ಬ್ರೇಕಿಂಗ್ ನ್ಯೂಸ್
19-12-21 08:08 pm HK Desk news ಕರ್ನಾಟಕ
ಬೆಂಗಳೂರು, ಡಿ.19: ಬಿಜೆಪಿ ಅಧಿಕಾರದಲ್ಲಿದ್ದರೂ, ವಿಧಾನ ಪರಿಷತ್ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿರುವುದು ರಾಜ್ಯ ಬಿಜೆಪಿ ಒಳಗೆ ಮತ್ತೆ ಬೇಗುದಿಯ ಕಿಡಿ ಎಬ್ಬಿಸಿದೆ. ಒಂದ್ಕಡೆ ಸಿಎಂ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಮೂರು ತಿಂಗಳು ಕಳೆಯುತ್ತಿದ್ದರೂ, ಇನ್ನೂ ಯಡಿಯೂರಪ್ಪ ಜಾಗವನ್ನು ತುಂಬಲು ಸಾಧ್ಯವಾಗಿಲ್ಲ ಅನ್ನುವ ಮಾತು ಕೇಳಿಬಂದಿದ್ದರೆ, ಸುಲಭದಲ್ಲಿ ಗೆಲ್ಲಬಹುದಾಗಿದ್ದ ಬೆಳಗಾವಿ ಮತ್ತು ಮೈಸೂರಿನಲ್ಲಿ ಸೋಲು ಕಂಡಿದ್ದನ್ನೂ ಮುಖ್ಯಮಂತ್ರಿ ತಲೆಗೇ ಕಟ್ಟುವ ಕಸರತ್ತು ರಾಜ್ಯ ಬಿಜೆಪಿಯಲ್ಲಿ ನಡೆದಿದೆ.
ಒಂದೆಡೆ ರಾಜ್ಯ ಮಟ್ಟದಲ್ಲಿ ಪ್ರಭಾವ -ವರ್ಚಸ್ಸು ಹೊಂದಿಲ್ಲದ ರಾಜ್ಯಾಧ್ಯಕ್ಷರು, ಇನ್ನೊಂದೆಡೆ ಬೆಳಗಾವಿ, ಹುಬ್ಬಳ್ಳಿ-ಧಾರವಾಡದಲ್ಲಿ ತಮ್ಮದೇ ಪ್ರಭಾವ ಹೊಂದಿದ್ದರೂ, ಅದನ್ನು ಗೆಲುವಾಗಿ ಪರಿವರ್ತಿಸಲಾಗದ ಮುಖ್ಯಮಂತ್ರಿ. ಇಬ್ಬರ ಬಗ್ಗೆಯೂ ರಾಜ್ಯ ಬಿಜೆಪಿ ನಾಯಕರಲ್ಲಿ ಒಂದು ರೀತಿಯ ಬೇಗುದಿಯ ಹೊಗೆಯೇಳುವಂತೆ ಮಾಡಿದೆ. ವಿಧಾನ ಪರಿಷತ್ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ 11, ಕಾಂಗ್ರೆಸ್ 11, ಜೆಡಿಎಸ್ 2, ಪಕ್ಷೇತರ ಒಂದು ಸ್ಥಾನ ಗೆದ್ದಿತ್ತು. ಪರಿಷತ್ತಿನಲ್ಲಿ ಆರು ಸ್ಥಾನಗಳನ್ನು ಹೊಂದಿದ್ದ ಬಿಜೆಪಿ 11ಕ್ಕೆ ಏರಿಸಿಕೊಂಡಿದ್ದರೂ, ಖಚಿತ ಗೆಲುವು ಎಂದುಕೊಂಡಿದ್ದ ಬೆಳಗಾವಿ ಮತ್ತು ಮೈಸೂರಿನ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗದ ರೀತಿಯದ್ದು. ತುಮಕೂರಿನಲ್ಲಿ ಗೆಲುವಿನ ಸಾಧ್ಯತೆ ಇದ್ದರೂ, ಅದನ್ನು ಸಾಧಿಸಿಕೊಳ್ಳಲು ಬಿಜೆಪಿ ವಿಫಲವಾಗಿತ್ತು.
