ತಮಿಳುನಾಡಿನಲ್ಲಿ ಜುವೆಲ್ಲರಿ ಕಂಪನಿಗೆ ಐಟಿ ದಾಳಿ ; ಸಾವಿರ ಕೋಟಿಗೂ ಹೆಚ್ಚು ಅಕ್ರಮ ಆಸ್ತಿ ಪತ್ತೆ

07-03-21 06:17 pm       Headline Karnataka News Network   ದೇಶ - ವಿದೇಶ

ದಕ್ಷಿಣ ಭಾರತದ ಪ್ರಮುಖ ಜುವೆಲ್ಲರಿ ಕಂಪನಿಗೆ ಸೇರಿದ 27ಕ್ಕೂ ಹೆಚ್ಚು ಕಚೇರಿ ಮತ್ತು ಮಳಿಗೆಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದೆ.

ಚೆನ್ನೈ, ಮಾ.7: ದಕ್ಷಿಣ ಭಾರತದ ಪ್ರಮುಖ ಜುವೆಲ್ಲರಿ ಕಂಪನಿಗೆ ಸೇರಿದ 27ಕ್ಕೂ ಹೆಚ್ಚು ಕಚೇರಿ ಮತ್ತು ಮಳಿಗೆಗಳಿಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ಒಂದು ಸಾವಿರ ಕೋಟಿಗೂ ಹೆಚ್ಚು ಅಕ್ರಮ ಸಂಪತ್ತನ್ನು ಪತ್ತೆ ಮಾಡಿದ್ದಾರೆ.

ತಮಿಳುನಾಡು ಒಂದರಲ್ಲೇ ಕಂಪನಿಗೆ ಸೇರಿದ 22 ಕಡೆಗಳಲ್ಲಿ ದಾಳಿ ನಡೆದಿದ್ದರೆ, ಮುಂಬೈ, ಜೈಪುರ, ತ್ರಿಶ್ಶೂರ್ ನಲ್ಲಿಯೂ ದಾಳಿ ನಡೆದಿದೆ. ತಮಿಳುನಾಡಿನಲ್ಲಿ ಭಾರೀ ಪ್ರಮಾಣದ ಅನಧಿಕೃತ ಆಸ್ತಿಯನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಚೆನ್ನೈ, ತಿರುಚಿರಾಪಳ್ಳಿ, ನೆಲ್ಲೂರು, ಮದುರೈ, ಕೊಯಂಬತ್ತೂರು ಹೀಗೆ ವಿವಿಧ ಕಡೆ ದಾಳಿ ನಡೆದಿತ್ತು.

ವಿಧಾನಸಭೆ ಚುನಾವಣೆ ಸಂದರ್ಭದಲ್ಲೇ ಐಟಿ ದಾಳಿ ನಡೆದು, ಭಾರೀ ಅಕ್ರಮವನ್ನು ಪತ್ತೆ ಮಾಡಿದ್ದು ರಾಜಕೀಯ ಪಕ್ಷಗಳನ್ನು ಚಿಂತೆಗೀಡು ಮಾಡಿದೆ. ನಗದು ಮೂಲಕ ಅನಧಿಕೃತ ಆಸ್ತಿ ಪತ್ರಗಳನ್ನು ಹೊಂದಿರುವುದು, ನೋಟು ಬ್ಯಾನ್ ಸಂದರ್ಭದಲ್ಲಿ ಭಾರೀ ಅಕ್ರಮ ವಹಿವಾಟು ನಡೆಸಿರುವುದು ದಾಳಿ ವೇಳೆ ಪತ್ತೆಯಾಗಿದೆ.

ಲೆಕ್ಕಪತ್ರಗಳಿಲ್ಲದ ನಗದು ವ್ಯವಹಾರ, ನೋಟು ಬ್ಯಾನ್ ಸಂದರ್ಭದಲ್ಲಿ ಮಾಡಲಾದ ಠೇವಣಿಗಳು, ಅಕ್ರಮ ವಹಿವಾಟು ನಡೆಸಿರುವ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ, ದಾಳಿಗೆ ಒಳಗಾದ ಜುವೆಲ್ಲರಿ ಕಂಪನಿಯ ಹೆಸರನ್ನು ಅಧಿಕಾರಿಗಳು ದೃಢಪಡಿಸಿಲ್ಲ. ತಮಿಳುನಾಡಿನಲ್ಲಿ ವಿಧಾನಸಭೆ ಚುನಾವಣೆ ರಂಗೇರುತ್ತಿರುವ ಸಂದರ್ಭದಲ್ಲೇ ಐಟಿ ದಾಳಿ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.