ಕೇರಳ ಪಾಲಿಟಿಕ್ಸ್ : ಅಧಿಕಾರ ಪಲ್ಲಟಕ್ಕೆ ಮುಸ್ಲಿಂ - ಕ್ರಿಸ್ತಿಯನ್ನರೇ ನಿರ್ಣಾಯಕ ; ಧರ್ಮಾಧರಿತ ಧ್ರುವೀಕರಣ, ಬಿಜೆಪಿಗೆ ನಾಲ್ಕು ಸೀಟು, ಯುಡಿಎಫ್ ಹೆಚ್ಚು! ಕಮ್ಯುನಿಸ್ಟ್ ಮತ ವಿಭಜನೆಯಲ್ಲೇ ಗೆಲುವು ! 

11-04-26 09:05 pm       Giridhar Shetty   ದೇಶ - ವಿದೇಶ

ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಯುಡಿಎಫ್ ಅಥವಾ ಎಲ್ ಡಿಎಫ್ ಅಧಿಕಾರಕ್ಕೆ ಬರುವುದು ವಾಡಿಕೆಯಾಗಿತ್ತು. ಕಳೆದ ಬಾರಿ ಮಾತ್ರ ಈ ವಾಡಿಕೆಯ ಮಾತಿಗೆ ಅಪವಾದ ಎನ್ನುವಂತೆ ಎಡರಂಗ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು.

ಕಾಸರಗೋಡು, ಎಪ್ರಿಲ್ 11: ಕೇರಳದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಯುಡಿಎಫ್ ಅಥವಾ ಎಲ್ ಡಿಎಫ್ ಅಧಿಕಾರಕ್ಕೆ ಬರುವುದು ವಾಡಿಕೆಯಾಗಿತ್ತು. ಕಳೆದ ಬಾರಿ ಮಾತ್ರ ಈ ವಾಡಿಕೆಯ ಮಾತಿಗೆ ಅಪವಾದ ಎನ್ನುವಂತೆ ಎಡರಂಗ ಸತತ ಎರಡನೇ ಬಾರಿಗೆ ಅಧಿಕಾರ ಹಿಡಿದಿತ್ತು. ಈ ಬಾರಿ ಯಾರು ಅಧಿಕಾರಕ್ಕೆ ಬರುತ್ತಾರೆ ಎಂಬುದು ಸದ್ಯಕ್ಕೆ ಯಕ್ಷಪ್ರಶ್ನೆ. ಚುನಾವಣೆ ಮುಗಿದರೂ ಯಾರಿಗೆ ಜನಮತ ಎನ್ನುವುದಕ್ಕೆ ಮೇ 4ಕ್ಕೆ ಕಾಯಲೇಬೇಕು.

ಪ್ರತಿ ಬಾರಿ ಅಧಿಕಾರ ಬದಲಾವಣೆಯ ಸರದಿ ಬರುವುದು ಕೇರಳದಲ್ಲಿ ಪ್ರಭಾವಿಯಾಗಿರುವ ಅಲ್ಪಸಂಖ್ಯಾತ ಕ್ರಿಸ್ತಿಯನ್ ಮತ್ತು ಮುಸ್ಲಿಮರ ಮತಗಳಿಂದ ಅನ್ನುವುದು ಅರಗಿಸಿಕೊಳ್ಳಲಾಗದ ಸತ್ಯ. ಮೈನಾರಿಟಿ ಜನ ಯಾರ ಪರ ನಿಲ್ಲುತ್ತಾರೆ ಅವರು ಗೆಲ್ಲುತ್ತಾರೆಂಬ ನಂಬಿಕೆ ಇದೆ. ಆದರೆ ಈ ಬಾರಿಯೂ ಅದೇ ಮಾತು ಸತ್ಯವಾಗುತ್ತದೆ ಎನ್ನುವ ನಂಬಿಕೆ ಇಲ್ಲ. ಯಾಕಂದ್ರೆ, ಅಲ್ಪಸಂಖ್ಯಾತರಲ್ಲಿಯೂ ಮತ ಧ್ರುವೀಕರಣ ಆಗಿರುವುದು ಹೊಸ ಬೆಳವಣಿಗೆ. ಮುಸ್ಲಿಮರನ್ನು ಪ್ರತಿನಿಧಿಸುವ ಲೀಗ್ ಹಿಂದಿನಿಂದಲೂ ಯುಡಿಎಫ್ ಜೊತೆಗಿದ್ದರೂ ಕೆಲವೊಮ್ಮೆ ಫಲಿತಾಂಶ ಬದಲಾಗುತ್ತಿತ್ತು. ಮಧ್ಯ ಕೇರಳದ ಕ್ರಿಸ್ತಿಯನ್ ಬಾಹುಳ್ಯ ಪ್ರದೇಶಗಳು ಮತ್ತು ಉತ್ತರ ಕೇರಳದ ಮುಸ್ಲಿಂ ಬಾಹುಳ್ಯದ ಮಲಬಾರ್ ಪ್ರದೇಶಗಳು ಅಧಿಕಾರ ಕೇಂದ್ರವನ್ನು ನಿರ್ಧರಿಸುವಷ್ಟರ ಮಟ್ಟಿಗೆ ಒಂದೇ ಪ್ರಕಾರದಲ್ಲಿ ಸೀಟುಗಳು ಬುಟ್ಟಿಗೆ ಬೀಳುತ್ತಿದ್ದವು.

