ಆಕ್ಷೇಪಿಸಿ ಪತ್ರ ಬರೆದಿದ್ದ ನಾಯಕರನ್ನು ಕರೆದು ಸೋನಿಯಾ ಚರ್ಚೆ, ಅಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ಇಂಗಿತ

19-12-20 06:05 pm       Headline Karnataka News Network   ದೇಶ - ವಿದೇಶ

ಪಕ್ಷ ಸಂಘಟನೆ ವಿಚಾರದಲ್ಲಿ ಆಕ್ಷೇಪಿಸಿ ಪತ್ರ ಬರೆದಿದ್ದ ನಾಯಕರನ್ನು ಕರೆದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ನವದೆಹಲಿ, ಡಿ.20: ಪಕ್ಷದ ನಾಯಕತ್ವ ಮತ್ತು ಪಕ್ಷ ಸಂಘಟನೆ ವಿಚಾರದಲ್ಲಿ ಆಕ್ಷೇಪಿಸಿ ಪತ್ರ ಬರೆದಿದ್ದ ನಾಯಕರನ್ನು ಕರೆದು ಕಾಂಗ್ರೆಸ್ ಅಧ್ಯಕ್ಷ ಸೋನಿಯಾ ಗಾಂಧಿ ಮಹತ್ವದ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಪಕ್ಷ ಪ್ರತೀ ಚುನಾವಣೆಯಲ್ಲಿ ನೆಲೆ ಕಳಕೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸೋನಿಯಾ ಗಾಂಧಿ, ಪಕ್ಷದ ಮರು ಸಂಘಟನೆಗಾಗಿ ನಾಯಕರ ಅಹವಾಲು ಕೇಳಿದ್ದಾರೆ. ಅಲ್ಲದೆ, ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಶೀಘ್ರದಲ್ಲೇ ಚುನಾವಣೆ ನಡೆಸುವುದಾಗಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ದೇಶದಲ್ಲಿ ಕೋವಿಡ್ ನಿರ್ಬಂಧ ವಿಧಿಸಿದ ಬಳಿಕ ಸೋನಿಯಾ ಗಾಂಧಿ ಯಾರ ಭೇಟಿಯನ್ನೂ ಮಾಡುತ್ತಿರಲಿಲ್ಲ. ನಿರ್ಬಂಧ ಸಡಿಲಗೊಂಡ ಬಳಿಕ ಪಕ್ಷದ ನಾಯಕರನ್ನು ಖುದ್ದಾಗಿ ಭೇಟಿಯಾಗುತ್ತಿರುವುದು ಇದೇ ಮೊದಲು. ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ವಿಚಾರದಲ್ಲಿ ಪ್ರಮುಖ ನಾಯಕರಾದ ಕಪಿಲ್ ಸಿಬಲ್, ಗುಲಾಂ ನಬಿ ಆಜಾದ್, ಶಶಿ ತರೂರ್ ಸೇರಿದಂತೆ 40ಕ್ಕೂ ಹೆಚ್ಚು ಮಂದಿ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಅವರಲ್ಲಿ ಒಂದಷ್ಟು ಮಂದಿಯನ್ನು ಕರೆದು ಸಮಾಧಾನಿಸುವ ಪ್ರಯತ್ನ ಮಾಡಿದ್ದಾರೆ.

ಇಂದಿನ ಸಭೆಯಲ್ಲಿ ಗುಲಾಂ ನಬಿ ಆಜಾದ್, ಆನಂದ್ ಶರ್ಮಾ, ಪ್ರಥ್ವಿರಾಜ್ ಚೌಹಾಣ್, ಭೂಪಿಂದರ್ ಸಿಂಗ್ ಹೂಡಾ, ಸಂಸದರಾದ ಮನೀಶ್ ತಿವಾರ್, ವಿವೇಕ್ ತಂಖಾ, ಶಶಿ ತರೂರ್, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್, ಹಿರಿಯ ನಾಯಕ ಚಿದಂಬರಂ ಪಾಲ್ಗೊಂಡಿದ್ದರು. ಅಲ್ಲದೆ, ರಾಹುಲ್ ಗಾಂಧಿ ಮತ್ತು ಸೋನಿಯಾ ಆಪ್ತರು ಸಭೆಯಲ್ಲಿ ಭಾಗಿಯಾಗಿದ್ದಾರೆ.

ಮುಂದಿನ ದಿನಗಳಲ್ಲಿ ಇತರ ನಾಯಕರನ್ನೂ ಭೇಟಿಯಾಗಿ ಪಕ್ಷದ ಮರು ಸಂಘಟನೆ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.