ಬ್ರೇಕಿಂಗ್ ನ್ಯೂಸ್
06-12-21 10:22 pm HK Desk news ಕರ್ನಾಟಕ
ಪುತ್ತೂರು, ಡಿ.6: ಕರ್ನಾಟಕದ ಬಿಜೆಪಿ ಪಾಲಿನ ಏಕೈಕ ಸ್ವಾಭಿಮಾನಿ, ಸೈದ್ಧಾಂತಿಕ ನಿಷ್ಠುರವಾದಿ, ತಮ್ಮ ತತ್ವನಿಷ್ಠೆಯಿಂದಲೇ ರಾಜಕೀಯದಲ್ಲಿ ಏಳು - ಬೀಳುಗಳನ್ನು ಕಂಡ, ಪುತ್ತೂರಿನಲ್ಲಿದ್ದೇ ರಾಷ್ಟ್ರ ನಾಯಕರಾದ ಎಲ್.ಕೆ. ಆಡ್ವಾಣಿ, ವಾಜಪೇಯಿ ಜೊತೆಗೆ ನಿಕಟ ಸಂಪರ್ಕ ಇರಿಸಿಕೊಂಡಿದ್ದ ಉರಿಮಜಲು ರಾಮ ಭಟ್ ಇನ್ನಿಲ್ಲ. ಅಲ್ಪಕಾಲದ ಅನಾರೋಗ್ಯದಿಂದಿದ್ದ ಭಟ್ಟರು ತಮ್ಮ 92ರ ಇಳಿವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ.
ಬಾಲ್ಯ ಕಾಲದಲ್ಲಿಯೇ ಆರೆಸ್ಸೆಸ್ ಗರಡಿಯಲ್ಲಿ ಬೆಳೆದು ಆನಂತರ ಜನಸಂಘದಲ್ಲಿ ರಾಜಕೀಯ ಹಾದಿ ಹಿಡಿದಿದ್ದ ರಾಮ ಭಟ್ಟರದು ಅತ್ಯಂತ ನಿಷ್ಠುರವಾದಿಯ ಜೀವನ ಪಯಣ. ಜೀವನದುದ್ದಕ್ಕೂ ಸಿಹಿಗಿಂತ ಹೆಚ್ಚು ಕಹಿಯನ್ನೇ ಉಂಡು ರಾಜಕೀಯದಲ್ಲಿ ತೀವ್ರ ಏಳು- ಬೀಳುಗಳನ್ನು ಕಂಡವರು ರಾಮ ಭಟ್ಟರು. 1958ರಲ್ಲೇ ಮೊದಲ ಬಾರಿಗೆ ಶಾಸಕರಾಗಿದ್ದ ರಾಮ ಭಟ್ಟರು ಅಂದಿನ ಕಾಲದಲ್ಲಿ ಸಂಘ ಪರಿವಾರದ ಮಟ್ಟಿಗೆ ಏಕಮೇವಾದ್ವಿತೀಯ ನಾಯಕರಾಗಿದ್ದವರು. ತುರ್ತು ಪರಿಸ್ಥಿತಿಯ ಕಾಲದಲ್ಲಿ ಆರೆಸ್ಸೆಸ್ ಮತ್ತು ಜನಸಂಘದ ಕರೆಯಂತೆ, ಕರಾವಳಿ ನೆಲದಲ್ಲಿ ಆಗಿನ ಸರಕಾರದ ನಿಲುವನ್ನು ವಿರೋಧಿಸಿ ಜನರನ್ನು ಸಂಘಟಿಸಿದ್ದರು. ನಿಗೂಢ ಚಟುವಟಿಕೆಗಳಿಂದ ಪೊಲೀಸರ ಕೈಗೆ ಸಿಕ್ಕಿಬಿದ್ದು ಬೆಂಗಳೂರಿನಲ್ಲಿ ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದರು.