ಹಾಗೆ ನೋಡಿದರೆ, ಬೆಳಗಾವಿ – ಚಿಕ್ಕೋಡಿ ಮತಕ್ಷೇತ್ರ ಕಾಂಗ್ರೆಸಿಗಿಂತ ಬಿಜೆಪಿಯೇ ಹೆಚ್ಚು ಬಲಿಷ್ಠವಾಗಿರುವ ಜಿಲ್ಲೆ. 13 ಜನ ಬಿಜೆಪಿ ಶಾಸಕರು, ಇಬ್ಬರು ಸಚಿವರು, ಇಬ್ಬರು ಸಂಸದರು, ರಾಜ್ಯಸಭಾ ಸದಸ್ಯರನ್ನು ಹೊಂದಿದ್ದರೂ ಬಿಜೆಪಿ ಅಭ್ಯರ್ಥಿ ಪರ ಗೆಲ್ಲುವಷ್ಟು ಮತಗಳಿದ್ದರೂ, ಅಲ್ಲಿ ಸೋತಿದ್ದನ್ನು ಹೊರಗಿನವರು ನಂಬುವುದಕ್ಕೆ ತಯಾರಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಿರಾಯಾಸವಾಗಿ ಇಬ್ಬರು ಸದಸ್ಯರ ಆಯ್ಕೆಗೆ ಅವಕಾಶ ಇದ್ದರೆ, ಪಕ್ಷೇತರನಾಗಿ ಸ್ಪರ್ಧಿಸಿದ ಜಾರಕಿಹೊಳಿ ಕುಟುಂಬದ ವ್ಯಕ್ತಿ ತನ್ನ ಪ್ರಭಾವದಿಂದಲೇ ಬಿಜೆಪಿಯ ಮತಗಳನ್ನೇ ಸೆಳೆದುಕೊಂಡು ಗೆದ್ದಿದ್ದು ಬಿಜೆಪಿಗೆ ದೊಡ್ಡ ಶಾಕ್. ಬಿಜೆಪಿ ಮತದಾರರು ತಮ್ಮ ಅಭ್ಯರ್ಥಿಯಾಗಿದ್ದ ಪಕ್ಷದ ಹಿರಿಯ ಮುಖಂಡ ಮಹಾಂತೇಶ ಕವಟಗಿಮಠ ಬದಲು ಮಾಜಿ ಸಚಿವ ರಮೇಶ್ ಜಾರಕಿಹೊಳಿಯ ತಮ್ಮ ಲಖನ್ ಪರವಾಗಿ ಮತ ಚಲಾಯಿಸಿದ್ದು ಅಲ್ಲಿನ ವಾಸ್ತವ ಸ್ಥಿತಿಯನ್ನು ತೆರೆದಿಟ್ಟಿದೆ.
ಮೈಸೂರಿನಲ್ಲಿಯೂ ಅದೇ ರೀತಿಯ ಸ್ಥಿತಿ ಇತ್ತು. ಮೈಸೂರು- ಚಾಮರಾಜನಗರದಲ್ಲಿ ಬಿಜೆಪಿ ಸಂಸದ, ಶಾಸಕರಿದ್ದರೂ ಪಕ್ಷದ ಅಭ್ಯರ್ಥಿ ರಘು ಕೌಟಿಲ್ಯ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ರಾಜ್ಯ ನಾಯಕರಿಗೇ ನಂಬಲಾಗದ ಸೋಲು. ದ್ವಿಸದಸ್ಯ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದ್ದರೂ, ಪ್ರಭಾವದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳದ್ದೇ ಸ್ಪರ್ಧೆ ಇತ್ತು. ಆದರೆ ಎರಡನೇ ಅಭ್ಯರ್ಥಿಯಾಗಿ ಜೆಡಿಎಸ್ ಅಭ್ಯರ್ಥಿ ಮಂಜೇಗೌಡ ಗೆದ್ದಿದ್ದು ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಆಗಿತ್ತು. ಚುನಾವಣೆ ಸಂದರ್ಭದಲ್ಲಿ ಅಬ್ಬರಿಸುತ್ತಿದ್ದ ನಾಯಕರು ಕೇವಲ ಮೈಕ್ ಪ್ರಚಾರಕ್ಕೆ ಸೀಮಿತರಾಗಿ, ಮತದಾರರನ್ನು ಸೆಳೆಯುವಲ್ಲಿ ಸೋತಿದ್ದಾರೆ ಅನ್ನುವುದನ್ನು ಇವೆರಡೂ ಕಡೆಯ ಫಲಿತಾಂಶ ತೋರಿಸಿದೆ. ಮೈಸೂರಿನಲ್ಲಿ ಅಭ್ಯರ್ಥಿ ರಘು ಕೌಟಿಲ್ಯ ಬಗ್ಗೆ ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ ಅಸಮಾಧಾನ ಹೊಂದಿದ್ದರೂ, ಕೊನೆಗಳಿಗೆಯಲ್ಲಿ ಅದನ್ನು ಬಗೆಹರಿಸುವ ನಾಟಕ ನಡೆದರೂ, ಅದು ಪರಿಣಾಮ ಬೀರಲಿಲ್ಲ. ಮೊದಲ ಪ್ರಾಶಸ್ತ್ಯದಲ್ಲಿ ಜೆಡಿಎಸ್ (1780) ಅಭ್ಯರ್ಥಿಗಿಂತ ಹೆಚ್ಚಿನ ಮತಗಳನ್ನು ಬಿಜೆಪಿ (1919) ಅಭ್ಯರ್ಥಿಯೇ ಪಡೆದಿದ್ದರೂ, ದ್ವಿತೀಯ ಪ್ರಾಶಸ್ತ್ಯದ ಎಣಿಕೆಯಲ್ಲಿ ಮತ ಕಡಿಮೆಯಾಗಿದ್ದು ತೆನೆ ಹೊತ್ತವರ ಪಕ್ಷದ ಮಂಜೇಗೌಡರನ್ನು ವಿಜಯಿ ಎಂದು ಘೋಷಿಸಲಾಗಿತ್ತು.
ಮತ್ತೊಂದು ಕಡೆ ಸಿಎಂ ಬೊಮ್ಮಾಯಿ ಮತ್ತು ಮಾಜಿ ಸಿಎಂ ಜಗದೀಶ ಶೆಟ್ಟರ್ ಪ್ರಭಾವ ಇರುವ ಧಾರವಾಡದಲ್ಲಿ ಬಿಜೆಪಿಗೆ ಕಾಂಗ್ರೆಸಿಗಿಂತ ಕಡಿಮೆ ಮತ ಲಭಿಸಿದ್ದು, ಬೆಂಗಳೂರಿನಲ್ಲೇ ಇದ್ದು ರಾಜಕಾರಣ ನಡೆಸುವ ಮುಸ್ಲಿಮ್ ಅಭ್ಯರ್ಥಿ ಸಲೀಂ ಅಹ್ಮದ್, ಬಿಜೆಪಿ ಪ್ರಭಾವಿಗಳ ಮುಂದೆ ಹೆಚ್ಚಿನ ಮತ ಗಳಿಸಿದ್ದು ರಾಜ್ಯ ಬಿಜೆಪಿ ನಾಯಕರು ಬೊಟ್ಟು ಮಾಡಿ ತೋರಿಸುವಂತೆ ಮಾಡಿದೆ. ಇನ್ನೊಂದ್ಕಡೆ, ಸಿಎಂ ಮತ್ತು ರಾಜ್ಯಾಧ್ಯಕ್ಷ ಪಟ್ಟದ ರೇಸಿನಲ್ಲಿ ಮುಂಚೂಣಿಯಲ್ಲಿರುವ ಸಿ.ಟಿ.ರವಿಯ ಊರು ಚಿಕ್ಕಮಗಳೂರಿನಲ್ಲಿ ಬಿಜೆಪಿ ಕೇವಲ ಆರು ಮತಗಳಿಂದ ಗೆಲುವು ಪಡೆದಿದ್ದು ಕೂಡ ರಾಜ್ಯ ಬಿಜೆಪಿ ನಾಯಕರ ವರ್ಚಸ್ಸಿನ ಬಗ್ಗೆ ಪ್ರಶ್ನೆ ಏಳುವಂತೆ ಮಾಡಿದೆ. ಹೀಗಾಗಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯ ಹಿನ್ನಡೆ ಬಗ್ಗೆ ಚರ್ಚೆ ನಡೆಸುವುದಕ್ಕೂ ನಾಯಕರು ತಯಾರಿಲ್ಲ. ಸದ್ಯಕ್ಕೆ ಅಧಿವೇಶನ ಇದ್ದರೂ, ಇವೆಲ್ಲದರ ಸೋಲಿನ ಹೊಣೆಯನ್ನು ಮುಖ್ಯಮಂತ್ರಿ ಬೊಮ್ಮಾಯಿ ತಲೆಗೆ ಕಟ್ಟಲು ರಾಜ್ಯ ಬಿಜೆಪಿಯ ಮುಂಚೂಣಿ ನಾಯಕರು ಮುಂದಾಗಿದ್ದಾರೆ.
