ಅಹ್ಮದಾಬಾದ್ ಜಗತ್ತಿನ ಅತಿದೊಡ್ಡ ಕ್ರಿಕೆಟ್ ಮೈದಾನ ; ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರುನಾಮಕರಣ

24-02-21 02:53 pm       Headline Karnataka News Network   ದೇಶ - ವಿದೇಶ

ಮೊಟೇರಾ ಕ್ರಿಕೆಟ್ ಸ್ಟೇಡಿಯಂ ನ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ.

ಅಹ್ಮದಾಬಾದ್, ಫೆ.24: ಅಹ್ಮದಾಬಾದ್ ನಲ್ಲಿರುವ ಮೊಟೇರಾ ಕ್ರಿಕೆಟ್ ಸ್ಟೇಡಿಯಂ ನವೀಕರಣಗೊಂಡು ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಎಂಬ ಹೆಗ್ಗಳಿಕೆ ಪಡೆದಿದ್ದಲ್ಲದೆ ಅದರ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂದು ಮರು ನಾಮಕರಣ ಮಾಡಲಾಗಿದೆ. ಸರ್ದಾರ್ ವಲ್ಲಭಬಾಯ್ ಪಟೇಲ್ ಸ್ಟೇಡಿಯಂ ಎಂದಿದ್ದ ಹೆಸರನ್ನು ನರೇಂದ್ರ ಮೋದಿ ಸ್ಟೇಡಿಯಂ ಎಂಬುದಾಗಿ ಹೆಸರಿಸಲಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ್, ನವೀಕೃತ ಸ್ಟೇಡಿಯಂ ಅನ್ನು ಲೋಕಾರ್ಪಣೆ ಮಾಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಉಪಸ್ಥಿತರಿದ್ದರು.  

ನವೀಕರಣಗೊಂಡ ಬಳಿಕ ಕ್ರಿಕೆಟ್ ಸ್ಟೇಡಿಯಂನಲ್ಲಿ 1 ಲಕ್ಷದ ಹತ್ತು ಸಾವಿರ ಮಂದಿಗೆ ಕುಳಿತುಕೊಳ್ಳುವ ಆಸನ ಸಾಮರ್ಥ್ಯವನ್ನು ವೃದ್ಧಿಸಲಾಗಿದೆ. 1982ರಲ್ಲಿ ಈ ಸ್ಟೇಡಿಯಂ ಸ್ಥಾಪನೆ ಮಾಡಿದ್ದು, ಮೊದಲಿಗೆ 49 ಸಾವಿರ ಮಂದಿಗೆ ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. 63 ಎಕ್ರೆ ವ್ಯಾಪ್ತಿಯಲ್ಲಿ ಹರಡಿಕೊಂಡಿರುವ ಸ್ಟೇಡಿಯಂನಲ್ಲಿ ಇಂಡೋರ್ ಕ್ರಿಕೆಟ್ ಅಕಾಡೆಮಿಯೂ ಇತ್ತು. ಅದರಲ್ಲಿ 40 ಕ್ರೀಡಾಳುಗಳಿಗಷ್ಟೇ ಅಭ್ಯಾಸಕ್ಕೆ ಅವಕಾಶ ಇತ್ತು. ಈಗ ಸ್ಟೇಡಿಯಂ ಪೂರ್ತಿ ನವೀಕರಣಗೊಂಡಿದ್ದು, ನಾಲ್ಕು ತಂಡಗಳು ಏಕಕಾಲದಲ್ಲಿ ಉಳಿದುಕೊಳ್ಳಲು, ಅಭ್ಯಾಸ ಮಾಡುವುದಕ್ಕೆ ಮತ್ತು ಆರು ಇಂಡೋರ್ ಪ್ರಾಕ್ಟೀಸ್ ಪಿಚ್ ಕೂಡ ಮಾಡಲಾಗಿದೆ. ಮೂರು ಕಡೆ ಹೊರಾಂಗಣ ಅಭ್ಯಾಸಕ್ಕೆ ಪಿಚ್ ವ್ಯವಸ್ಥೆ ಮಾಡಲಾಗಿದೆ.

ಸದ್ಯಕ್ಕೆ ನರೇಂದ್ರ ಮೋದಿ ಸ್ಟೇಡಿಯಂ ಜಗತ್ತಿನ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಲ್ಲದೆ, ಎರಡನೇ ಅತಿದೊಡ್ಡ ಕ್ರೀಡಾ ಮೈದಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದರೊಂದಿಗೆ ವ್ಯಾಪ್ತಿ ಮತ್ತು ಸಾಮರ್ಥ್ಯದಲ್ಲಿ ಮೆಲ್ಬರ್ನ್ ಕ್ರಿಕೆಟ್ ಸ್ಟೇಡಿಯಂ ಎರಡನೇ ಸ್ಥಾನಕ್ಕೆ ಮತ್ತು ಕೊಲ್ಕತ್ತಾದ ಈಡನ್ ಗಾರ್ಡನ್ ಮೂರನೇ ಸ್ಥಾನಕ್ಕೆ ಕುಸಿದಿದೆ.

ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಪಂದ್ಯ ಇದೇ ಸ್ಟೇಡಿಯಂನಲ್ಲಿ ನಡೆಯಲಿದ್ದು, ಹೊಸ ಮೈದಾನದಲ್ಲಿ ಹೊಸ ಕಳೆಯೊಂದಿಗೆ ಆಟಗಾರರು ಫೀಲ್ಡಿಗಿಳಿಯಲಿದ್ದಾರೆ. 

The Motera Stadium, the biggest cricket stadium in the world, was inaugurated by President Ram Nath Kovind and was renamed the Narendra Modi Stadium.