ಜಿಲ್ಲೆಯನ್ನು ಶಕ್ತಿಕೇಂದ್ರವಾಗಿಸಿದ್ದ ನಾಯಕ
ಜೈಲುವಾಸದ ಸಂದರ್ಭದಲ್ಲಿ ವಾಜಪೇಯಿ ಮತ್ತು ಆಡ್ವಾಣಿಯವರ ನಿಕಟ ಸಂಪರ್ಕಕ್ಕೆ ಬಂದಿದ್ದ ರಾಮ ಭಟ್ಟರು, ಜೈಲಿನಲ್ಲಿದ್ದಾಗ ಆಡ್ವಾಣಿಯವರಿಗೇ ಕನ್ನಡ ಕಲಿಸಿದ್ದರಂತೆ. ತಾವು ಪುತ್ತೂರಿನಲ್ಲಿದ್ದರೂ, ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ನಿಲುವುಗಳ ಬಗ್ಗೆ ತಮ್ಮದೇ ಆಸ್ಥೆ ವಹಿಸಿದ್ದರು. ತುರ್ತು ಸ್ಥಿತಿಯ ಕಾರಣದಿಂದಲೇ ಕಾಂಗ್ರೆಸ್ ಪಾಲಿಗೆ ಗಟ್ಟಿ ನೆಲವಾಗಿದ್ದ ಕರಾವಳಿಯಲ್ಲಿ ಸಂಘ ಪರಿವಾರದತ್ತ ಜನರನ್ನು ಸೆಳೆಯುವಲ್ಲಿ ರಾಮ ಭಟ್ಟರು ಯಶಸ್ವಿಯಾಗಿದ್ದರು. ಕ್ಯಾಂಪ್ಕೋ ಅಧ್ಯಕ್ಷರಾಗಿ ಸಂಘ ಪರಿವಾರದ ತೆಕ್ಕೆಗೆ ಸಹಕಾರಿ ಸಂಸ್ಥೆಯ ಅಧಿಕಾರವನ್ನು ಕೊಡಿಸಿದ್ದರು. ಅದೇ ಸಂದರ್ಭದಲ್ಲಿ ಪುತ್ತೂರಿನಲ್ಲಿ ವಿವೇಕಾನಂದರ ಹೆಸರಲ್ಲಿ ಶಾಲೆ, ಕಾಲೇಜು ಸ್ಥಾಪಿಸಿ ಶಿಕ್ಷಣ ಸೇವೆಯತ್ತ ಮುಖ ಮಾಡಿದ್ದರು. ಆದರೆ, 1985ರ ಹೊತ್ತಿಗೇ ಸಕ್ರಿಯ ರಾಜಕಾರಣದಿಂದ ದೂರವುಳಿದು ತಮ್ಮ ಗರಡಿಯಲ್ಲಿ ಇತರೇ ನಾಯಕರನ್ನು ಬೆಳೆಸಲು ಮುಂದಾಗಿದ್ದರು. ಪುತ್ತೂರಿನಲ್ಲಿ ಅಣ್ಣಾ ವಿನಯಚಂದ್ರ, ಡಿ.ವಿ. ಸದಾನಂದ ಗೌಡರನ್ನು ತಮ್ಮ ಉತ್ತರಾಧಿಕಾರಿಯಾಗಿ ಬೆಳೆಸಿದರೆ, ಲೋಕಸಭೆಗೆ ಧನಂಜಯ ಕುಮಾರ್ ಅವರನ್ನು ಮುನ್ನೆಲೆಗೆ ತಂದಿದ್ದೇ ರಾಮ ಭಟ್ಟರು.