ಹಾಗಂತ, ಈ ಬಾರಿಯೂ ಅದೇ ರೀತಿಯ ಧ್ರುವೀಕರಣ ಆಗುತ್ತದೆ ಎನ್ನುವುದಕ್ಕೆ ಖಾತ್ರಿಯಿಲ್ಲ. ಇಡೀ ಕೇರಳದಲ್ಲಿ ಹಿಂದುಗಳು ಬಹುಸಂಖ್ಯಾತರಿದ್ದರೂ ಅಧಿಕಾರವನ್ನು ನಿರ್ಧರಿಸುವ ಮತಗಳು ಅಲ್ಪಸಂಖ್ಯಾತರದ್ದಾಗಿತ್ತು. ಈ ಸಲವೂ ಬಹುತೇಕ ಅದೇ ಆಗಲಿದೆ. ಜೊತೆಗೆ, ಎಡ ಮತ್ತು ಯುಡಿಎಫ್ ಕೂಟದ ಆಡಳಿತಗಳನ್ನು ಅನುಭವಿಸಿರುವ ಕ್ರಿಸ್ತಿಯನ್ನರು ಬದಲಾವಣೆ ಬಯಸುತ್ತಾರೆ ಎನ್ನುವ ಸುದ್ದಿ ಕೆಲವು ಕಡೆ ಇತ್ತು. ಎನ್ ಡಿಎ ಕೂಟದ ಪರವಾಗಿ ಪಿಸಿ ಜಾರ್ಜ್, ಶಾನ್ ಜಾರ್ಜ್ ಅವರಂಥ ಕ್ರಿಸ್ತಿಯನ್ ನಾಯಕರು ಮಧ್ಯ ಕೇರಳದಲ್ಲಿ ಸ್ಪರ್ಧೆಗಿಳಿದಿರುವುದು ಜನ ಸಮುದಾಯದ ವಾಲುವಿಕೆಯನ್ನು ತೋರಿಸಿತ್ತು. ಇದು ಫಲಿತಾಂಶದಲ್ಲಿ ಬದಲಾವಣೆ ಕಾಣಿಸದಿದ್ದರೂ ಒಂದೇ ಮೈತ್ರಿಕೂಟಕ್ಕೆ ಗೆಲುವು ತರಲಿಕ್ಕಿಲ್ಲ ಎನ್ನುವ ವಿಶ್ಲೇಷಣೆ ನಡೆದಿದೆ. 