ಸ್ಥಳೀಯ ನಾಯಕರ ನಡುವಿನ ಸಮನ್ವಯ ಕೊರತೆ, ರಾಜ್ಯದ ಮುಂಚೂಣಿ ನಾಯಕರು ಮತ್ತು ತಳಮಟ್ಟದ ಮುಖಂಡರನ್ನು ಜೊತೆಗೆ ಒಯ್ಯಲಾಗದ ರಾಜ್ಯ ಬಿಜೆಪಿ ಸಾರಥ್ಯ ವಹಿಸಿದ ವ್ಯಕ್ತಿ ಮತ್ತು ಮುಖ್ಯಮಂತ್ರಿಯ ಹೊಣೆ ಹೊತ್ತವರ ನಡುವಿನ ಹೊಯ್ದಾಟ ಮತ್ತು ವೈಫಲ್ಯದಿಂದಾಗಿ ಪಕ್ಷಕ್ಕೆ ಹಿನ್ನಡೆಯಾಗಿದೆ ಅನ್ನುವುದನ್ನು ಹಿರಿಯ ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಹೀಗಾಗಿ 25 ಸೀಟುಗಳಲ್ಲಿ 11 ಕಡೆ ಗೆದ್ದು ಹಿಂದಿಗಿಂತ ಹೆಚ್ಚು ಗಳಿಕೆ ಮಾಡಿದರೂ, ಬಿಜೆಪಿ ಇದನ್ನು ಸಂಭ್ರಮಿಸುವ ಸ್ಥಿತಿಯಲ್ಲಿ ಇಲ್ಲ. ಹೇಳಿಕೊಂಡು ತಿರುಗಾಡುವುದಕ್ಕೂ ಸಾಧ್ಯವಾಗದ ಸ್ಥಿತಿಯಲ್ಲಿದೆ. ಈ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿ ನಾಯಕರ ವರ್ತನೆ ನೋಡಿದರೆ ಬಿಜೆಪಿಯದ್ದು ಅಧಿಕಾರ ಇದ್ದರೂ, ಮನೆಯೊಂದು ಮೂರು ಬಾಗಿಲು ಅನ್ನುವ ಸ್ಥಿತಿಗೆ ತಲುಪಿದೆ ಅನ್ನುವುದನ್ನು ತೋರಿಸುತ್ತಿದೆ.
ರಾಜ್ಯ ಬಿಜೆಪಿ ಒಳಗೇ ಒಂದ್ಕಡೆ ರಾಜ್ಯಾಧ್ಯಕ್ಷರ ಬದಲಾವಣೆ ಎಂಬ ಮಾತನ್ನು ಒಂದಷ್ಟು ನಾಯಕರು ಹೇಳಿಕೊಂಡು ತಿರುಗಾಡಿದರೆ, ಮತ್ತೊಂದಷ್ಟು ಮಂದಿ ಮುಖ್ಯಮಂತ್ರಿ ಬದಲಾವಣೆ ಬಗ್ಗೆ ಗುಸು ಗುಸು ಹರಿಯಬಿಡುತ್ತಿದ್ದಾರೆ. ಸದ್ಯಕ್ಕೆ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಪರವಾಗಿ ಒಂದು ಪ್ರಬಲ ಬಣ ಇದ್ದರೆ, ತೋರಿಕೆಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಪರ ಎನ್ನಲಾಗುವ ಇನ್ನೊಂದು ಬಣ ಇದೆ. ನಡುವೆ ತಟಸ್ಥರಾಗಿರುವ ಮತ್ತೊಂದು ಬಣವೂ ಇದೆ. ಸಿಎಂ ಬೊಮ್ಮಾಯಿ ಮೇಲ್ನೋಟಕ್ಕೆ ಯಡಿಯೂರಪ್ಪ ಪರ ಎಂದಿದ್ದರೂ, ತಟಸ್ಥ ಬಣದಲ್ಲಿ ಗುರುತಿಸಿಕೊಂಡಿದ್ದಾರೆ. ರಾಜ್ಯಾಧ್ಯಕ್ಷ ಮತ್ತು ರಾಜ್ಯ ಬಿಜೆಪಿಯ ಪದಾಧಿಕಾರಿಗಳಲ್ಲಿ ಒಂದಷ್ಟು ಮಂದಿ ಬಿ.ಎಲ್.ಸಂತೋಷ್ ಪರ ಇದ್ದರೆ, ರಾಜ್ಯದಲ್ಲಿ ಪ್ರಭಾವಿಯಾಗಿರುವ ಯಡಿಯೂರಪ್ಪ ಬಣ ವಿರೋಧಿಯಾಗಿ ನಿಂತಿದೆ. ನಡುವೆ ತಟಸ್ಥರು ಅತ್ತವೂ ಅಲ್ಲದ, ಇತ್ತವೂ ಅಲ್ಲದ ಪಕ್ಷ ಹೇಳಿದಂತೆ ಅನ್ನುವ ನೆಲೆಯಲ್ಲಿದ್ದಾರೆ.
