ಮುಸ್ಲಿಂ ರಾಷ್ಟ್ರೀಯ ಮಂಚ್ ಅಧ್ಯಕ್ಷೆಯಿಂದ ರಾಮನ ದೇಗುಲಕ್ಕೆ 1 ಲಕ್ಷ ದೇಣಿಗೆ

10-02-21 04:01 pm       Headline Karnataka News Network   ದೇಶ - ವಿದೇಶ

ಮುಸ್ಲಿಂ ರಾಷ್ಟ್ರೀಯ ಮಂಚ್ ಇದರ ತಮಿಳುನಾಡು ರಾಜ್ಯಾಧ್ಯಕ್ಷೆ ಫಾತಿಮಾ ಆಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಬೆಂಗಳೂರು, ಫೆ.10 : ರಾಷ್ಟ್ರೀಯ ಸ್ವಯಂಸೇವಕ ಸಂಘದ ಪರಿವಾರ ಸಂಘಟನೆ ಆಗಿರುವ ಮುಸ್ಲಿಂ ರಾಷ್ಟ್ರೀಯ ಮಂಚ್ ಇದರ ತಮಿಳುನಾಡು ರಾಜ್ಯಾಧ್ಯಕ್ಷೆ ಫಾತಿಮಾ ಆಲಿ ಅಯೋಧ್ಯೆಯ ಶ್ರೀರಾಮ ಮಂದಿರ ನಿಧಿ ಸಂಗ್ರಹ ಅಭಿಯಾನಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮ ಮಂದಿರಕ್ಕೆ ಹಿಂದೂಗಳು ಮಾತ್ರವಲ್ಲದೇ ಮುಸ್ಲಿಮ್‌, ಕ್ರೈಸ್ತರು ಸೇರಿದಂತೆ ಇತರ ಧರ್ಮದ ಮುಖಂಡರು ಕೂಡ ದೇಣಿಗೆ ನೀಡುತ್ತಿದ್ದಾರೆ.

ಈ ಹಿಂದೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಗ್ರಾಪಂ ಮಾಜಿ ಸದಸ್ಯ ಮುಸ್ತಫೀಜ್‍ ಉಲ್ಲಾ ಹಾಗೂ ಜಾಮೀಯಾ ಮಸೀದಿಯ ಕಮಿಟಿಯಿಂದ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದರು. 

ರಾಮ ಮಂದಿರ ನಿರ್ಮಾಣಕ್ಕೆ ರಾಜ್ಯದ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು ಕೈಜೋಡಿಸಿದ್ದು, ಒಂದು ಕೋಟಿ ರೂಪಾಯಿಗೂ ಹೆಚ್ಚು ದೇಣಿಗೆ ನೀಡಿದ್ದಾರೆ.

ಫೆ.7 ರಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರು ಆಯೋಜಿಸಿದ್ದ ಸಭೆಯಲ್ಲಿ ಕ್ರೈಸ್ತ ಸಮುದಾಯದ ಉದ್ಯಮಿಗಳು, ಶಿಕ್ಷಣ ತಜ್ಞರು, ಅನಿವಾಸಿ ಭಾರತೀಯರು, ಸಿಇಒಗಳು, ಮಾರ್ಕೆಟಿಂಗ್ ತಜ್ಞರು, ಸಮಾಜ ಸೇವಕರು, ಸಮುದಾಯದ ಮುಖಂಡರು ಭಾಗಿಯಾಗಿದ್ದರಲ್ಲದೆ ಮಂದಿರ ನಿರ್ಮಾಣಕ್ಕೆ ತಮ್ಮ ಕೈಲಾದ ಅಳಿಲು ಸೇವೆ ಮಾಡುವುದಾಗಿ ಭರವಸೆ ನೀಡಿದ್ದರು.