ಕಲ್ಲಿನ ಲಾರಿ ಡಿವೈಡರ್ ಹತ್ತಿ ಪಲ್ಟಿ ; ನಾಲ್ಕು ವಾಹನ ಅಪ್ಪಚ್ಚಿ ; 13 ಜನ ಸಾವು !

20-01-21 10:58 am       Headline Karnataka News Network   ದೇಶ - ವಿದೇಶ

ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಮೇಲೆ ಹತ್ತಿದ್ದು ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಪಲ್ಟಿಯಾಗಿ ಬಿದ್ದಿದೆ.

ಕೊಲ್ಕತ್ತಾ , ಜ.20: ಬೃಹತ್ ಗಾತ್ರದ ಕಲ್ಲುಗಳ ಲೋಡ್ ಹೊಂದಿದ್ದ ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಇತರೇ ನಾಲ್ಕು ವಾಹನಗಳ ಮೇಲೆ ಮಗುಚಿ ಬಿದ್ದ ಪರಿಣಾಮ 13 ಮಂದಿ ಸಾವನ್ನಪ್ಪಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ. 

ಜಲಪಾಯಿಗುರಿ ಜಿಲ್ಲೆಯ ಧೂಪ್ ಗುರಿ ಎಂಬಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದೆ. ಘಟನೆಯಲ್ಲಿ 18ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 

ಬೃಹತ್ ಗಾತ್ರದ ಕಲ್ಲುಗಳನ್ನು ಲೋಡ್ ಮಾಡಿಕೊಂಡು ಸಾಗುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್ ಮೇಲೆ ಹತ್ತಿದ್ದು ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ವಾಹನಗಳ ಮೇಲೆ ಪಲ್ಟಿಯಾಗಿ ಬಿದ್ದಿದೆ. ಇನ್ನೊಂದು ಲಾರಿಗೂ ಡಿಕ್ಕಿಯಾಗಿ ಅದು ಪಲ್ಟಿಯಾಗಿದೆ. ಒಟ್ಟು ನಾಲ್ಕು ವಾಹನಗಳು ಲಾರಿಯಡಿಗೆ ಬಿದ್ದು ಅಪ್ಪಚ್ಚಿಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಪೊಲೀಸರು ಮತ್ತು ಸ್ಥಳೀಯರು ಸೇರಿ ಕ್ರೇನ್ ಬಳಸಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಆದರೆ, ಅಷ್ಟರಲ್ಲಿ 13 ಜನ ಸಾವನ್ನಪ್ಪಿದ್ದಾರೆ. 

ಮಂಜಿನಿಂದಾಗಿ ಫಾಗ್ ತುಂಬಿದ್ದರಿಂದ ರಸ್ತೆ ಕಾಣದೆ ದುರ್ಘಟನೆ ಆಗಿದೆ ಎಂದು ಮೇಲ್ನೋಟಕ್ಕೆ ಪೊಲೀಸರು ಹೇಳುತ್ತಿದ್ದಾರೆ. ಆರೋಪಿ ಲಾರಿ ಚಾಲಕ ಅಪಾಯವಿಲ್ಲದೆ ಬಚಾವಾಗಿದ್ದು ಪೊಲೀಸರು ಬಂಧಿಸಿದ್ದಾರೆ.

In a tragic incident, 13 people died in an accident in Dhupguri city of Jalpaiguri district in West Bengal on Tuesday night. The unfortunate accident happened due to reduced visibility caused due to fog.