ಅರುಣಾಚಲಕ್ಕೆ ನುಗ್ಗಿದ ಚೀನೀಯರಿಂದ ಹೊಸ ಗ್ರಾಮ ಸೃಷ್ಟಿ ; ಅಮೆರಿಕದಿಂದ ಚಿತ್ರ ಸಾಕ್ಷ್ಯ!

19-01-21 06:04 pm       Headline Karnataka News Network   ದೇಶ - ವಿದೇಶ

ಚೀನೀಯರು ಸದ್ದಿಲ್ಲದೆ ಅರುಣಾಚಲ ಪ್ರದೇಶದ ಒಳಬಂದು ಗ್ರಾಮವೊಂದನ್ನು ಸ್ಥಾಪಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ನವದೆಹಲಿ, ಜ.19: ಭಾರತ – ಚೀನಾ ನಡುವೆ ಲಡಾಖ್ ಭಾಗದಲ್ಲಿ ಕಳೆದೊಂದು ವರ್ಷದಿಂದ ಶೀತಲ ಸಮರ ನಡೆದಿರುವಾಗಲೇ ಚೀನೀಯರು ಸದ್ದಿಲ್ಲದೆ ಅರುಣಾಚಲ ಪ್ರದೇಶದ ಒಳಬಂದು ಗ್ರಾಮವೊಂದನ್ನು ಸ್ಥಾಪಿಸಿರುವ ಬಗ್ಗೆ ಮಾಹಿತಿ ಹೊರಬಿದ್ದಿದೆ.

ಅರುಣಾಚಲ ಪ್ರದೇಶದ ಗಡಿಭಾಗ, ಸುಭಾನ್ಸಿರಿ ಜಿಲ್ಲೆಗೆ ಒಳಪಟ್ಟ ತ್ಸಾರಿ ಚು ನದಿಯ ಉದ್ದಕ್ಕೂ ಚೀನಾ 100 ಮನೆಗಳನ್ನು ನಿರ್ಮಿಸಿದ್ದು, ಜನವಸತಿಯ ಲೇಔಟ್ ನಿರ್ಮಿಸಿರುವ ಬಗ್ಗೆ ಅಮೆರಿಕ ಮೂಲದ ಪ್ಲಾನೆಟ್ ಲ್ಯಾಬ್ಸ್ ಎನ್ನುವ ಕಂಪನಿ ಸ್ಯಾಟಲೈಟ್ ಫೋಟೋಗಳನ್ನು ಬಿಡುಗಡೆ ಮಾಡಿದೆ. 2019ರಲ್ಲಿ ಅಲ್ಲಿ ಯಾವುದೇ ಕಟ್ಟಡ ರಚನೆಗಳು ಇರಲಿಲ್ಲ. ಈಗ ಅಲ್ಲಿ ಕಟ್ಟಡಗಳು ತಲೆಯೆತ್ತಿವೆ ಎನ್ನುವ ಬಗ್ಗೆ ಫೋಟೋಗಳನ್ನು ಬಿಡುಗಡೆ ಮಾಡಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ವಿದೇಶಾಂಗ ಇಲಾಖೆ, ಚೀನಾದ ಅತಿಕ್ರಮಣಗಳನ್ನು ಭಾರತ ಗಮನಿಸುತ್ತಿದೆ. ಪ್ರತಿ ಬಾರಿ ಚೀನೀ ಸೈನಿಕರು ಕಾಲು ಕೆರೆದು ಬರುತ್ತಿರುವ ಬಗ್ಗೆಯೂ ಗಮನ ಇಡಲಾಗಿದೆ. ಆದರೆ, ಭಾರತ ಭೂಭಾಗದ ಅತಿಕ್ರಮಣಕ್ಕೆ ಯಾವುದೇ ಅವಕಾಶವನ್ನೂ ಕೊಡುವುದಿಲ್ಲ. ಗಡಿಭಾಗದ ಜನರ ಮೂಲಸೌಕರ್ಯ ಒದಗಿಸುವುದಕ್ಕಾಗಿ ನಾವು ಕೂಡ ಅಗತ್ಯ ರಸ್ತೆ, ಸೇತುವೆ ಇನ್ನಿತರ ಕೆಲಸಕ್ಕೆ ಮುಂದಾಗುತ್ತೇವೆ ಎಂದು ಹೇಳಿದೆ.

