ಕೈಲಾಸದ ನಿತ್ಯಾನಂದನಿಗೆ ಜೀವ ಬೆದರಿಕೆಯಂತೆ ; ವಿಡಿಯೋ ಹೇಳಿಕೆ

21-12-20 03:49 pm       Headline Karnataka News Network   ದೇಶ - ವಿದೇಶ

ಭಾರತಕ್ಕೆ ತಾನು ಹಿಂದಿರುಗದ್ದಕ್ಕೆ ಜೀವ ಬೆದರಿಕೆ ಬರುತ್ತಿದೆ. ಭಾರತದಲ್ಲಿದ್ದಾಗ ನನ್ನ ವಿರುದ್ಧ ಹಲವರು ಬೆದರಿಕೆ ಹಾಕಿದ್ದರು ಎಂದು ನಿತ್ಯಾನಂದ ಹೇಳಿಕೊಂಡಿದ್ದಾನೆ.

ನವದೆಹಲಿ, ಡಿಸೆಂಬರ್ 21: ಭಾರತದಿಂದ ತಲೆಮರೆಸಿಕೊಂಡು ನಾಪತ್ತೆಯಾಗಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ, ತಾನು ಭಾರತಕ್ಕೆ ಹಿಂದಿರುಗದೇ ಇರುವುದಕ್ಕೆ ಜೀವ ಬೆದರಿಕೆ ಬರುತ್ತಿರುವುದಾಗಿ ಹೇಳಿಕೆ ನೀಡಿದ್ದಾನೆ. 

ಈ ಕುರಿತು ವಿಡಿಯೋ ಮೂಲಕ ಹೇಳಿಕೆ ನೀಡಿರುವ ನಿತ್ಯಾನಂದ, ಭಾರತಕ್ಕೆ ತಾನು ಹಿಂದಿರುಗದ್ದಕ್ಕೆ ಜೀವ ಬೆದರಿಕೆ ಬರುತ್ತಿದೆ. ಭಾರತದಲ್ಲಿದ್ದಾಗ ನನ್ನ ವಿರುದ್ಧ ಹಲವರು ಬೆದರಿಕೆ ಹಾಕಿದ್ದರು. ಹತ್ಯೆ ಮಾಡುವ ಪ್ರಯತ್ನಗಳೂ ನಡೆದಿದ್ದವು. ಹೀಗಾಗಿ ಭಾರತವನ್ನು ತೊರೆಯಬೇಕಾಯಿತು ಎಂದು ಹೇಳಿಕೊಂಡಿದ್ದಾರೆ. ಇಷ್ಟಲ್ಲದೇ ತಾನು ಸತ್ತ ನಂತರ ತನ್ನ ಆಸ್ತಿಪಾಸ್ತಿ ಎಲ್ಲವೂ ಭಾರತಕ್ಕೇ ಸೇರುವುದಾಗಿ ತಿಳಿಸಿದ್ದು, ಹಿಂದುತ್ವವನ್ನು ಕಾಪಾಡಲು ಏನು ಬೇಕಾದರೂ ಮಾಡಲು ಸಿದ್ಧ ಎಂದು ಹೇಳಿಕೊಂಡಿದ್ದಾನೆ.

ವಾರದ ಹಿಂದಷ್ಟೆ ನಿತ್ಯಾನಂದ, ಆಸ್ಟ್ರೇಲಿಯಾದಿಂದ ತನ್ನ ಒಡೆತನದ "ಕೈಲಾಸ" ರಾಷ್ಟ್ರಕ್ಕೆ ಉಚಿತ ವಿಮಾನ ಸೇವೆ ಆರಂಭಿಸಿದ್ದಾಗಿ ಹೇಳಿದ್ದ. ಅಲ್ಲದೆ ತನ್ನ ದೇಶಕ್ಕೆ ಬರಲು ವೀಸಾ ಅರ್ಜಿ ಸಲ್ಲಿಸುವಂತೆ ಭಕ್ತರಲ್ಲಿ ಮನವಿಯನ್ನೂ ಮಾಡಿದ್ದ. ಬೆಂಗಳೂರಿನ ಬಿಡದಿಯ ಮಠದಲ್ಲಿದ್ದಾಗ ಎರಡು ವರ್ಷಗಳ ಹಿಂದೆ ನಿತ್ಯಾನಂದ ವಿರುದ್ಧ ಅತ್ಯಾಚಾರ ಆರೋಪ ಕೇಳಿಬಂದಿತ್ತು. ಬಳಿಕ ದಿಢೀರ್ ಭಾರತದಿಂದ ತಲೆಮರೆಸಿಕೊಂಡು ಪರಾರಿಯಾಗಿದ್ದ. ಇದೀಗ ದಕ್ಷಿಣ ಅಮೆರಿಕದ ಈಕ್ವೆಡಾರ್ ದೇಶದ ಕರಾವಳಿಯ ಒಂದು ಸಣ್ಣ ದ್ವೀಪದಲ್ಲಿ ತನ್ನ ಅನುಯಾಯಿಗಳೊಂದಿಗೆ ನೆಲೆಸಿದ್ದಾನೆ ಎನ್ನಲಾಗುತ್ತಿದೆ. ಅಲ್ಲಿಗೆ ಕೈಲಾಸ ಎಂದು ಹೆಸರಿಟ್ಟಿದ್ದು ಸ್ವಂತ ಬ್ಯಾಂಕ್ ಕೂಡ ಪ್ರಾರಂಭಿಸಿ, ಅದಕ್ಕೆ "ರಿಸರ್ವ್ ಬ್ಯಾಂಕ್ ಆಫ್ ಕೈಲಾಸ" ಎಂಬ ಹೆಸರನ್ನಿಟ್ಟ ಸುದ್ದಿಯಾಗಿದ್ದ. ಇದೀಗ ತನಗೆ ಭಾರತದಿಂದ ಜೀವ ಬೆದರಿಕೆ ಬರುತ್ತಿದೆ ಎಂದು ವಿಡಿಯೋ ಬಿಡುಗಡೆ ಮಾಡಿದ್ದಾರೆ.

Fugitive godman and rape accused Nithyananda in a video claimed assassination threats for not returning to India. He said this in a new video that has recently surfaced.