ಹಿಂದುಕುಶ್ ಪರ್ವತ ಶ್ರೇಣಿಯಲ್ಲಿ ಕಂಪನ ; ನಡುಗಿದ ಪಂಜಾಬ್, ದೆಹಲಿ, ಕಾಶ್ಮೀರ, ಜನ ತತ್ತರ !

13-02-21 11:12 am       Headline Karnataka News Network   ದೇಶ - ವಿದೇಶ

ಉತ್ತರ ಭಾರತದ ಜಮ್ಮು ಕಾಶ್ಮೀರ, ದೆಹಲಿ, ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದ ಭಾಗಗಳು ಮತ್ತೆ ನಡುಗಿವೆ.

Photo credits : ANI

ನವದೆಹಲಿ, ಫೆ.13: ಉತ್ತರ ಭಾರತದ ಜಮ್ಮು ಕಾಶ್ಮೀರ, ದೆಹಲಿ, ಪಂಜಾಬ್, ಹರ್ಯಾಣ, ಹಿಮಾಚಲ ಪ್ರದೇಶದ ಭಾಗಗಳು ಮತ್ತೆ ನಡುಗಿವೆ. ನಿನ್ನೆ ತಡರಾತ್ರಿ ಭೂಕಂಪದ ಅನುಭವ ಆಗಿದ್ದು, ಜನರು ಭೀತಿಯಿಂದ ಮನೆಯಿಂದ ಹೊರಗೆ ಓಡಿಬಂದಿದ್ದಾರೆ.

ರಾತ್ರಿ 10.30ರ ವೇಳೆಗೆ ಭೂಮಿ ನಡುಗಿದ ಅನುಭವ ಆಗಿದ್ದು ಸುಮಾರು 20 ಸೆಕೆಂಡುಗಳ ಕಾಲ ಸರಣಿಯಂತೆ ಕಂಪನದ ಅನುಭವ ಆಗಿದೆ. ಕಂಪನದ ಕೇಂದ್ರ ಬಿಂದು ತಜಕಿಸ್ತಾನದ ಮುರ್ಘಾಬ್ ನಗರದ 35 ಕಿಮೀ ದೂರದಲ್ಲಿ ಕಂಡುಬಂದಿದ್ದು, ರಿಕ್ಟರ್ ಮಾಪಕದಲ್ಲಿ 5.9 ರಷ್ಟು ಕಂಪನದ ತೀವ್ರತೆ ಕಂಡುಬಂದಿದೆ. ಕಂಪನ ಕೇಂದ್ರದಿಂದ ಜಮ್ಮು ಕಾಶ್ಮೀರದ ಶ್ರೀನಗರಕ್ಕೆ 500 ಕಿಮೀ ದೂರವಿದ್ದು ಜನರು ಭೂಮಿ ಕಂಪಿಸುವುದನ್ನು ನೋಡಿ ಮನೆ, ಕಟ್ಟಡಗಳಿಂದ ಓಡಿ ಬಂದಿದ್ದಾರೆ.

ಈ ಬಗ್ಗೆ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಟ್ವೀಟ್ ಮಾಡಿದ್ದು, 2005ರ ಬಳಿಕ ಇದೇ ಮೊದಲ ಬಾರಿಗೆ ಇಷ್ಟರ ಪ್ರಮಾಣದಲ್ಲಿ ಕಂಪನದ ಅನುಭವ ಆಗಿದೆ. ಭೂಮಿ ಕಂಪಿಸುವುದು ಗೊತ್ತಾದ ಕೂಡಲೇ ಮನೆಯಿಂದ ಹೊರಗೆ ಓಡಿಬಂದಿದ್ದೆ ಎಂದು ಟ್ವೀಟ್ ಮಾಡಿದ್ದಾರೆ.

