ಭಾರತೀಯ ಮುಸ್ಲಿಮನಾಗಿರುವುದಕ್ಕೆ ಹೆಮ್ಮೆಯಿದೆ ; ಗುಲಾಂ ನಬಿ ಆಜಾದ್ ಬಣ್ಣನೆ

09-02-21 06:05 pm       Headline Karnataka News Network   ದೇಶ - ವಿದೇಶ

ಜಗತ್ತಿನಲ್ಲಿ ಯಾವುದೇ ಮುಸ್ಲಿಮ್ ವ್ಯಕ್ತಿ ಗೌರವಪೂರ್ಣ ಜೀವನ ಮಾಡುತ್ತಿದ್ದರೆ, ಆತ ಭಾರತೀಯ ಮುಸ್ಲಿಮನೇ ಆಗಿರುತ್ತಾನೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ನವದೆಹಲಿ, ಫೆ.9: ಪಾಕಿಸ್ಥಾನಕ್ಕೆ ಹೋಗದೆ ಇರುವುದಕ್ಕೆ ಮತ್ತು ಭಾರತೀಯ ಮುಸ್ಲಿಮನಾಗಿ ಬದುಕುತ್ತಿರುವುದಕ್ಕೆ ನಾನು ಹೆಮ್ಮೆ ಪಡುತ್ತಿದ್ದೇನೆ ಎಂಬುದಾಗಿ ಕಾಂಗ್ರೆಸ್ ಹಿರಿಯ ಮುಖಂಡ, ರಾಜ್ಯಸಭಾ ಸದಸ್ಯ ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ರಾಜ್ಯಸಭಾ ಸದಸ್ಯತ್ವದ ಕೊನೆಯ ದಿನವಾದ ಮಂಗಳವಾರ ರಾಜ್ಯಸಭೆಯಲ್ಲಿ ವಿದಾಯ ಭಾಷಣ ಮಾಡಿದ ಗುಲಾಂ ನಬಿ ಆಜಾದ್ ತಮ್ಮ ಮನದಾಳವನ್ನು ಹೇಳಿಕೊಂಡಿದ್ದಾರೆ. ನನಗೆ ಯಾವಾಗಲೂ ಅನಿಸುತ್ತದೆ, ಸ್ವರ್ಗ ಎಂದಿದ್ದರೆ ಅದು ಹಿಂದುಸ್ಥಾನದಲ್ಲೇ ಅಂತ. ನಾನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಹುಟ್ಟಿದವನು. ಅಷ್ಟೇ ಅಲ್ಲಾ, ಪಾಕಿಸ್ಥಾನಕ್ಕೆ ತೆರಳದೆ ಇರುವ ಅದೃಷ್ಟವಂತ ಮುಸ್ಲಿಮರಲ್ಲಿ ನಾನು ಕೂಡ ಒಬ್ಬ ಎಂಬ ಹೆಮ್ಮೆ ನನಗಿದೆ. ಪಾಕಿಸ್ಥಾನದ ಪರಿಸ್ಥಿತಿಯನ್ನು ನೋಡಿದರೆ, ನಾನು ಹಿಂದುಸ್ಥಾನಿ ಮುಸ್ಲಿಂ ಆಗಿರುವುದಕ್ಕೆ ಹೆಮ್ಮೆ ಪಡುತ್ತೇನೆ ಎಂದು ಗುಲಾಂ ನಬಿ ಆಜಾದ್ ಹೇಳಿದ್ದಾರೆ.

ಜಗತ್ತಿನಲ್ಲಿ ಯಾವುದೇ ಮುಸ್ಲಿಮ್ ವ್ಯಕ್ತಿ ಗೌರವಪೂರ್ಣ ಜೀವನ ಮಾಡುತ್ತಿದ್ದರೆ, ಆತ ಭಾರತೀಯ ಮುಸ್ಲಿಮನೇ ಆಗಿರುತ್ತಾನೆ. ಕಳೆದ ಕೆಲವು ವರ್ಷಗಳಿಂದ ನೋಡುತ್ತಾ ಬಂದಿದ್ದೇವೆ. ಅಫ್ಘಾನಿಸ್ತಾನದಿಂದ ಹಿಡಿದು ಇರಾಕ್, ಸಿರಿಯಾ ಹೀಗೆ ಅವರಲ್ಲೇ ಬಡಿದಾಡಿಕೊಂಡು ಮುಸ್ಲಿಂ ದೇಶಗಳೇ ಹಾಳಾಗಿವೆ. ಅಲ್ಲೇನೂ ಹಿಂದುಗಳಿರಲಿಲ್ಲ, ಕ್ರಿಸ್ತಿಯನ್ನರೂ ಇಲ್ಲ. ಮುಸ್ಲಿಮರೇ ಇದ್ದುದು ಮತ್ತು ಅವರವರೇ ಹೊಡೆದಾಡಿಕೊಂಡು ಸತ್ತಿದ್ದಾರೆ. ಆದರೆ, ಭಾರತದಲ್ಲಿ ಹಿಂದುಗಳು ಬಹುಸಂಖ್ಯಾತರಾಗಿದ್ದರೂ, ಮುಸ್ಲಿಮನ ಗೌರವದ ಜೀವನಕ್ಕೆ ತೊಂದರೆಯಾಗಿಲ್ಲ ಎಂದು ಗುಲಾಂ ನಬಿ ಹೇಳಿದರು.