ಇದಲ್ಲದೆ, ಎಡರಂಗದಲ್ಲಿಯೂ ಸಿಪಿಐ ಮತ್ತು ಸಿಪಿಎಂ ನಡುವೆ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಜಟಾಪಟಿ ಇತ್ತು. ಗೆಲುವಿನ ವಿಚಾರದಲ್ಲಿ ಕಾರ್ಯಕರ್ತರ ಸಣ್ಣ ಅಸಮಾಧಾನವೂ ಕೊಡುಗೆ ನೀಡುತ್ತದೆ. ಉತ್ತರ ಕೇರಳದ ಲೀಗ್ ಹಿಡಿತದ ಕ್ಷೇತ್ರಗಳಲ್ಲಿ ಧರ್ಮಾಧರಿತ ಮತ ಧ್ರುವೀಕರಣ ನಡೆದಿದೆ. ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ಉತ್ತರ ಕೇರಳದ ಕ್ಷೇತ್ರಗಳನ್ನು ಲೀಗ್ ಪ್ರಾಬಲ್ಯ ಸಾಧಿಸಿದ್ದು, ಅಲ್ಲಿನ ಹಿಂದುಗಳು ಕಮ್ಯುನಿಸ್ಟ್ ಬಿಟ್ಟು ಬಿಜೆಪಿಯತ್ತ ವಾಲುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇಂತಹ ಕ್ಷೇತ್ರಗಳಲ್ಲಿ ಈವರೆಗೂ ಎಡರಂಗ- ಯುಡಿಎಫ್ ನಡುವೆ ಮಾತ್ರ ಇದ್ದ ಪೈಪೋಟಿಗೆ ಬಿಜೆಪಿ ಎಂಟ್ರಿಯಾಗಿದೆ. ಹೀಗಾಗಿ ಎಡರಂಗ ಪ್ರಾಬಲ್ಯ ಇರುವಲ್ಲಿ ಯುಡಿಎಫ್ ಗೆಲುವು ಸುಲಭವಾದರೂ, ಬಿಜೆಪಿ ಪ್ರಾಬಲ್ಯಕ್ಕೆ ಬಂದಿರುವ ಕ್ಷೇತ್ರಗಳಲ್ಲಿ ಇಂತಹ ಧರ್ಮಾಧರಿತ ಧ್ರುವೀಕರಣ ಯುಡಿಎಫ್ ಗೆಲುವಿಗೆ ಅಡ್ಡಿಯಾಗಬಹುದು.

ಧರ್ಮಾಧರಿತ ಮತ ಧ್ರುವೀಕರಣ 

ಕಾಸರಗೋಡು ಕ್ಷೇತ್ರದಲ್ಲಿ ಈ ಬಾರಿ ಯುಡಿಎಫ್ ಮತ್ತು ಎಡರಂಗದಲ್ಲಿ ಪ್ರಭಾವಿ ಮುಸ್ಲಿಂ ಅಭ್ಯರ್ಥಿಗಳಿದ್ದು, ಬಿಜೆಪಿಯಲ್ಲಿ ಮಾತ್ರ ಹಿಂದು ಮಹಿಳೆ ಸ್ಪರ್ಧಿಸಿದ್ದಾರೆ. ಇಲ್ಲಿ ಹಿಂದು ಮತಗಳು ಧ್ರುವೀಕರಣಗೊಂಡು ಮುಸ್ಲಿಂ ಮತ ವಿಭಜನೆಯಾದರೆ ಫಲಿತಾಂಶದ ದಿಕ್ಕು ಬದಲಾಗಬಹುದು ಎಂಬ ನಿರೀಕ್ಷೆ ಎನ್ ಡಿಎ ನಾಯಕರಲ್ಲಿದೆ. ಹಿಂದೊಮ್ಮೆ ಎಡರಂಗ ಹಿಡಿತದಲ್ಲಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಅಸೆಂಬ್ಲಿ ಚುನಾವಣೆಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚುತ್ತ ಬಂದಿದ್ದು ಎಡರಂಗವನ್ನು ಮೂರನೇ ಸ್ಥಾನಕ್ಕೆ ತಳ್ಳಿದೆ. 2016 ಮತ್ತು 2021ರಲ್ಲಿ ಅಲ್ಪ ಅಂತರದಲ್ಲಿ ಸೋತಿದ್ದ ಬಿಜೆಪಿ ಈ ಬಾರಿಯೂ ಲೀಗ್ ಜೊತೆಗೆ ನೇರ ಹಣಾಹಣಿಯಲ್ಲಿದೆ. ಈ ಎರಡೂ ಕ್ಷೇತ್ರದಲ್ಲಿ ಹಿಂದು - ಮುಸ್ಲಿಂ ಮತಗಳು ಧರ್ಮದ ವಿಚಾರದಲ್ಲಿ ಧ್ರುವೀಕರಣಗೊಂಡಿದ್ದು ನೀ ಕೊಡೆ ನಾ ಬಿಡೆ ಎನ್ನುವಂತೆ ಪೈಪೋಟಿ ನಡೆಸಿದ್ದಾರೆ. 

