನೀರಿಲ್ಲದೆ ಕಾಲ ಕಳೆದಿದ್ದಾಳೆ. ಕತ್ತಲಲ್ಲಿ ಎಲ್ಲರ ಮೃತದೇಹಗಳ ಬಳಿ ಹೋಗಿ ಹೋಗಿ ಅತ್ತಿದ್ದಾಳೆ. ಅಮ್ಮ ಸಿಂಚನಾಳ ಮೃತದೇಹದ ಬಳಿ ಕುಳಿತು ಅತ್ತಿದ್ದಾಳೆ. ಮೃತದೇಹಗಳಿಂದ ಹುಳುಗಳು ಬಂದು ಕೆಟ್ಟ ವಾಸನೆ ಬರಲು ಆರಂಭಿಸಿದೆ. ಒಂದು ಕಡೆ ವಾಸನೆ, ಮತ್ತೊಂದು ಕಡೆ ಮೃತದೇಹದಿಂದ ಹೊರಸೂಸುತ್ತಿದ್ದ ಹುಳುಗಳ ಮಧ್ಯೆ ಪ್ರೇಕ್ಷಾ ಐದು ದಿನಗಳನ್ನು ಕಳೆದಿದ್ದಾಳೆ. ಹೊಟ್ಟೆ ಹಸಿವಿನಿಂದ ಬಳಲಿದರೂ, ಮನೆಯಿಂದ ಹೊರಗೆ ಬರಲಾಗದೆ ಅಲ್ಲಿಯೇ ಇದ್ದುಕೊಂಡು ಬದುಕಿದ್ದೇ ಪವಾಡ.

Five persons including a nine-month-old baby were found dead in their house on Chetan Circle fourth cross in Thigalarapalya of Magadi Road on Friday evening. Two-and-half-year-old girl who starved for almost four days was found unconscious in the house. The police have rescued the girl and have rushed her to the hospital for treatment.