1992ರಲ್ಲಿ ಆಡ್ವಾಣಿಯವರು ರಾಮ ಮಂದಿರಕ್ಕಾಗಿ ರಥಯಾತ್ರೆ ಕೈಗೊಂಡಾಗ, ಕರಾವಳಿಯಿಂದ ಮತ್ತೆ ಜನರನ್ನು ಹಿಂದುತ್ವದ ನೆಲೆಯಲ್ಲಿ ಬಡಿದೆಬ್ಬಿಸಿ ಕರಸೇವೆಯತ್ತ ಮುಖ ಮಾಡಿಸಿದ್ದರು. ಆದರೆ 1990ರ ನಂತರದಲ್ಲಿ ದಕ್ಷಿಣ ಕನ್ನಡದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ಟರ ಕೇಂದ್ರಿತ ರಾಜಕಾರಣ ಶುರುವಾದ ಬಳಿಕ ರಾಮ ಭಟ್ಟರು ನೇಪಥ್ಯಕ್ಕೆ ಸರಿದಿದ್ದರು. ಸಂಬಂಧದಲ್ಲಿ ಹತ್ತಿರವಾಗಿದ್ದರೂ, ಇವರಿಬ್ಬರ ರಾಜಕೀಯ ಶೈಲಿ, ತಾತ್ವಿಕ ರಾಜಕಾರಣ ತದ್ವಿರುದ್ಧ ಆಗಿರುತ್ತಿತ್ತು. ಹೀಗಾಗಿ ಬಿಜೆಪಿ ಮತ್ತು ಸಂಘ ಪರಿವಾರದ ಆಗುಹೋಗುಗಳ ಬಗೆಗಿನ ನಿರ್ಧಾರಗಳ ಮೇಲೆ ಇವರಿಬ್ಬರೂ ಹಿಡಿತ ಹೊಂದಿದ್ದರು. ಆದರೆ ಇದನ್ನು ಕಲ್ಲಡ್ಕ ಭಟ್ಟರು ಪೂರ್ತಿಯಾಗಿ ಆವರಿಸಿಕೊಂಡ ನಂತರ 2005ರ ಹೊತ್ತಿಗೆ ರಾಮ ಭಟ್ಟರೇ ಸಿಡಿದು ನಿಲ್ಲುವಂತಾಗಿತ್ತು.
ಕಲ್ಲಡ್ಕ ಭಟ್ಟರ ವಿರುದ್ಧ ಸಿಡಿದು ನಿಂತಿದ್ದರು!
2008ರಲ್ಲಿ ತಮ್ಮ ಶಿಷ್ಯೆ ಶಕುಂತಳಾ ಶೆಟ್ಟಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು ರಾಮ ಭಟ್ಟರನ್ನೇ ಮತ್ತೆ ಸಿಟ್ಟಿಗೇಳುವಂತೆ ಮಾಡಿತ್ತು. ಕಲ್ಲಡ್ಕ ಭಟ್ಟರ ಶಕ್ತಿಕೇಂದ್ರದ ಬಗ್ಗೆ ಬಹಿರಂಗ ಹೇಳಿಕೆ ನೀಡಿದ್ದಲ್ಲದೆ, ಬಿಜೆಪಿ ವಿರುದ್ಧವೇ ಸ್ವಾಭಿಮಾನಿ ಬಳಗದ ಹೆಸರಲ್ಲಿ ಹೊಸ ರಾಜಕೀಯ ಪಕ್ಷ ಸ್ಥಾಪಿಸಿದ್ದರು. ಶಕುಂತಳಾ ಶೆಟ್ಟಿಯನ್ನು ಪುತ್ತೂರಿನಲ್ಲಿ ಅಭ್ಯರ್ಥಿಯಾಗಿಸಿ ಬಿಜೆಪಿಗೆ ಸಡ್ಡು ಹೊಡೆದಿದ್ದರು. 2009ರಲ್ಲಿ ಲೋಕಸಭೆ ಚುನಾವಣೆ ಎದುರಾದ ವೇಳೆ ಮತ್ತೆ ರಾಮ ಭಟ್ಟರು ವ್ಯಗ್ರರಾಗಿದ್ದರು. ಲೋಕಸಭೆಗೆ ಕಲ್ಲಡ್ಕ ಪ್ರಭಾಕರ ಭಟ್ಟರು ನಳಿನ್ ಕುಮಾರ್ ಹೆಸರನ್ನು ಪ್ರಸ್ತಾಪಿಸಿದ್ದು ರಾಮ ಭಟ್ಟರನ್ನು ಸಿಟ್ಟಿಗೇಳಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಯಾವುದೇ ತಾಲೂಕು ಸಮಿತಿಯಿಂದಲೂ ನಳಿನ್ ಕುಮಾರ್ ಹೆಸರನ್ನು ಪ್ರಸ್ತಾವಿಸಿಲ್ಲ. ಯಾವುದೇ ಕಡೆಯೂ ಚರ್ಚೆಯೂ ಆಗಿಲ್ಲ. ಹೀಗಿದ್ದರೂ, ಪಕ್ಷದ ತತ್ವದ ವಿರುದ್ಧವಾಗಿ ವ್ಯಕ್ತಿಯನ್ನು ಹೇರುವುದು ತರವಲ್ಲ ಎಂದು ರಾಮ ಭಟ್ಟರು ಹೇಳಿಕೆ ನೀಡಿದ್ದಲ್ಲದೆ, ಲೋಕಸಭೆ ಚುನಾವಣೆಯಲ್ಲಿ ನಳಿನ್ ಕುಮಾರ್ ವಿರುದ್ಧ ಪಕ್ಷೇತರ ಸ್ಪರ್ಧೆಗಳಿದು ರಾಷ್ಟ್ರದ ಗಮನ ಸೆಳೆದಿದ್ದರು.
