ಭಾರತದ ಕೊರೊನಾ ಲಸಿಕೆ ; ಸಂಜೀವಿನಿ ತಂದ ಹನುಮಂತನ ಚಿತ್ರದೊಂದಿಗೆ ಬ್ರೆಜಿಲ್ ಅಭಿನಂದನೆ

23-01-21 02:03 pm       Headline Karnataka News Network   ದೇಶ - ವಿದೇಶ

ಕೊರೊನಾ ವಿರುದ್ಧ ಹೋರಾಡುವ ಕೋವಿಡ್ ಲಸಿಕೆಯನ್ನು ಕೊಟ್ಟ ಭಾರತಕ್ಕೆ ಬ್ರೆಜಿಲ್ ವಿಶೇಷ ರೀತಿಯಲ್ಲಿ ಧನ್ಯವಾದ ಸಲ್ಲಿಸಿದೆ.

ನವದೆಹಲಿ, ಜ.23: ವಿದೇಶಗಳಲ್ಲಿ ಮಹಾಮಾರಿಯಾಗಿ ಹರಡುತ್ತಿರುವ ಕೊರೊನಾ ವಿರುದ್ಧ ಹೋರಾಡುವ ಕೋವಿಡ್ ಲಸಿಕೆಯನ್ನು ಕೊಟ್ಟ ಭಾರತಕ್ಕೆ ಬ್ರೆಜಿಲ್ ವಿಶೇಷ ರೀತಿಯಲ್ಲಿ ಧನ್ಯವಾದ ಸಲ್ಲಿಸಿದೆ. ಸಂಜೀವಿನಿ ಹೊತ್ತು ತಂದ ಹನುಮಂತನಂತೆ ಕೊರೊನಾ ಲಸಿಕೆಯನ್ನು ಬಿಂಬಿಸಿ ಬ್ರೆಜಿಲ್ ಅಧ್ಯಕ್ಷರು ಟ್ವೀಟ್ ಮಾಡಿದ್ದು ಜಗತ್ತಿನ ಗಮನ ಸೆಳೆದಿದೆ.

ರಾಮಾಯಣದಲ್ಲಿ ಇಂದ್ರಜಿತುವಿನ ಹೊಡೆತಕ್ಕೆ ಅಡ್ಡಬಿದ್ದ ಲಕ್ಷ್ಮಣನ ಉಳಿಸುವುದಕ್ಕಾಗಿ ಹನುಮಂತ ಸಂಜೀವಿನಿ ಪರ್ವತವನ್ನೇ ಹೊತ್ತು ತರುತ್ತಾನೆ. ಆಕಾಶ ಮಾರ್ಗದಲ್ಲಿ ಹಾರಿಕೊಂಡು ಬರುವ ಹನುಮಂತ ಭಾರತದಲ್ಲಿ ದೇವರಾಗಿ ಪೂಜಿಸಲ್ಪಡುತ್ತಾನೆ. ಭಾರತ ಮೂಲದ ರಾಮಾಯಣದ ಕಥೆಯನ್ನಾಧರಿಸಿದ ಹನುಮಂತನ ಚಿತ್ರವನ್ನು ಈಗ ಬ್ರೆಜಿಲ್ ಅಧ್ಯಕ್ಷರು ಭಾರತದ ಪರವಾಗಿ ಟ್ವೀಟ್ ಮಾಡಿದ್ದು, ಜಗ ಮೆಚ್ಚುವಂತೆ ಮಾಡಿದೆ.

ಈಗಾಗ್ಲೇ ಭಾರತದಿಂದ ಅನೇಕ ದೇಶಗಳಿಗೆ ಕೊರೊನಾ ಲಸಿಕೆಯನ್ನು ನೀಡಲಾಗಿದೆ. ಅದೇ ರೀತಿ ಬ್ರೆಜಿಲ್ ದೇಶಕ್ಕೆ 20 ಲಕ್ಷ ಲಸಿಕೆಯನ್ನು ನೀಡಿದ್ದು, ಅದಕ್ಕಾಗಿ ಬ್ರೆಜಿಲ್ ಅಧ್ಯಕ್ಷ ಜೈಲ್ ಬೋಲ್ಸೊನಾರೊ ಆನಂದಗೊಂಡು ಹನುಮಂತ ದೇವರ ಚಿತ್ರವನ್ನು ಟ್ವೀಟ್ ಮಾಡಿ ಭಾರತಕ್ಕೆ ಧನ್ಯವಾದ ಅರ್ಪಿಸಿದ್ದಾರೆ. ಹನುಮಂತ ಕೊರೊನಾ ಲಸಿಕೆಯನ್ನು ಸಂಜೀವಿನಿಯ ರೂಪದಲ್ಲಿ ಭಾರತದಿಂದ ಬ್ರೆಜಿಲ್ ದೇಶಕ್ಕೆ ಹೊತ್ತು ತರುವ ರೀತಿಯಲ್ಲಿ ಚಿತ್ರವನ್ನು ಹಂಚಿಕೊಂಡಿದ್ದು, ಭಾರತದ ಪ್ರಧಾನಿ ಮೋದಿಗೆ ಅಭಿನಂದನೆ ಸಲ್ಲಿಸಿದ್ದಾರೆ.

ನಮಸ್ಕಾರ ಪ್ರಧಾನಿ ಮೋದಿಯವರೇ. ಜಾಗತಿಕ ಬಿಕ್ಕಟ್ಟನ್ನು ಎದುರಿಸಲು ಪಾಲುದಾರಿಕೆಯನ್ನು ತೋರಿದ್ದಕ್ಕಾಗಿ ಬ್ರೆಜಿಲ್ ಕೃತಜ್ಞತೆ ವ್ಯಕ್ತಪಡಿಸುತ್ತದೆ. ಭಾರತದಿಂದ ಕೊರೊನಾ ಲಸಿಕೆಯನ್ನು ರಫ್ತು ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಬ್ರೆಜಿಲ್ ಭಾಷೆಯಲ್ಲಿ ಮಾಡಿದ ಟ್ವೀಟ್ ನಲ್ಲಿ ತಿಳಿಸಿದ್ದಾರೆ.

ಇದಕ್ಕೆ ರೀಟ್ವೀಟ್ ಮಾಡಿ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಗೌರವ ನಮ್ಮದು. ಬ್ರೆಜಿಲ್ ಜೊತೆ ಸೇರಿ ನಾವು ಕೋವಿಡ್ 19 ಬಿಕ್ಕಟ್ಟನ್ನು ಎದುರಿಸುತ್ತೇವೆ. ಆರೋಗ್ಯ ಕ್ಷೇತ್ರದಲ್ಲಿ ಪಾಲುದಾರಿಕೆ ಹೊಂದುವುದನ್ನು ಮುಂದುವರಿಸುತ್ತೇವೆ ಎಂದಿದ್ದಾರೆ.