ಸೌದಿಯ ಅತಿದೊಡ್ಡ ತೈಲ ಸ್ಥಾವರಕ್ಕೆ ಯೆಮೆನ್ ಬಂಡುಕೋರರಿಂದ ಡ್ರೋಣ್ ದಾಳಿ

09-03-21 05:54 pm       Headline Karnataka News Network   ದೇಶ - ವಿದೇಶ

ಇರಾನ್ ಪ್ರೇರಿತ ಯೆಮೆನ್ ಬಂಡುಕೋರರು ಸೌದಿ ಅರೇಬಿಯಾದ ಎರಡು ಅತಿದೊಡ್ಡ ಪೆಟ್ರೋಲಿಯಂ ಸ್ಥಾವರಗಳನ್ನು ಗುರಿಯಾಗಿರಿಸಿ ಮಿಸೈಲ್ ದಾಳಿ ನಡೆಸಿದ್ದಾರೆ.

ದಮ್ಮಾಮ್, ಮಾ.9: ಇರಾನ್ ಪ್ರೇರಿತ ಯೆಮೆನ್ ಬಂಡುಕೋರರು ಸೌದಿ ಅರೇಬಿಯಾದ ಎರಡು ಅತಿದೊಡ್ಡ ಪೆಟ್ರೋಲಿಯಂ ಸ್ಥಾವರಗಳನ್ನು ಗುರಿಯಾಗಿರಿಸಿ ಮಿಸೈಲ್ ದಾಳಿ ನಡೆಸಿದ್ದಾರೆ. ಡ್ರೋಣ್ ಮೂಲಕ ದಾಳಿ ಆಗಿರುವುದನ್ನು ಸೌದಿ ಅರೇಬಿಯಾ ಸರಕಾರ ದೃಢಪಡಿಸಿದೆ. ದಮ್ಮಾಮ್ ಬಳಿಯಿರುವ ರಾಸ್ ತನುರಾ ಪೋರ್ಟ್ ಮತ್ತು ಡಹ್ರಾನ್ ಸ್ಥಾವರ ಜಗತ್ತಿನ ಅತಿ ದೊಡ್ಡ ಪೆಟ್ರೋಲಿಯಂ ಸ್ಥಾವರಗಳಲ್ಲಿ ಒಂದಾಗಿದ್ದು ಆದಿತ್ಯವಾರ ಅದರ ಮೇಲೆ ಬಾಂಬ್ ದಾಳಿ ನಡೆದಿದೆ.

ಸಮುದ್ರ ಪ್ರದೇಶದಿಂದ ಮಿಸೈಲ್ ಮತ್ತು ಡ್ರೋಣ್ ದಾಳಿ ಮಾಡಿದ್ದು ಅದನ್ನು ತಡೆದಿದ್ದೇವೆ ಎಂದು ಸೌದಿ ಅರೇಬಿಯಾ ಸಚಿವಾಲಯ ಹೇಳಿಕೊಂಡಿದೆ. ಡಹ್ರಾನ್ ಸಿಟಿಯಲ್ಲಿರುವ ಆರಾಮ್ಕೋ ತೈಲ ಸ್ಥಾವರ ಗುರಿಯಾಗಿಸಿ ದಾಳಿ ನಡೆಸಲಾಗಿತ್ತು. ದಾಳಿ ಘಟನೆಯಲ್ಲಿ ಯಾವುದೇ ಸಾವು – ನೋವು ಆಗಿಲ್ಲ ಎಂದು ಸಚಿವಾಲಯದ ಅಧಿಕಾರಿಗಳು ದೃಢಪಡಿಸಿದ್ದಾರೆ.

ಇರಾನ್ ಪ್ರೇರಿತ ಯೆಮೆನ್ ಪ್ರಾಂತದ ಹೌತಿ ಬಂಡುಕೋರರು ಮತ್ತು ಸೌದಿ ಅರೇಬಿಯಾ ನಡುವಿನ ಸಂಘರ್ಷ ಹಲವು ವರ್ಷಗಳಿಂದ ನಡೆಯುತ್ತಿದೆ. ಇತ್ತೀಚೆಗೆ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಯೆಮೆನ್ ಬಂಡುಕೋರರ ಸಂಘರ್ಷ ಕೊನೆಗಾಣಿಸುವ ಮಾತನ್ನಾಡಿದ್ದರು. ಮಾತುಕತೆ ಮೂಲಕ ಸುದೀರ್ಘ ಕಾಲದ ಸಮರವನ್ನು ಕೊನೆಗಾಣಿಸುವುದಾಗಿ ಹೇಳಿದ್ದರು. ಸೌದಿ ಅರೇಬಿಯಾಗೆ ಅಮೆರಿಕದ ಮಿಲಿಟರಿ ಬೆಂಬಲ ಇದ್ದು, ಯೆಮನ್ ವಿರುದ್ಧ ದಾಳಿ ನಡೆಸಲು ನೆರವು ನೀಡಿತ್ತು. ಆದರೆ, ಬೈಡನ್ ಅಧಿಕಾರಕ್ಕೆ ಬಂದ ಬಳಿಕ ಮಿಲಿಟರಿ ಬೆಂಬಲವನ್ನು ಹಿಂತೆಗೆಯುವ ಮಾತನ್ನಾಡಿದ್ದರು.

ಇದೇ ವೇಳೆ, ಯೆಮೆನ್ ಪ್ರಾಂತದ ಹೌತಿ ಬಂಡುಕೋರರ ಪರವಾಗಿ ಅದರ ಬ್ರಿಗೇಡಿಯರ್ ಒಬ್ಬ ಹೇಳಿಕೆ ಬಿಡುಗಡೆ ಮಾಡಿದ್ದು, ಜಗತ್ತಿನ ಅತಿ ದೊಡ್ಡ ತೈಲ ಸ್ಥಾವರಕ್ಕೆ 14 ಡ್ರೋಣ್ ಮತ್ತು ಎಂಟು ಮಿಸೈಲ್ ದಾಳಿ ನಡೆಸಲಾಗಿದೆ ಎಂದಿದ್ದಾನೆ. ದಾಳಿಯಿಂದ ದೊಡ್ಡ ಹಾನಿ ಆಗಿದ್ದಾದರೆ, ತೈಲ ಬೆಲೆ ಭವಿಷ್ಯದಲ್ಲಿ ಮತ್ತಷ್ಟು ಹೆಚ್ಚುವ ಸಾಧ್ಯತೆಯಿದೆ. ಭಾರತಕ್ಕೂ ತೈಲವನ್ನು ಇರಾನ್ ಮತ್ತು ಸೌದಿಯಿಂದ ಆಮದು ಮಾಡಲಾಗುತ್ತಿದೆ.