ಕೇರಳ ಕಾಂಗ್ರೆಸಿನಲ್ಲಿ ಮತ್ತೆ ಭಿನ್ನಮತ ; ಪಕ್ಷದಿಂದ ಹೊರನಡೆದ ಹಿರಿಯ ಕಾಂಗ್ರೆಸಿಗ ಪಿ.ಸಿ.ಚಾಕೋ

10-03-21 03:12 pm       Headline Karnataka News Network   ದೇಶ - ವಿದೇಶ

ಕೇರಳ ಕಾಂಗ್ರೆಸಿನಲ್ಲಿ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ಹಿರಿಯ ಕಾಂಗ್ರೆಸಿಗ, ಮಾಜಿ ಸಂಸದ ಪಿ.ಸಿ. ಚಾಕೋ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ತಿರುವನಂತಪುರ, ಮಾ.10: ಕೇರಳ ಕಾಂಗ್ರೆಸಿನಲ್ಲಿ ಭಿನ್ನಮತ ಮತ್ತೆ ಸ್ಫೋಟಗೊಂಡಿದೆ. ರಾಜ್ಯದಲ್ಲಿ ವಿಧಾನಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲಿ ಮುನಿಸಿಕೊಂಡಿರುವ ಹಿರಿಯ ಕಾಂಗ್ರೆಸಿಗ, ಮಾಜಿ ಸಂಸದ ಪಿ.ಸಿ. ಚಾಕೋ ಪಕ್ಷಕ್ಕೆ ರಾಜಿನಾಮೆ ನೀಡಿದ್ದಾರೆ.

ಈ ಬಗ್ಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿಗೆ ರಾಜಿನಾಮೆ ಪತ್ರ ಬರೆದಿರುವ ಚಾಕೋ, ಕೇರಳದಲ್ಲಿ ಕಾಂಗ್ರೆಸ್ ಮುಖಂಡನಾಗಿ ಮುಂದುವರಿಯುವುದು ಕಷ್ಟವಿದೆ. ರಾಜ್ಯ ಕಾಂಗ್ರೆಸ್ ನಲ್ಲಿ ಪ್ರಜಾಪ್ರಭುತ್ವ ಇಲ್ಲ. ರಾಜ್ಯ ಕಮಿಟಿಯಲ್ಲಿ ಚರ್ಚೆ ಮಾಡದೆ, ವಿಧಾನಸಭೆ ಅಭ್ಯರ್ಥಿಗಳನ್ನು ಫೈನಲ್ ಮಾಡುವುದು ಯಾವ ನ್ಯಾಯ ಎಂದು ಪ್ರಶ್ನೆ ಮಾಡಿದ್ದಾರೆ.

ಕಳೆದ ಒಂದು ವರ್ಷದಲ್ಲಿ ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ನೇಮಕ ಆಗದಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿರುವ, ಕಾಂಗ್ರೆಸಿಗನಾಗಿ ಹೇಳುವುದಾದರೆ, ರಾಜ್ಯದಲ್ಲಿ ಪಕ್ಷ ತುಂಬ ಕಷ್ಟದಲ್ಲಿದೆ. ನೀವು ಕಾಂಗ್ರೆಸಿನಲ್ಲಿ ಯಾವುದಾದ್ರೂ ಒಂದು ಗ್ರೂಪಿನಲ್ಲಿ ಇರುವುದಾದರೆ ಮಾತ್ರ ಉಳಿಯಬಹುದಷ್ಟೆ. ರಾಜ್ಯ ನಾಯಕತ್ವ ಸಕ್ರಿಯವಾಗಿಲ್ಲ. ಪಕ್ಷದ ಮೇಲೆ ಹಿಡಿತ ಹೊಂದಿಲ್ಲ ಎಂದು ಟೀಕಿಸಿದ್ದಾರೆ.

ಕೇರಳ ಕಾಂಗ್ರೆಸಿನ ಕಾರ್ಯ ನಿರ್ವಹಣೆ ಬಗ್ಗೆ ತುಂಬ ನೊಂದಿದ್ದೇನೆ. ರಾಜಿನಾಮೆ ನೀಡುವ ಬಗ್ಗೆ ತುಂಬ ಸಮಯದಿಂದ ಚಿಂತನೆ ಮಾಡಿದ್ದೆ. ಪಕ್ಷ ದಿನದಿಂದ ದಿನಕ್ಕೆ ದುರ್ಬಲವಾಗುತ್ತಿದೆ. ನನ್ನ ರಾಜಿನಾಮೆಯಿಂದಾದ್ರು ಪಕ್ಷದ ನಾಯಕತ್ವ ಕಣ್ಣು ತೆರೆದುಕೊಂಡರೆ ರಾಜಿನಾಮೆ ನಿರ್ಧಾರದ ಬಗ್ಗೆ ಪುನರ್ ವಿಮರ್ಶೆ ಮಾಡುತ್ತೇನೆ ಎಂದಿದ್ದಾರೆ.

ರಾಜ್ಯ ಕಾಂಗ್ರೆಸಿನಲ್ಲಿ ಎರಡು ಗುಂಪು ಇದೆ. ಕಾಂಗ್ರೆಸ್ ಐ ಮತ್ತು ಕಾಂಗ್ರೆಸ್ ಎ. ಈ ಎರಡು ಗುಂಪುಗಳ ಸಮನ್ವಯ ಕಮಿಟಿಯಾಗಿ ಕೆಪಿಸಿಸಿ ಇದೆ ಎಂದು ಚಾಕೋ ವ್ಯಂಗ್ಯ ಮಾಡಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಪ್ರಬಲ ಕ್ರಿಸ್ತಿಯನ್ ಸಮುದಾಯದ ಹಿರಿಯ ಮುಖಂಡನೊಬ್ಬ ಪಕ್ಷಕ್ಕೆ ರಾಜಿನಾಮೆ ನೀಡಿರುವುದು ಕಾಂಗ್ರೆಸಿಗೆ ದೊಡ್ಡ ಹಿನ್ನಡೆಯಾಗಲಿದೆ.

ಕೇರಳ ಕಾಂಗ್ರೆಸಿನಲ್ಲಿ ಎರಡು ಮೂರು ಬಣಗಳಾಗಿದ್ದು, ರಾಜ್ಯ ನಾಯಕರು ಈ ಬಣಗಳನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗದ ಸ್ಥಿತಿಗೆ ತಲುಪಿದ್ದಾರೆ. ನಾಯಕರ ಭಿನ್ನಮತದ ಕಾರಣ ಕಳೆದ ಪಂಚಾಯತ್ ಚುನಾವಣೆಯಲ್ಲೂ ತಟ್ಟಿದ್ದು, ಎಡರಂಗ ಮತ್ತು ಬಿಜೆಪಿಗೆ ಸ್ಥಾನಗಳನ್ನು ಬಿಟ್ಟುಕೊಟ್ಟಿತ್ತು. ಮುಸ್ಲಿಂ ಬಾಹುಳ್ಯ ಇರುವಲ್ಲಿ ಮುಸ್ಲಿಂ ಲೀಗ್ ಸ್ಥಾನ ಪಡೆದಿತ್ತು. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಕಾಂಗ್ರೆಸ್ ಹೀನಾಯ ಸೋಲು ಕಾಣುವ ಸುಳಿವು ಸಿಕ್ಕಿರುವಾಗಲೇ ನಾಯಕರು ಪಕ್ಷ ತ್ಯಜಿಸಲು ಮುಂದಾಗಿದ್ದಾರೆ.