ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ

17-01-21 03:41 pm       Source: Drive Spark   ದೇಶ - ವಿದೇಶ

ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಹರಿಯಾಣ ರಾಜ್ಯದಲ್ಲಿ ಆರಂಭಿಸಲಾಗಿದೆ.

ದೇಶದ ಮೊದಲ ಏರ್ ಟ್ಯಾಕ್ಸಿ ಸೇವೆಯನ್ನು ಹರಿಯಾಣ ರಾಜ್ಯದಲ್ಲಿ ಆರಂಭಿಸಲಾಗಿದೆ. ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಚಂಡೀಗಢ - ಹಿಸಾರ್ ನಡುವಿನ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಈ ಸೇವೆಗೆ ಚಾಲನೆ ನೀಡಿದರು

ಮೊದಲ ಪ್ರಯಾಣಿಕರಿಗೆ ಬೋರ್ಡಿಂಗ್ ಪಾಸ್'ಗಳನ್ನು ಹಸ್ತಾಂತರಿಸುವ ಮೂಲಕ ಅವರು ಈ ಸೇವೆಯನ್ನು ಆರಂಭಿಸಿದರು. ಈ ಸೇವೆಯನ್ನು ಏರ್ ಟ್ಯಾಕ್ಸಿ ಏವಿಯೇಷನ್ ​​ಕಂಪನಿಯು ಆರಂಭಿಸಿದೆ ಎಂದು ಅಧಿಕೃತ ಹೇಳಿಕೆ ಬಹಿರಂಗಪಡಿಸಿದೆ. ಈ ಸೇವೆಗಾಗಿ ಏರ್ ಟ್ಯಾಕ್ಸಿ ನಾಲ್ಕು ಸೀಟುಗಳ ವಿಮಾನಗಳನ್ನು ಪಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.



ಪೈಲಟ್ ಹೊರತುಪಡಿಸಿ ಇತರ ಮೂರು ಪ್ರಯಾಣಿಕರು ಈ ಏರ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸಬಹುದು. ಈ ಏರ್ ಟ್ಯಾಕ್ಸಿಯ ಸಹಾಯದಿಂದ ಚಂಡೀಗಢದಿಂದ ಹಿಸಾರ್‌ಗೆ ಇರುವ ದೂರವನ್ನು ಕೇವಲ 45 ನಿಮಿಷಗಳಲ್ಲಿ ಕ್ರಮಿಸಬಹುದು. ಇದರಿಂದ ಸಮಯವನ್ನು ಉಳಿಸಬಹುದು.



ಏರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಮನೋಹರ್ ಖಟ್ಟರ್ ಕೇಂದ್ರ ಸರ್ಕಾರದ 'ಉದಯ್' ಯೋಜನೆಯಡಿ ಈ ಸೇವೆಯನ್ನು ಆರಂಭಿಸಲಾಗಿದೆ ಎಂದು ಹೇಳಿದರು. ವಿಮಾನ ಹಾರಾಟವನ್ನು ಕೈಗೆಟುಕುವಂತೆ ಮಾಡಲು ಈ ಯೋಜನೆಯನ್ನು ಪರಿಚಯಿಸಲಾಗಿದೆ ಎಂದು ಹೇಳಿದರು.



ಏರ್ ಟ್ಯಾಕ್ಸಿ ಏವಿಯೇಷನ್ ​​ಕಂಪನಿಯು ಹಿಸಾರ್‌ನಿಂದ ಚಂಡೀಗಢಕ್ಕೆ ರೂ.1,755 ಶುಲ್ಕವನ್ನು ನಿಗದಿಪಡಿಸಿದೆ ಎಂದು ಮನೋಹರ್ ಖಟ್ಟರ್ ತಿಳಿಸಿದರು. ಈ ಸೇವೆಯನ್ನು ಪಡೆಯಲು ಬಯಸುವವರು ಆನ್‌ಲೈನ್‌ ಮೂಲಕ ಬುಕ್ ಮಾಡಬೇಕಾಗುತ್ತದೆ.



ಇದರ ಜೊತೆಗೆ ಕಂಪನಿಯು ಖಾಸಗಿ ಬುಕಿಂಗ್ ಸೌಲಭ್ಯವನ್ನು ಒದಗಿಸಿದೆ ಎಂಬುದು ಗಮನಾರ್ಹ. ಇದಕ್ಕಾಗಿ ಬೇರೆ ಶುಲ್ಕವನ್ನು ವಿಧಿಸಲಾಗುತ್ತದೆ. ಆರಂಭದಲ್ಲಿ ಹಿಸಾರ್ - ಚಂಡೀಗಢ ನಡುವೆ ನಿಗದಿತ ವೇಳೆಯಲ್ಲಿ ಪ್ರತಿದಿನ ವಿಮಾನ ಸಂಚಾರವಿರಲಿದೆ.

ಒಬ್ಬ ಪ್ರಯಾಣಿಕ ಮಾತ್ರ ಟಿಕೆಟ್ ಕಾಯ್ದಿರಿಸಿದ್ದರೂ ಸಹ ನಂತರವೂ ವಿಮಾನವು ಹಾರಾಟವನ್ನು ನಡೆಸಲಿದೆ. ಗುರುವಾರದಿಂದ ಚಂಡೀಗಢ - ಹಿಸಾರ್ ವಾಯು ಸೇವೆಯನ್ನು ಆರಂಭಿಸಿರುವ ಕಂಪನಿಯು ಜನವರಿ 18ರಿಂದ ಹಿಸಾರ್‌ನಿಂದ ಡೆಹ್ರಾಡೂನ್‌ಗೆ ಹಾಗೂ ಹಿಸಾರ್‌ನಿಂದ ಧರ್ಮಶಾಲಾಗೆ ಜನವರಿ 23ರಂದು ವಿಮಾನ ಸೇವೆಯನ್ನು ಆರಂಭಿಸಲಿದೆ.



ಕೇಂದ್ರ ಸರ್ಕಾರವು ಹೊಸ ಯೋಜನೆಯಡಿ ತಾನು ಬಳಸುತ್ತಿರುವ ಹಳೆಯ ಸರ್ಕಾರಿ ವಾಹನಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಹೊಸ ಸ್ಕ್ರ್ಯಾಪಿಂಗ್ ನೀತಿಯನ್ನು ಜಾರಿಗೊಳಿಸಲು ಮುಂದಾಗಿದೆ. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಸೂಚನೆ ನೀಡಿದ್ದಾರೆ.

15 ವರ್ಷ ಹಳೆಯ ಸರ್ಕಾರಿ ವಾಹನಗಳನ್ನು ಗುರುತಿಸಲು ಪ್ರಧಾನಿ ಇಲಾಖೆಗಳಿಗೆ ಸೂಚಿಸಿದ್ದಾರೆ. ಹಳೆಯ ಸರ್ಕಾರಿ ವಾಹನಗಳನ್ನು ತೆಗೆದುಹಾಕುವುದರ ಮೂಲಕ ಸ್ಕ್ರ್ಯಾಪಿಂಗ್ ನೀತಿಗೆ ತನ್ನ ಬದ್ದತೆಯ ಸಂದೇಶವನ್ನು ನೀಡಲು ಸರ್ಕಾರವು ಮುಂದಾಗಿದೆ.