ಆನಂತರ ಒಂದು ಕಾಲದಲ್ಲಿ ತಮ್ಮ ಗರಡಿಯಲ್ಲೇ ಬೆಳೆದಿದ್ದ ಡಿವಿ ಸದಾನಂದ ಗೌಡರ ವಿರುದ್ಧವೂ ರಾಮ ಭಟ್ಟರು ಸಿಡಿದು ನಿಂತಿದ್ದರು. ಸದಾನಂದ ಗೌಡ ಉಡುಪಿಯಿಂದ ಲೋಕಸಭೆಗೆ ಸ್ಪರ್ಧಿಸಿದಾಗ, ಅಲ್ಲಿಯೂ ಅಭ್ಯರ್ಥಿಯನ್ನು ನಿಲ್ಲಿಸಿ ಪ್ರಚಾರ ನಡೆಸಿದ್ದರು. ಆದರೆ 2014ರಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರ ಕೇಂದ್ರದತ್ತ ಬಂದಾಗ, ಮತ್ತೆ ಬಿಜೆಪಿಯತ್ತ ಒಲವು ತೋರಿದ್ದರು. ದೇಶದ ಹಿತಕ್ಕಾಗಿ ಬಿಜೆಪಿಗೆ ಜನರು ಬೆಂಬಲಿಸಬೇಕೆಂದು ಕರೆ ಕೊಟ್ಟಿದ್ದರು. ಒಂದು ವರ್ಷದ ಹಿಂದೆ ರಾಮ ಭಟ್ಟರು ಅನಾರೋಗ್ಯಕ್ಕೀಡಾದ ವೇಳೆ ಪ್ರಧಾನಿ ಮೋದಿ ಕರೆ ಮಾಡಿ, ಆರೋಗ್ಯ ವಿಚಾರಿಸಿದ್ದು ದೇಶದಲ್ಲಿ ಗಮನ ಸೆಳೆದಿತ್ತು.
ಒಟ್ಟಿನಲ್ಲಿ ರಾಜಕೀಯ ಹಾದಿಯಲ್ಲಿ ತೀವ್ರ ಏಳು- ಬೀಳುಗಳನ್ನು ಕಂಡ ರಾಮಭಟ್ಟರು ತಮ್ಮ ನಿಷ್ಠುರವಾದ, ತತ್ವನಿಷ್ಠ ರಾಜಕಾರಣದಿಂದಾಗಿ ಕರ್ನಾಟಕದ ಬಿಜೆಪಿ ಮಟ್ಟಿಗೆ ಭೀಷ್ಮರಾಗಿ ಗುರುತಿಸಿಕೊಂಡಿದ್ದರು. ಆರೆಸ್ಸೆಸ್ ಗರಡಿಯಲ್ಲಿ ದಕ್ಷಿಣ ಕನ್ನಡವನ್ನು ಸಂಘ ಪರಿವಾರದ ಶಕ್ತಿಕೇಂದ್ರವಾಗಿ ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ರಾಮ ಭಟ್ಟರ ತತ್ವನಿಷ್ಠ ಮತ್ತು ಸೈದ್ಧಾಂತಿಕ ನಿಲುವಿನ ರಾಜಕಾರಣವೇ ಅವರಿಗೆ ಮುಳುವಾಗಿದ್ದು ಅಷ್ಟೇ ಸತ್ಯ. ಒಂದು ಕಾಲದಲ್ಲಿ ತಮ್ಮ ಅಗಾಧ ಪಾಂಡಿತ್ಯ, ಸೈದ್ಧಾಂತಿಕ ನೆಲೆಗಟ್ಟಿನಿಂದಾಗಿ ಪುತ್ತೂರಿನಲ್ಲಿದ್ದೇ ರಾಷ್ಟ್ರ ರಾಜಕಾರಣದಲ್ಲಿ ಥಿಂಕ್ ಟ್ಯಾಂಕ್ ಆಗಿ ಗುರುತಿಸಿದ್ದ ರಾಮ ಭಟ್ಟರು ಇಳಿವಯಸ್ಸಿನಲ್ಲಿ ತಾವೇ ಕಟ್ಟಿದ ಸಂಘ ಪರಿವಾರದ ನಾಯಕರಿಂದ ನೇಪಥ್ಯಕ್ಕೊಳಗಾಗಿದ್ದರು.
