ಕೊರೊನಾ ಲಸಿಕೆಯ 2ನೇ ಡೋಸ್ ಪಡೆದು ವ್ಯಕ್ತಿ ಸಾವು!

03-03-21 12:01 pm       Headline Karnataka News Network   ದೇಶ - ವಿದೇಶ

ಕೋವಿಡ್-19 ವಿರುದ್ಧ ಲಸಿಕೆಯ ಎರಡನೇ ಡೋಸ್ ಪಡೆದ ಸ್ವಲ್ಪ ಹೊತ್ತಿನಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈ, ಮಾ 3: ಕೋವಿಡ್-19 ವಿರುದ್ಧ ಲಸಿಕೆಯ ಎರಡನೇ ಡೋಸ್ ಪಡೆದ ಸ್ವಲ್ಪ ಹೊತ್ತಿನ ಬಳಿಕ ಮಹಾರಾಷ್ಟ್ರದ 45ರ ವಯಸ್ಸಿನ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳವಾರ ನಡೆದಿದೆ.

ವೈದ್ಯರೊಬ್ಬರ ಬಳಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಭಿವಂಡಿ ನಿವಾಸಿ ಸುಖದೇವ್ ಕಿರ್ದಾತ್ ಎರಡನೇ ಡೋಸ್ ಪಡೆದ ಬಳಿಕ ಸುಮಾರು 15 ನಿಮಿಷಗಳ ಕಾಲ ನಿಗಾ ಕೊಠಡಿಯಲ್ಲಿ ಇದ್ದರು.

ಅಸ್ವಸ್ಥರಾದ ಸುಖದೇವ್ ಅವರನ್ನು ಹತ್ತಿರದ ಇಂದಿರಾ ಗಾಂಧಿ ಸ್ಮಾರಕ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಆದರೆ ಅಲ್ಲಿ ಅವರು ಮೃತಪಟ್ಟರೆಂದು ಘೋಷಿಸಲಾಯಿತು. 

ಸಾವಿಗೆ ಕಾರಣ ಏನೆಂದು ಇನ್ನೂ ಗೊತ್ತಾಗಿಲ್ಲ. ಮರಣೋತ್ತರ ಪರೀಕ್ಷೆಯಲ್ಲಿ ಇದು ಸ್ಪಷ್ಟವಾಗಲಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಆರೋಗ್ಯ ಕಾರ್ಯಕರ್ತರೆಂಬ ನೆಲೆಯಲ್ಲಿ ಸುಖದೇವ್ ಜನವರಿ 28ರಂದು ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದರು.

“ಅವರು ಒಂದು ತಿಂಗಳ ಹಿಂದೆ ತನ್ನ ಮೊದಲ ಡೋಸ್ ಪಡೆದಿದ್ದರು. ಯಾವುದೇ ಸಮಸ್ಯೆಯಾಗಿರಲಿಲ್ಲ. ಎರಡನೇ ಡೋಸ್ ಕೊಡುವ ಮೊದಲು ಸಂಪೂರ್ಣ ವೈದ್ಯಕೀಯ ತಪಾಸಣೆ ಮಾಡಲಾಗಿತ್ತು. ಅವರಿಗೆ ಹಲವು ವರ್ಷಗಳಿಂದ ರಕ್ತದೊತ್ತಡ ಇರುವುದು ನಮಗೆ ಗೊತ್ತಾಗಿದೆ. ಕಾಲಿನಲ್ಲಿ ದಪ್ಪವಾಗುವ ಲಕ್ಷಣಗಳಿದ್ದವು. ಇಲ್ಲಿ ಅವರ ಬಿಪಿ ಹಾಗೂ ಆಕ್ಸಿಜನ್ ಸಾಮಾನ್ಯವಾಗಿತ್ತು. ಅವರ ಸಾವಿಗೆ ಕಾರಣ ಏನೆಂದು ಹೇಳಲು ಕಷ್ಟವಾಗುತ್ತದೆ. ಮರಣೋತ್ತರ ವರದಿಯಿಂದಲೇ ನಿಜಾಂಶ ಗೊತ್ತಾಗಬೇಕಾಗಿದೆ ಎಂದು ಆಸ್ಪತ್ರೆಯ ವೈದ್ಯ ಕೆ.ಆರ್. ಖರತ್ ತಿಳಿಸಿದ್ದಾರೆ. 

60ಕ್ಕಿಂತ ಹೆಚ್ಚು ವಯಸ್ಸಿನ ಹಾಗೂ ಇತರ ಕಾಯಿಲೆಯಿರುವ 45ಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ ಮಾರ್ಚ್ 1ರಿಂದ ದೇಶಾದ್ಯಂತ 2ನೇ ಹಂತದ ಲಸಿಕೆ ನೀಡಿಕೆ ಅಭಿಯಾನ ಆರಂಭವಾಗಿದೆ. ಆರೋಗ್ಯ ಕಾರ್ಯಕರ್ತರು, ಸ್ವಚ್ಚತಾ ಕರ್ಮಿಗಳು ಮೊದಲ ಸುತ್ತಿನಲ್ಲಿ ಡೋಸ್ ಗಳನ್ನು ಪಡೆದಿದ್ದರು.

A 45-year-old man in Maharashtra died yesterday, shortly after taking a second dose of the anti-Covid vaccine.