ಹಿಂದಿನ ಚುನಾವಣೆಗಳಲ್ಲಿ ಮಂಜೇಶ್ವರ ಕ್ಷೇತ್ರದ ಮಟ್ಟಿಗೆ ಎಡರಂಗದ ಮತ ವಿಭಜನೆಯೇ ಗೆಲುವಿನ ಅಂತರವನ್ನು ನಿರ್ಣಯಿಸಿದೆ. 2021ರಲ್ಲಿ ಸುರೇಂದ್ರನ್ ಅಭ್ಯರ್ಥಿಯಾಗಿದ್ದಾಗ 645ಕ್ಕೆ ಬಿಜೆಪಿ ಸೋತಿದ್ದರೆ, 2019ರಲ್ಲಿ ರವೀಶ ತಂತ್ರಿ ಅಭ್ಯರ್ಥಿಯಾದ ಸಂದರ್ಭದಲ್ಲಿ 8 ಸಾವಿರ ಮತಗಳಿಂದ ಸೋತಿತ್ತು. 2016ರಲ್ಲಿ ಸುರೇಂದ್ರನ್ ಗೆಲುವಿಗೆ 89 ಮತಗಳು ಕಡಿಮೆಯಾಗಿದ್ದವು. ಪ್ರತಿ ಬಾರಿ ಸುರೇಂದ್ರನ್ ಪರವಾಗಿ ಹೆಚ್ಚು ಮತ ಬೀಳುವುದರ ಹಿಂದೆ ಕಾಂಗ್ರೆಸ್- ಎಡರಂಗಕ್ಕೆ ಬೀಳುವ ಹಿಂದುಳಿದ ತೀಯಾ ಸಮಾಜದ ಮತಗಳ ವರ್ಗೀಕರಣ ಕಂಡುಬರುತ್ತದೆ. ಈ ಬಾರಿ ಎಡರಂಗದ ಜಯಾನಂದ್ ಮತ್ತು ಸುರೇಂದ್ರನ್ ಅದೇ ಸಮಾಜದ ಅಭ್ಯರ್ಥಿಗಳಾಗಿರುವುದು ಜಾತಿ ಮತಗಳು ವಿಭಜನೆಯಾಗಲಿದೆ. ಆದರೆ ಕ್ಷೇತ್ರದಲ್ಲಿ ಜಯಾನಂದ್ ಅಭ್ಯರ್ಥಿಯಾಗುವುದಕ್ಕೆ ಸಿಪಿಐನಿಂದ ವಿರೋಧ ಎದುರಾಗಿದ್ದು ಮತ್ತು ಎಡರಂಗದ ಮುಸ್ಲಿಂ ಕಾರ್ಯಕರ್ತರು ಲೀಗ್ ಪರವಾಗಿ ಕೆಲಸ ಮಾಡಿರುವುದು ಕಮ್ಯುನಿಸ್ಟ್ ಪರವಾಗಿದ್ದ ಸಾಂಪ್ರದಾಯಿಕ ಹಿಂದು ಮತಗಳು ಪಲ್ಲಟವಾಗಬಹುದು ಎನ್ನುವ ವಿಶ್ಲೇಷಣೆ ನಡೆದಿದೆ. 