ಅರುಣಾಚಲ ಪ್ರದೇಶ ಭಾರತದ ಭೂಭಾಗದ ಪರಿಮಿತಿಯ ಒಳಗೇ ಇದ್ದರೂ, ಚೀನಾ ಮಾತ್ರ ಅದನ್ನು ಮಾನ್ಯ ಮಾಡಿಲ್ಲ. ಅರುಣಾಚಲ ತಮ್ಮದೇ ನೆಲ ಎಂಬುದನ್ನು ಹೇಳಿಕೊಂಡು ಬಂದಿದೆ. ಅಮೆರಿಕದ ಪ್ಲಾನೆಟ್ ಲ್ಯಾಬ್ಸ್ ಬಿಡುಗಡೆ ಮಾಡಿರುವ ಚಿತ್ರಗಳನ್ನು ಎನ್ ಡಿಟಿವಿ ಪ್ರಕಟಿಸಿದ್ದು, ಕಳೆದ 2019ರ ಆಗಸ್ಟ್ ತಿಂಗಳಲ್ಲಿ ಖಾಲಿ ಇದ್ದ ಭೂಭಾಗದಲ್ಲಿ 2020ರ ನವೆಂಬರ್ ತಿಂಗಳಲ್ಲಿ ಕಟ್ಟಡಗಳ ರಚನೆಯಾಗಿರುವುದನ್ನು ತೋರಿಸಿದೆ.

ಈ ಬಗ್ಗೆ ಅರುಣಾಚಲ ಪ್ರದೇಶದ ಬಿಜೆಪಿ ಸಂಸದ ತಾಪಿರ್ ಗಾವೋ ಮಾತನಾಡಿ, ಚೀನೀಯರು ಸುಭಾನ್ಸಿರಿ ಜಿಲ್ಲೆಯ ಗಡಿಭಾಗದ ಒಳಗೆ 60-70 ಕಿಮೀ ಒಳಗೆ ಬಂದಿದ್ದಾರೆ. ಕಟ್ಟಡ ಮತ್ತು ರಸ್ತೆಗಳನ್ನು ಮಾಡುತ್ತಿದ್ದಾರೆ. ನದಿಯ ಉದ್ದಕ್ಕೂ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಇದೇ ವೇಳೆ, ಚೀನಾ ಅತಿಕ್ರಮಣದ ಬಗ್ಗೆ ಕಾಂಗ್ರೆಸ್, ಮೋದಿ ಸರಕಾರದಿಂದ ಸ್ಪಷ್ಟನೆ ಕೇಳಿದೆ. ಚೀನಾ, ಭಾರತದ ಒಳನುಗ್ಗಿ ಗ್ರಾಮವನ್ನೇ ಸೃಷ್ಟಿಸಿದೆ ಎನ್ನುವ ವರದಿಗಳ ಬಗ್ಗೆ ಮೋದಿ ಸರಕಾರ ಏನು ಹೇಳುತ್ತದೆ. ಮೋದಿ ಸರಕಾರ ಭಾರತದ ಸಮಗ್ರತೆಯನ್ನು ಕಾಪಾಡಲು ಶಕ್ತವಾಗಿಲ್ಲವೇ ಎಂದು ಪ್ರಶ್ನೆ ಮಾಡಿದೆ. 

As India and China continue to remain locked in a months-long bitter border standoff in eastern Ladakh, Beijing is undertaking construction work along with the border areas near Arunachal Pradesh, a report said.