ಜಮ್ಮು ಕಾಶ್ಮೀರ, ಹಿಮಾಚಲದ ಹಲವು ಕಡೆಗಳಲ್ಲಿ ಮನೆಗಳ ಗೋಡೆ ಬಿರುಕು ಬಿಟ್ಟಿದೆ. ಮನೆಗೆ ಹಾನಿ ಆಗಿದ್ದು ಬಿಟ್ಟರೆ ಸಾವು ನೋವು ಆಗಿರುವ ಬಗ್ಗೆ ಮಾಹಿತಿ ಬಂದಿಲ್ಲ.

ಅಮೃತಸರದ ಸೌರವ್ ಶರ್ಮಾ ಎಂಬ ವ್ಯಕ್ತಿಯೊಬ್ಬ ಹೀಗೆ ಟ್ವೀಟ್ ಮಾಡಿದ್ದಾರೆ. ರಾತ್ರಿ ಹತ್ತೂವರೆ ಆಗಿತ್ತು. ನಾನು ಬೆಡ್ ಸರಿಮಾಡಿ ಇನ್ನೇನು ಮಲಗಬೇಕೆಂದು ರೆಡಿಯಾಗಿದ್ದೆ. ಸಡನ್ನಾಗಿ ಬೆಡ್ ಇದ್ದ ಮಂಚ ಅಲುಗಾಡಿದ ರೀತಿ ಆಯ್ತು. ಮೇಲಿದ್ದ ಸೀಲಿಂಗ್ ಫ್ಯಾನ್ ಕೂಡ ಶೇಕ್ ಆಗ್ತಿತ್ತು. ಕೂಡಲೇ ಭಯದಿಂದ ಮನೆಯಿಂದ ಹೊರಗೆ ಓಡಿದೆ. ಅಲ್ಲಿ ನೆರೆಮನೆಯ ಮಂದಿ ಕೂಡ ಹೊರಗೆ ಓಡಿಬರುತ್ತಿದ್ದರು. ಜನರು ರಸ್ತೆಯಲ್ಲಿ ನಿಂತು ಆತಂಕದಿಂದ ಮನೆಯತ್ತ ನೋಡುತ್ತಿದ್ದರು ಎಂದು ಬರೆದಿದ್ದಾನೆ.

ತಜಕಿಸ್ತಾನ ಹಿಂದು ಕುಶ್ ಪರ್ವತ ಶ್ರೇಣಿಯಲ್ಲಿದ್ದು, ಆ ಭಾಗದಲ್ಲಿ ಕಳೆದ 5 ವರ್ಷದಲ್ಲಿ 15ಕ್ಕಿಂತಲೂ ಹೆಚ್ಚು ಬಾರಿ ಭೂಕಂಪನ ಆಗಿದೆ. ಈ ಭಾಗದ ಟೆಕ್ಟೋನಿಕ್ ಪ್ಲೇಟ್ಸ್ ನಲ್ಲಿ ಬದಲಾವಣೆ ಕಂಡುಬರುತ್ತಿದ್ದು, ಕಂಪನ ಸಹಜ ಎಂದು ಅಮೆರಿಕದ ಸಂಶೋಧನಾ ಸಂಸ್ಥೆ ವರದಿ ಮಾಡಿದೆ. 

ತಝಕಿಸ್ತಾನ, ಅಫ್ಘಾನಿಸ್ತಾನ, ಪಾಕಿಸ್ತಾನ, ಭಾರತ ಹೀಗೆ ಆಸುಪಾಸಿನ ನಾಲ್ಕು ದೇಶಗಳಲ್ಲಿ ಭೂಕಂಪದ ಅನುಭವ ಆಗಿದ್ದು ಈ ಭಾಗದ ಜನರು ರಾತ್ರಿ ವೇಳೆ ಭೀತಿಗೊಳಗಾಗಿ ಹೊರಗೆ ಓಡಿಬಂದಿದ್ದಾರೆ.

earthquake tremors were felt in Jammu and Kashmir, Delhi-NCR and even parts of Uttar Pradesh, Uttarakhand and Punjab around 10.30 pm Friday night. The epicentre of the earthquake is still unclear but initial inputs hint that the tremors originated from Tajikistan.