ಖ್ಯಾತ ವೈದ್ಯ ಡಾ.ಬಿ.ಎಂ.ಹೆಗ್ಡೆ ಪದ್ಮ ವಿಭೂಷಣ, ಸಾಹಿತಿ ಚಂದ್ರಶೇಖರ ಕಂಬಾರರಿಗೆ ಪದ್ಮಭೂಷಣ ಗೌರವ 

25-01-21 11:26 pm       Mangaluru Correspondent   ದೇಶ - ವಿದೇಶ

ಖ್ಯಾತ ಹೃದಯ ತಜ್ಞ , ಲೇಖಕ ಡಾ. ಬಿ.ಎಂ. ಹೆಗ್ಡೆ ಅವರನ್ನು ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮವಿಭೂಷಣಕ್ಕೆ ಕೇಂದ್ರ ಸರಕಾರ ಆಯ್ಕೆ ಮಾಡಿದೆ. 

ನವದೆಹಲಿ, ಜ.25: ಖ್ಯಾತ ಹೃದಯ ತಜ್ಞ , ಲೇಖಕ ಡಾ. ಬಿ.ಎಂ. ಹೆಗ್ಡೆ ಅವರನ್ನು ಭಾರತದ ಎರಡನೇ ಅತ್ಯುನ್ನತ ಪ್ರಶಸ್ತಿ ಪದ್ಮವಿಭೂಷಣಕ್ಕೆ ಕೇಂದ್ರ ಸರಕಾರ ಆಯ್ಕೆ ಮಾಡಿದೆ. 

ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಪುಸ್ತಕಗಳನ್ನು ಬರೆದಿರುವ ಬಿ.ಎಂ. ಹೆಗ್ಡೆ ಅವರಿಗೆ 2010 ರಲ್ಲಿ ಪದ್ಮಭೂಷಣ ಪ್ರಶಸ್ತಿ ನೀಡಲಾಗಿತ್ತು. ಅದಕ್ಕೂ ಹಿಂದೆ 1999ರಲ್ಲಿ ಪ್ರತಿಷ್ಠಿತ ಡಾ.ಬಿ.ಸಿ. ರಾಯ್ ಪ್ರಶಸ್ತಿಗೆ ಪಾತ್ರರಾಗಿದ್ದರು. 

ಸಾರ್ವಜನಿಕ ಸೇವೆ ವಿಭಾಗದಲ್ಲಿ ಜಪಾನ್ ಮಾಜಿ ಪ್ರಧಾನಿ ಶಿನ್ ಜೋ ಅಬೆ ಅವರಿಗೂ ಪದ್ಮ ವಿಭೂಷಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರಿಗೆ ಮರಣೋತ್ತರ ನೆಲೆಯಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಲಾಗಿದೆ. 

ಭಾರತ ಮೂಲದ ಅಮೆರಿಕದ ವಿಜ್ಞಾನಿ ನರೀಂದರ್ ಸಿಂಗ್, ಭಾರತದ ಇಸ್ಲಾಂ ಧಾರ್ಮಿಕ ಗುರು, ಶಾಂತಿ ಪ್ರತಿಪಾದಕ ಮೌಲಾನಾ ವಹೀಯುದ್ದೀನ್ ಖಾನ್, ಪ್ರಾಚ್ಯವಸ್ತು ಸಂಶೋಧಕ, ಇತಿಹಾಸಕಾರ ಬಿ.ಬಿ.ಲಾಲ್, ಸಾಹಿತಿ ಸುದರ್ಶನ ಸಾಹೂ ಅವರನ್ನೂ ಸೇರಿಸಿ ಏಳು ಮಂದಿಗೆ ಪದ್ಮ ವಿಭೂಷಣ ಪ್ರಶಸ್ತಿ ಪ್ರಕಟಿಸಲಾಗಿದೆ. 

ಇದೇ ವೇಳೆ, ಕನ್ನಡ ಸಾಹಿತಿ ಚಂದ್ರಶೇಖರ ಕಂಬಾರ, ಅಸ್ಸಾಂ ಮಾಜಿ ಸಿಎಂ ತರುಣ್ ಗೊಗೋಯ್, ಮಾಜಿ ಕೇಂದ್ರ ಸಚಿವ ರಾಮವಿಲಾಸ್ ಪಾಸ್ವಾನ್, ಗುಜರಾತಿನ ಮಾಜಿ ಸಿಎಂ ಕೇಶುಭಾಯ್ ಪಟೇಲ್, ಭಾರತದ ಇಸ್ಲಾಮಿಕ್ ಸಾಹಿತಿ ಕಲ್ಬೆ ಸಾದಿಕ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್ ಸೇರಿ ಹತ್ತು ಮಂದಿ ಸಾಧಕರಿಗೆ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ. 

ಇದಲ್ಲದೆ, ಈ ಬಾರಿ 102 ಮಂದಿಯನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕರ್ನಾಟಕದ ಮೂರು ಮಂದಿ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರಕಟಿಸಲಾಗುವ ಈ ಪ್ರಶಸ್ತಿಗಳನ್ನು ಪ್ರತಿವರ್ಷ ಎಪ್ರಿಲ್ ತಿಂಗಳಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.

Famous cardiologist, professional educator and author Dr Belle Monappa (BM) Hegde from Mangalore has been conferred with the Padma Vibhushan, India's second-highest civilian award.