ಹೀಗಾಗಿ ಕಳೆದ ಬಾರಿ ಹಾನಗಲ್ ಸೋಲು ಸಿಎಂ ಬೊಮ್ಮಾಯಿ ಹೆಸರಿಗೆ ಕಳಂಕ ಹತ್ತಿಸಿದ್ದರೆ, ಈಗ ಬೆಳಗಾವಿ ಮತ್ತು ಮೈಸೂರಿನ ಸೋಲನ್ನೂ ಅವರ ಹಣೆಗೇ ಕಟ್ಟುವ ಕೆಲಸ ಒಳಗಿಂದೊಳಗೇ ನಡೆಯುತ್ತಿದೆ. ಆಮೂಲಕ ವಿಫಲ ಮುಖ್ಯಮಂತ್ರಿ ಎಂದು ಬಿಂಬಿಸಲು ವಿರೋಧಿ ಪಾಳಯ ಹೊರಟಂತಿದೆ. ಈ ರೀತಿಯ ದಾಳ ಬೀಸುವ ರಾಜಕಾರಣದಿಂದಾಗಿ ರಾಜ್ಯ ಬಿಜೆಪಿ ಅನ್ನುವುದು ಮೂರು ಕಡೆಯಿಂದ ಬೀಸುವ ಗಾಳಿಯ ಮಧ್ಯೆ ಸಿಕ್ಕುಬಿಟ್ಟಿದೆ. ಈ ದೋಣಿಯಾಟದಲ್ಲಿ ಯಡಿಯೂರಪ್ಪ ಬಣ ದಡ ಮುಟ್ಟುತ್ತೋ, ಬಿ.ಎಲ್.ಸಂತೋಷ್ ಬಣ ತೀರ ತಲುಪುತ್ತೋ ಅನ್ನುವುದಷ್ಟೇ ಕುತೂಹಲ.
Belagavi and Mysuru MLC election result is a matter of concern blame on CM Bommai. Also Former Chief Minister and BJP leader B.S. Yediyurappa has expressed concern about the defeat of the party candidate in Belagavi in the election to the Karnataka Legislative Council.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 10:11 pm
HK News Desk
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
16-09-25 07:48 pm
Mangalore Correspondent
Ex IPS Kempaiah, Professor Umeshchandra, Mang...
16-09-25 07:02 pm
Mangalore BJP Protest, UT khader, Red Stone:...
16-09-25 06:51 pm
UT Khader, Mangalore, Ullal: ಉಳ್ಳಾಲ ಕ್ಷೇತ್ರದಲ...
16-09-25 06:06 pm
ಕೆಂಪು ಕಲ್ಲು ನಿಯಮ ಸರಳೀಕರಣಕ್ಕೆ ಸಂಪುಟದಲ್ಲಿ ಒಪ್ಪಿ...
16-09-25 05:12 pm
16-09-25 10:40 pm
HK News Desk
Bidar crime: ಏಳು ವರ್ಷದ ಬಾಲಕಿಯನ್ನ ಮೂರನೇ ಮಹಡಿಯಿ...
16-09-25 07:12 pm
Bangalore Police, Inspector Suspend, Crime, D...
15-09-25 10:47 pm
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am