ತಮ್ಮ ಮತ್ತು ಪ್ರಧಾನಿ ಮೋದಿಯವರ ಗೆಳೆತನವನ್ನು ಸ್ಮರಿಸಿಕೊಂಡ ಆಜಾದ್, ರಾಜಕೀಯವಾಗಿ ಬಹಳಷ್ಟು ಬಾರಿ ಮೋದಿಯವರನ್ನು ಟೀಕಿಸಿದ್ದೇನೆ. ಮೋದಿ ಆಡಳಿತದ ಬಗ್ಗೆ ಟೀಕಿಸಿ, ಅವರ ಜೊತೆಗೇ ವಾಗ್ವಾದ ಮಾಡಿದ್ದೇನೆ. ಹಾಗೆಂದು ಮೋದಿ ಅದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ. ವೈಯಕ್ತಿಕವಾಗಿ ನಾನು ಅವರನ್ನು ಗೌರವಿಸುತ್ತೇನೆ. ಅವರು ಕೂಡ, ನನ್ನ ಬಗ್ಗೆ ಉತ್ತಮ ಬಾಂಧವ್ಯ ಇಟ್ಟುಕೊಂಡಿದ್ದಾರೆ. ಮೋದಿಯಲ್ಲೊಬ್ಬ ಶ್ರೇಷ್ಠ ರಾಜಕಾರಣಿಯನ್ನು ನಾನು ಕಂಡಿದ್ದೇನೆ ಎಂದು ಹೇಳಿದರು.

ಭಾವುಕರಾದ ಮೋದಿ...

ಗುಲಾಂ ನಬಿಯವರ ವಿದಾಯ ಭಾಷಣಕ್ಕೆ ಪ್ರತಿಕ್ರಿಯಿಸಿದ ಪ್ರಧಾನಿ ಮೋದಿ, ಗುಲಾಂ ನಬಿ ಬಗ್ಗೆ ಮಾತನಾಡುತ್ತಾ ಗದ್ಗದಿತರಾಗಿದ್ದು ಕಂಡುಬಂತು. ಆಜಾದ್ ಅವರಿಗೆ ಸಾಟಿಯಾಗಬಲ್ಲ ಇನ್ನೊಬ್ಬರನ್ನು ತರುವುದು ಕಷ್ಟ. ಅವರು ತಮ್ಮ ಪಕ್ಷ ಮತ್ತು ದೇಶದ ಬಗ್ಗೆ ಪ್ರೀತಿ ಹೊಂದಿದ್ದರು. ದೇಶದ ಬಗ್ಗೆ ಕಾಳಜಿ ಇಟ್ಟುಕೊಂಡು ರಾಜ್ಯಸಭೆಯಲ್ಲಿ ಚರ್ಚೆ ಮಾಡುತ್ತಿದ್ದರು. ಆಜಾದ್ ನನ್ನ ನಿಜವಾದ ಸ್ನೇಹಿತ. ಅಧಿಕಾರ ಬಂದಾಗ, ಅಧಿಕಾರ ಇಲ್ಲದೇ ಇದ್ದಾಗ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ನಾವು ಆಜಾದ್ ನೋಡಿ ಕಲಿಯಬೇಕು. ಇಂಥ ವ್ಯಕ್ತಿಯನ್ನು ರಾಜ್ಯಸಭೆಯಿಂದ ಬೀಳ್ಕೊಡುವುದಕ್ಕೆ ಮನಸ್ಸು ಭಾರವಾಗುತ್ತಿದೆ ಎಂದು ಭಾವುಕರಾದರು. 

Prime Minister Narendra Modi choked up and struggled to speak in parliament today during a farewell to a rival politician, Rajya Sabha Leader of Opposition Ghulam Nabi Azad.