ವಿಕೋಪಕ್ಕೆ ತಿರುಗಿದ ರೈತರ ಟ್ರಾಕ್ಟರ್ ರ್ಯಾಲಿ ; ರಾಜಧಾನಿ ದೆಹಲಿಯಲ್ಲಿ ಹಿಂಸೆ ! ಕೆಂಪುಕೋಟೆ ಹತ್ತಿದ ಪ್ರತಿಭಟನಾಕಾರರು !!

26-01-21 03:22 pm       Headline Karnataka News Network   ದೇಶ - ವಿದೇಶ

ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಸಿಖ್ ಧ್ವಜ ಹಾರಿಸಿದ್ದಾರೆ. 

ನವದೆಹಲಿ, ಜ.26 : ಗಣರಾಜ್ಯ ದಿನವೇ ಶಕ್ತಿಪ್ರದರ್ಶನಕ್ಕೆ ಹೊರಟ ರೈತರನ್ನು ತಡೆಯಲು ಪೊಲೀಸರು ಬಲಪ್ರಯೋಗ ಮಾಡಿದ್ದಾರೆ.‌ ಆದರೆ, ರಾಜಧಾನಿಗೆ ಪ್ರವೇಶ ಮಾಡದಂತೆ ಪೊಲೀಸರು ಹಾಕಿದ್ದ ತಡೆಬೇಲಿಯನ್ನು ಲೆಕ್ಕಿಸದೆ ರೈತರು ಮುನ್ನುಗ್ಗಿದ್ದಾರೆ. ಇತಿಹಾಸದಲ್ಲೇ ಮೊದಲ ಬಾರಿಗೆ ಕೆಂಪುಕೋಟೆಗೆ ನುಗ್ಗಿದ ಪ್ರತಿಭಟನಾಕಾರರು ಅಲ್ಲಿ ಸಿಖ್ ಧ್ವಜ ಹಾರಿಸಿದ್ದಾರೆ. 

ಇದೇ ವೇಳೆ, ರೈತರ ಮೇಲೆ ಪೊಲೀಸರು ಅಶ್ರುವಾಯು, ಲಾಠಿಚಾರ್ಜ್, ಜಲಫಿರಂಗಿ ಪ್ರಯೋಗ ಮಾಡಿದ್ದಾರೆ. ಉತ್ತರ ದೆಹಲಿಯಲ್ಲಿ ಅನ್ನದಾತರ ಕಿಚ್ಚು ತೀವ್ರಗೊಂಡಿದ್ದು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಗುತ್ತಿದೆ. 

ಕೇಂದ್ರ ಸರಕಾರ ಜಾರಿಗೆ ತರುತ್ತಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಚಳವಳಿ ನಡೆಯುತ್ತಿದ್ದು ಪಂಜಾಬ್, ಹರಿಯಾಣ, ಉತ್ತರ ಪ್ರದೇಶಗಳಿಂದ ರೈತರು ಟ್ರಾಕ್ಟರ್ ನಲ್ಲಿ ರಾಜಧಾನಿಗೆ ಆಗಮಿಸಿದ್ದಾರೆ. ಒಂದೆಡೆ ರೈತರ ಟ್ರ್ಯಾಕ್ಟರ್ ರ‍್ಯಾಲಿ ಉದ್ವಿಗ್ನ ಪರಿಸ್ಥಿತಿಯನ್ನು ತಲುಪಿದ್ದು ದೆಹಲಿಯ ವಿವಿಧೆಡೆ ವ್ಯಾಪಕ ಹಿಂಸಾಚಾರ ನಡೆದಿದೆ. ರ‍್ಯಾಲಿಗೆ ತೆರಳಿದ್ದ ರೈತರ ಮೇಲೆ ಅಶ್ರುವಾಯು ಪ್ರಯೋಗ ಮಾಡಲಾಗಿದೆ. ಕಿಸಾನ್ ಟ್ರ್ಯಾಕ್ಟರ್ ಪರೇಡ್ ಗೆ ತೆರಳಿದ್ದ ರೈತರ ಮೇಲೆ ಪೊಲೀಸರು ಮನಬಂದಂತೆ ಲಾಠಿಚಾರ್ಜ್ ಕೂಡ ಮಾಡಿದ್ದಾರೆ. 

ಪೊಲೀಸರು ನದಿಯ ಸೇತುವೆ ಮಧ್ಯೆ ಹಾಕಿದ್ದ ಬ್ಯಾರಿಕೇಡ್ ಗಳನ್ನು ರೈತರು ನದಿಗೆ ಎಸೆದಿದ್ದಾರೆ. ದೆಹಲಿಯ ಸಿಂಘು ಗಡಿಯಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತಿದೆ. ಆದರೆ, ಯಾವುದೇ ಕಾರಣಕ್ಕೂ ರೈತರ ಮೇಲೆ ಗುಂಡು ಹಾರಿಸದಂತೆ ಕೇಂದ್ರ ಸರಕಾರ ಸೂಚನೆ ನೀಡಿದೆ. ಹೀಗಾಗಿ ಪ್ರತಿಭಟನಾಕಾರರು ಕೆಂಪುಕೋಟೆ ಮೇಲೆ ಹತ್ತಿ ಧ್ವಜ‌ ಹಾರಿಸಿದರೂ ಪೊಲೀಸರು ಅವರ ಮೇಲೆ ಬಲಪ್ರಯೋಗ ಮಾಡಿಲ್ಲ. ಆದರೂ ಲಾಠಿಚಾರ್ಜ್, ಕಲ್ಲು ತೂರಾಟದಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಸಾವು ಆಗಿರುವ ಬಗ್ಗೆ ಇನ್ನೂ ಖಚಿತಗೊಂಡಿಲ್ಲ. ಟ್ರಾಕ್ಟರ್ ಗಳನ್ನು ತಡೆದ ಪೊಲೀಸರ ಮೇಲೆಯೇ ಟ್ರಾಕ್ಟರ್ ಹರಿಸುವ ಯತ್ನಗಳು ನಡೆದಿವೆ. ಅಲ್ಲದೆ, ಸಾರ್ವಜನಿಕ ಸಾರಿಗೆ ಬಸ್ ಗಳ ಮೇಲೂ ಟ್ರಾಕ್ಟರ್ ಗಳಿಂದ ಡಿಕ್ಕಿ ಹೊಡೆಸಿದ್ದು ವ್ಯಾಪಕ ಹಾನಿಗಳಾಗಿವೆ. 

ಕರ್ನಾಟಕದ ಬೆಂಗಳೂರು ಸೇರಿ ದೇಶಾದ್ಯಂತ ಕಾಂಗ್ರೆಸ್ ಬೆಂಬಲದೊಂದಿಗೆ ರೈತರು ಟ್ರಾಕ್ಟರ್ ಚಳವಳಿ ನಡೆಸಲು ಮುಂದಾಗಿದ್ದರು. ಆದರೆ, ಪೊಲೀಸರು ಆಯಾ ಕಡೆಗಳಲ್ಲೇ ತಡೆ ಬೇಲಿ ಹಾಕಿ, ಟ್ರಾಕ್ಟರ್ ರಾಜಧಾನಿಗೆ ಬರದಂತೆ ತಡೆದಿದ್ದಾರೆ.

Farmers protesting against agricultural reforms breached barricades and clashed in Delhi on Tuesday, prompting the police to fire tear gas at them, shortly after a convoy of tractors trundled through the city’s outskirts.