ಎನ್ ಡಿಎ ಹತ್ತು ಸೀಟು ಗೆಲ್ಲುವ ವಿಶ್ವಾಸ 

ಎನ್ ಡಿಎ ಈ ಸಲ ಮೊದಲ ಬಾರಿಗೆ ರಾಜ್ಯದಲ್ಲಿ ಹತ್ತು ಕ್ಷೇತ್ರ ಗೆಲ್ಲುವ ವಿಶ್ವಾಸದಲ್ಲಿದೆ. ಈ ಪೈಕಿ ತಿರುವನಂತಪುರದ ನೆಮ್ಮಾಮ್, ಪಾಲ್ಘಾಟ್, ಕಾಸರಗೋಡು ಮತ್ತು ಮಂಜೇಶ್ವರ ಈ ನಾಲ್ಕು ಕ್ಷೇತ್ರಗಳ ಬಗ್ಗೆ ಹೆಚ್ಚು ವಿಶ್ವಾಸ ವ್ಯಕ್ತವಾಗಿದೆ. ಈ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಪೂರ್ಣಾವಧಿ ಕಾರ್ಯಕರ್ತರು ಮೂರು ತಿಂಗಳ ಮೊದಲೇ ಕೆಲಸ ಆರಂಭಿಸಿದ್ದರು. ಕಾಸರಗೋಡು, ಮಂಜೇಶ್ವರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಹಿರಿಯ ಕಾರ್ಯಕರ್ತರು ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಇದಲ್ಲದೆ, ಬಹಿರಂಗ ಪ್ರಚಾರದ ಬದಲು ಮನೆ ಮನೆ ಪ್ರಚಾರಕ್ಕೆ ಹೆಚ್ಚು ಒತ್ತು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಂಪ್ರದಾಯಿಕ ಹಿಂದು ಕಮ್ಯುನಿಸ್ಟ್ ಮತಗಳು ವಿಭಜನೆಯಾದರೆ ಬಿಜೆಪಿ ಗೆಲುವಾದೀತು ಎನ್ನುವ ಲೆಕ್ಕಾಚಾರ ಪಕ್ಷದ ಒಳಗಿದೆ.‌ ಕಮ್ಯುನಿಸ್ಟ್ ಕೋಟೆಯಾಗಿದ್ದ ತಿರುವನಂತಪುರ ಜನರು ಕಳೆದ ಚುನಾವಣೆಯಲ್ಲಿ ಬಿಜೆಪಿ ಪರ ಮತ ಚಲಾಯಿಸಿದ್ದು ಕೆಂಪಂಗಿ ಮನಸ್ಸು ಬದಲಿಸಿರುವುದನ್ನು ತೋರಿಸಿತ್ತು.‌

ಯುಡಿಎಫ್ ಗೆಲುವು ಕಾಂಗ್ರೆಸಿಗೆ ಅನಿವಾರ್ಯ 

ಇದೇ ವೇಳೆ, ಕಾಂಗ್ರೆಸ್ ನಾಯಕರು ಗೆಲುವಿಗಾಗಿ ತಮ್ಮ ಪ್ರತಿಷ್ಠೆ ಪಣಕ್ಕೊಡ್ಡಿ ಕೆಲಸ ಮಾಡಿದ್ದಾರೆ. ಕೇರಳದಲ್ಲಿ ಗೆಲುವು ಕರ್ನಾಟಕ ಮತ್ತು ಕೇಂದ್ರ ನಾಯಕತ್ವಕ್ಕೆ ಅನಿವಾರ್ಯವಾಗಿದ್ದು ಇದಕ್ಕಾಗಿ ಕ್ರಿಸ್ತಿಯನ್, ಮುಸ್ಲಿಂ ಮತಗಳನ್ನು ಸೆಳೆಯಲು ತೀವ್ರ ಕಸರತ್ತು ನಡೆಸಿದ್ದಾರೆ. ಬಡ ಜನರನ್ನು ಸೆಳೆಯಲು ಕರ್ನಾಟಕ ಮಾದರಿಯ ಗ್ಯಾರಂಟಿಗಳನ್ನು ಘೋಷಿಸಿದ್ದಾರೆ. ಕರ್ನಾಟಕದ ನಾಯಕರು ಕಾಸರಗೋಡು ಭಾಗದಲ್ಲಿ ಸಾಕಷ್ಟು ಪ್ರಚಾರವನ್ನೂ ನಡೆಸಿದ್ದಾರೆ. ಕಳೆದ ಪಂಚಾಯತ್ ಚುನಾವಣೆಯಲ್ಲಿ ಯುಡಿಎಫ್ ಹೆಚ್ಚು ಮತಗಳನ್ನು ಪಡೆದಿದ್ದರಿಂದ ಈ ಬಾರಿಯೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯಲಿದೆ ಎಂಬ ವಿಶ್ವಾಸದಲ್ಲಿ ನಾಯಕರಿದ್ದಾರೆ.

In Kerala, it has traditionally been a pattern for power to alternate every five years between the United Democratic Front (UDF) and the Left Democratic Front (LDF). However, the last election broke this trend, with the Left retaining power for a second consecutive term. This time, the question of who will form the government remains uncertain, and the final verdict will only be known on May 4.