Former MLA of Puttur, Urimajalu K Rama Bhat passed away at his residence at Kombettu on December 6. He was 92 and was suffering from old age related illnesses. Bhat was the sincere worker of RSS during his high school education. He had laid the foundation to make Puttur the strong fort of Hindutva.
29-10-24 11:02 pm
HK News Desk
ರೈತರ ಜಮೀನಿಗೆ ವಕ್ಫ್ ನೋಟಿಸ್ ; ಬೇಲಿಯೇ ಎದ್ದು ಹೊಲ...
29-10-24 10:09 pm
Pratap Simha, waqf board: ಮುಸ್ಲಿಮರಿಗೆ ವಕ್ಫ್ ಆ...
29-10-24 02:43 pm
Yediyurappa, Vijayendra, Ramesh Jarkiholi: ವಿ...
28-10-24 07:40 pm
Tumkur selfie, Hamsa: ಸೆಲ್ಫಿ ಕ್ಲಿಕ್ಕಿಸುವಾಗ ಕೆ...
28-10-24 05:46 pm
29-10-24 08:23 pm
HK News Desk
ಕಾಞಂಗಾಡ್ ; ತೈಯ್ಯಂ ಉತ್ಸವಕ್ಕೂ ಮುನ್ನ ಪಟಾಕಿ ದುರಂತ...
29-10-24 12:01 pm
ಕೇರಳದ ಯೂಟ್ಯೂಬರ್ ದಂಪತಿ ಸಾವಿಗೆ ಶರಣು ; ಕೊನೆಯ ವಿ...
28-10-24 08:38 pm
ಇಸ್ರೇಲಿಗೆ ನಮ್ಮ ಸಾಮರ್ಥ್ಯ ತೋರಿಸುತ್ತೇವೆ ಎಂದು ಪೋಸ...
28-10-24 05:56 pm
Cyber fraud, Digital arrest, Modi: "ಡಿಜಿಟಲ್ ಅ...
28-10-24 11:47 am
28-10-24 10:51 pm
Giridhar Shetty, Headline Karnataka, Mangalore
Leopard, pilar, Deralakatte; ದೇರಳಕಟ್ಟೆ ಪ್ರದೇಶ...
28-10-24 03:53 pm
MLA Harish Poonja, B K Harishprasad: ಪುಡಿ ರಾಜ...
28-10-24 01:00 pm
Pejawar Seer, Caste Census: ಪ್ರಜಾಪ್ರಭುತ್ವದಲ್ಲ...
27-10-24 10:37 pm
Ashok Rai Puttur, Mangalore; ನಾನೊಬ್ಬ ಹಿಂದು, ದ...
27-10-24 02:41 pm
29-10-24 01:01 pm
Mangalore Correspondent
Mangalore Murder, Crime, Kateel: ಕಟೀಲು ಬಳಿ ಮನ...
29-10-24 12:38 pm
Mangalore Crime, Drugs: ಪಣಂಬೂರಿನಲ್ಲಿ ಡ್ರಗ್ಸ್...
28-10-24 11:12 pm
Bangalore Crime, Blackmail: ಪತ್ನಿ ಮತ್ತು ಆಕೆಯ...
28-10-24 02:47 pm
Mangalore News, Cyber Fraud: ಮಹಾರಾಷ್ಟ್ರದ ಎಸ್ಐ...
27-10-24 08:57 pm