ತಿರುಪತಿ ಬಳಿ ಭೀಕರ ಅಪಘಾತ ; ಮಿನಿ ವ್ಯಾನಲ್ಲಿದ್ದ 14 ಮಂದಿ ಸ್ಥಳದಲ್ಲೇ ಸಾವು !!

14-02-21 12:10 pm       Headline Karnataka News Network   ದೇಶ - ವಿದೇಶ

ಕರ್ನೂರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. 

ಕರ್ನೂಲ್, ಫೆ.14: ಇಲ್ಲಿನ ಕರ್ನೂರ್ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ಇಂದು ನಸುಕಿನಲ್ಲಿ ನಡೆದ ಭೀಕರ ಅಪಘಾತದಲ್ಲಿ 14 ಮಂದಿ ಸ್ಥಳದಲ್ಲೇ ಸಾವು ಕಂಡಿದ್ದಾರೆ. 

ಚಿತ್ತೂರು ಜಿಲ್ಲೆಯ ಮದನಪಲ್ಲೆ ಗ್ರಾಮದಿಂದ ರಾಜಸ್ಥಾನದ ಅಜ್ಮೀರ್ ಗೆ ಯಾತ್ರೆ ಹೊರಟಿದ್ದ ಕುಟುಂಬದ ಮಿನಿ ವ್ಯಾನ್ ಟ್ರಕ್ ಒಂದಕ್ಕೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಕರ್ನೂಲ್ ಜಿಲ್ಲೆಯ ವೇಲ್ದುರ್ತಿ ತಾಲೂಕು ವ್ಯಾಪ್ತಿಯ ಮಾದಾರಪುರಂ ಗ್ರಾಮದಲ್ಲಿ ನಸುಕಿನ 3.30ರ ಸುಮಾರಿಗೆ ಘಟನೆ ನಡೆದಿದೆ. 

ಎಂಟು ಮಹಿಳೆಯರು, ಐದು ಪುರುಷರು ಮತ್ತು ಒಂದು ಮಗು ಮೃತರಲ್ಲಿ ಸೇರಿದ್ದು ಅಪಘಾತದ ತೀವ್ರತೆಗೆ ದೇಹಗಳು ಅಪ್ಪಚ್ಚಿಯಾಗಿದ್ದವು. ಒಂದಕ್ಕೊಂದು ಅಂಟಿಕೊಂಡಿದ್ದ ವಾಹನವನ್ನು ಜೆಸಿಬಿ ತಂದು ಹಗ್ಗ ಕಟ್ಟಿ ಎಳೆದು ಬಿಡಿಸಲಾಯ್ತು. ಇಬ್ಬರು ಮಕ್ಕಳು ಸೇರಿದಂತೆ ನಾಲ್ವರು ತೀವ್ರ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ. 

ಪೊಲೀಸರ ಪ್ರಕಾರ, ಮಿನಿ ವ್ಯಾನ್ ಚಾಲಕ ಅತಿ ವೇಗದಿಂದ ಇದ್ದ ಅಥವಾ ವೇಗದಲ್ಲಿರುವಾಗಲೇ ವ್ಯಾನ್ ಟೈರ್ ಸಿಡಿದು ಅಪಘಾತಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ.‌ ಅಪಘಾತದ ಕಾರಣ ಹೆದ್ದಾರಿಯಲ್ಲಿ ಪೂರ್ತಿ ಟ್ರಾಫಿಕ್ ಜಾಮ್ ಉಂಟಾಗಿತ್ತು. 

ಘಟನೆ ಬಗ್ಗೆ ಸಿಎಂ ಜಗನ್ಮೋಹನ ರೆಡ್ಡಿ ಆಘಾತ ವ್ಯಕ್ತಪಡಿಸಿದ್ದು ಗಾಯಾಳುಗಳಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವಂತೆ ಕರ್ನೂಲ್ ಜಿಲ್ಲಾಧಿಕಾರಿಗೆ ಸೂಚನೆ ನೀಡಿದ್ದಾರೆ. ಕರ್ನೂಲ್ ಜಿಲ್ಲಾಧಿಕಾರಿ ಪ್ರಕಾರ, ಚಿತ್ತೂರು ಜಿಲ್ಲೆಯಿಂದ ಹೊರಟಿದ್ದ ಮಿನಿ ವ್ಯಾನ್ ನಲ್ಲಿ 18 ಮಂದಿ ಇದ್ದರು. 14 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.