ಉತ್ತರಾಖಂಡ ಬಿಜೆಪಿ ಸರಕಾರದಲ್ಲಿ ಸಿಎಂ ಬದಲಾವಣೆ ಪರ್ವ ; ರಾವತ್ ರಾಜಿನಾಮೆ

09-03-21 06:12 pm       Headline Karnataka News Network   ದೇಶ - ವಿದೇಶ

ಬಿಜೆಪಿ ಹೈಕಮಾಂಡ್ ಗರಂ ಬಳಿಕ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅಂತೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ.

ಡೆಹ್ರಾಡೂನ್, ಮಾ.9: ಬಿಜೆಪಿ ಹೈಕಮಾಂಡ್ ಗರಂ ಬಳಿಕ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್ ರಾವತ್ ಅಂತೂ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ. ಸಿಎಂ ಕುರ್ಚಿ ಬಿಟ್ಟುಕೊಡಬೇಕೆಂಬ ಹೈಕಮಾಂಡ್ ಸೂಚನೆಯ ಬಳಿಕ ಹಲವು ದಿನಗಳಿಂದ ಸ್ಥಾನ ಉಳಿಸಿಕೊಳ್ಳಲು ರಾವತ್ ಮಾಡಿದ್ದ ಕಸರತ್ತು ಫಲ ನೀಡಲಿಲ್ಲ.

ನಿನ್ನೆ ದೆಹಲಿಗೆ ತೆರಳಿ ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಷಾ ಮತ್ತು ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಜೊತೆ ಚರ್ಚಿಸಿ ಬಂದಿದ್ದ ರಾವತ್, ಇಂದು ಸಂಜೆ ರಾಜ್ಯಪಾಲೆ ಬೇಬಿ ರಾಣಿ ಮೌರ್ಯಾಗೆ ರಾಜಿನಾಮೆ ಪತ್ರ ನೀಡಿದ್ದಾರೆ. ಮುಂದಿನ ಮುಖ್ಯಮಂತ್ರಿ ಆಯ್ಕೆಯಾಗುವ ವರೆಗೆ ತಾವೇ ಅಧಿಕಾರದಲ್ಲಿ ಮುಂದುವರಿಯುವಂತೆ ರಾಜ್ಯಪಾಲರು ಸಲಹೆ ನೀಡಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ರಾವತ್, ಸಾಮಾನ್ಯ ಕಾರ್ಯಕರ್ತನಿಗೆ ಪಕ್ಷ ಮುಖ್ಯಮಂತ್ರಿ ಪಟ್ಟ ಕೊಟ್ಟಿದೆ. ನಾನೊಬ್ಬ ಸೈನಿಕನ ಪುತ್ರ. ಜವಾಬ್ದಾರಿಯನ್ನು ಚೆನ್ನಾಗಿ ನಿರ್ವಹಿಸಿದ್ದೇನೆಂಬ ತೃಪ್ತಿ ಇದೆ. ಮುಂದಿನ ನಾಯಕನಿಗೆ ಸೀಟು ಬಿಟ್ಟುಕೊಡಲು ಸಿದ್ಧನಿದ್ದೇನೆ ಎಂದಿದ್ದಾರೆ.

2017ರಲ್ಲಿ ನಡೆದ ಚುನಾವಣೆಯಲ್ಲಿ 69 ಸ್ಥಾನಗಳ ಅಸೆಂಬ್ಲಿಯಲ್ಲಿ ಬಿಜೆಪಿ 59 ಸ್ಥಾನಗಳನ್ನು ಪಡೆದು ಅಧಿಕಾರ ಹಿಡಿದಿತ್ತು. ಕಾಂಗ್ರೆಸ್ ಕೇವಲ 11 ಸ್ಥಾನಗಳಿಗೆ ತೃಪ್ತಿಪಟ್ಟಿತ್ತು. 60 ವರ್ಷದ ತ್ರಿವೇಂದ್ರ ಸಿಂಗ್ ರಾವತ್ ಮುಖ್ಯಮಂತ್ರಿಯಾಗಿ ನಾಲ್ಕು ವರ್ಷಗಳ ಆಡಳಿತ ನಡೆಸಿದ್ದು, ಮುಂದಿನ ಚುನಾವಣೆಗೆ ಒಂದು ವರ್ಷ ಇರುವಾಗ ಆಡಳಿತ ತೃಪ್ತಿ ನೀಡದ ಕಾರಣವೊಡ್ಡಿ ಮುಖ್ಯಮಂತ್ರಿ ಕುರ್ಚಿ ಬಿಟ್ಟುಕೊಡಲು ಹೈಕಮಾಂಡ್ ಸೂಚನೆ ನೀಡಿದೆ. ಹೀಗಾಗಿ ದೆಹಲಿ ನಾಯಕರನ್ನು ಭೇಟಿಯಾಗಿ ಕುರ್ಚಿ ಉಳಿಸಿಕೊಳ್ಳಲು ರಾವತ್ ನಿರಂತರ ಕಸರತ್ತು ನಡೆಸಿದ್ದರು.

ಇದೇ ವೇಳೆ, ತಮ್ಮದೇ ಸರಕಾರದ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಶಾಸಕರು ಅವಿಶ್ವಾಸ ಮಂಡಿಸಲು ಮುಂದಾಗಿದ್ದರು. ಒಂದು ವರ್ಷದಲ್ಲಿ ಚುನಾವಣೆ ಬರಲಿದ್ದು, ರಾವತ್ ನೇತೃತ್ವದಲ್ಲಿ ಚುನಾವಣೆ ಹೋದರೆ ಮತ್ತೆ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಎಂಬ ಆರೆಸ್ಸೆಸ್ ನಾಯಕರ ಸುಳಿವಿನ ಮೇರೆಗೆ ರಾವತ್ ಬದಲಾಯಿಸಲು ಬಿಜೆಪಿ ನಿರ್ಧರಿಸಿತ್ತು. ಇದೀಗ ರಾವತ್ ಸಂಪುಟದಲ್ಲಿ ಸಚಿವನಾಗಿದ್ದ ಧನ್ ಸಿಂಗ್ ರಾವತ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲು ಪಕ್ಷ ನಿರ್ಧರಿಸಿದೆ.