ಮಾಜಿ ಬಿಜೆಪಿ ಮುಖಂಡ ಯಶವಂತ್ ಸಿನ್ಹಾ ಟಿಎಂಸಿಗೆ, ಪಶ್ಚಿಮ ಬಂಗಾಳದಲ್ಲಿ ಅಚ್ಚರಿ !

13-03-21 03:42 pm       Headline Karnataka News Network   ದೇಶ - ವಿದೇಶ

ಬಿಜೆಪಿಯ ಮಾಜಿ ಮುಖಂಡ ಯಶವಂತ್ ಸಿನ್ಹಾ ದಿಢೀರ್ ಬೆಳವಣಿಗೆಯಲ್ಲಿ ಟಿಎಂಸಿ ಪಕ್ಷ ಸೇರ್ಪಡೆಯಾಗಿದ್ದಾರೆ.

ಕೊಲ್ಕತ್ತಾ, ಮಾ.13: ಮಾಜಿ ಕೇಂದ್ರ ಸಚಿವ, ಬಿಜೆಪಿಯ ಮಾಜಿ ಮುಖಂಡ, ಒಂದು ಕಾಲದ ಥಿಂಕ್ ಟ್ಯಾಂಕ್ ಆಗಿದ್ದ ಯಶವಂತ್ ಸಿನ್ಹಾ ದಿಢೀರ್ ಬೆಳವಣಿಗೆಯಲ್ಲಿ ಟಿಎಂಸಿ ಪಕ್ಷ ಸೇರ್ಪಡೆಯಾಗಿದ್ದಾರೆ. ಕೊಲ್ಕತ್ತಾದಲ್ಲಿ ನಡೆದ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಚುನಾವಣೆಗೆ ಕೆಲವೇ ದಿನಗಳಿರುವಾಗ ಟಿಎಂಸಿ ಸೇರಿ ಅಚ್ಚರಿ ಮೂಡಿಸಿದ್ದಾರೆ.

83 ವರ್ಷದ ಯಶವಂತ್ ಸಿನ್ಹಾ ವಾಜಪೇಯಿ ಸಂಪುಟದಲ್ಲಿ ಸಚಿವರಾಗಿದ್ದರು. ಆಬಳಿಕ ಮೋದಿ ಸರಕಾರ ಅಧಿಕಾರಕ್ಕೇರಿದ ಬಳಿಕ ಮೂಲೆಗುಂಪಾಗಿದ್ದು, 2018ರಲ್ಲಿ ಪಕ್ಷಕ್ಕೆ ರಾಜಿನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಹೊರ ತೆರಳಿದ್ದರು. ಇದೀಗ ಟಿಎಂಸಿ ಸೇರ್ಪಡೆಯಾದ ಬಳಿಕ ಇದೇ ವಿಚಾರದ ಬಗ್ಗೆ ಮಾತನಾಡಿದ ಸಿನ್ಹಾ, ಈ ವಯಸ್ಸಲ್ಲಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಬರ್ತೀದ್ದಾರಲ್ಲ ಎಂಬ ಸಹಜ ಪ್ರಶ್ನೆ ನಿಮ್ಮಲ್ಲಿರಬಹುದು. ಬೇರೊಂದು ಪಕ್ಷಕ್ಕೆ ಸೇರಿ ಸಕ್ರಿಯ ರಾಜಕಾರಣಕ್ಕೆ ಬರುತ್ತಿರುವ ಬಗ್ಗೆ ಕುತೂಹಲ ಇರಬಹುದು. ಆದರೆ, ದೇಶದ ಪರಿಸ್ಥಿತಿ ಈಗ ಸಂದಿಗ್ಧ ಸ್ಥಿತಿಯಲ್ಲಿದೆ. ಅದಕ್ಕಾಗಿ ರಾಜಕೀಯದಲ್ಲಿ ಸಕ್ರಿಯವಾಗುತ್ತಿದ್ದೇನೆ ಎಂದಿದ್ದಾರೆ.

ನ್ಯಾಯಾಂಗ ಸೇರಿದಂತೆ ಪ್ರಜಾಪ್ರಭುತ್ವದ ಅಡಿಗಲ್ಲು, ಆಧಾರ ಸ್ತಂಭಗಳು ದುರ್ಬಲಗೊಳ್ಳುತ್ತಿವೆ. ಚುನಾವಣೆ ಜಯಿಸುವುದಷ್ಟೇ ಈಗಿನ ಬಿಜೆಪಿಯ ಏಕಮಾತ್ರ ಗುರಿಯಾಗಿದೆ. ಅಟಲ್ ಜೀ ಇದ್ದಾಗ ಪಕ್ಷಗಳ ನಡುವೆ ಸಹಮತ ಇತ್ತು. ಈಗಿನ ಮಂದಿ ಇತರ ಪಕ್ಷಗಳನ್ನು ತುಳಿದೇ ಅಧಿಕಾರಕ್ಕೇರಲು ಹವಣಿಸುತ್ತಾರೆ. ಇದೇ ಕಾರಣಕ್ಕೆ ಬಿಜೆಪಿ ಜೊತೆಗಿದ್ದ ಬಿಜೆಡಿ, ಅಕಾಲಿದಳ ಹೊರಗೆ ಉಳಿದಿದೆ. ಈಗ ಬಿಜೆಪಿ ಜೊತೆಗೆ ಯಾರಿದ್ದಾರೆ ಎಂದು ಪ್ರಶ್ನಿಸಿದರು.

ಯಶವಂತ್ ಸಿನ್ಹಾ ಬಿಜೆಪಿಯಿಂದ ದೂರವುಳಿದಿದ್ದರೂ, ಅವರ ಜಯಂತ್ ಸಿನ್ಹಾ ಜಾರ್ಖಂಡಿನ ಹಝಾರಿಬಾಗ್ ಕ್ಷೇತ್ರದಲ್ಲಿ ಬಿಜೆಪಿ ಸಂಸದರಾಗಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಸಂಸದರಾಗಿದ್ದ ವೇಳೆ ವಿಮಾನ ಯಾನ ಮತ್ತು ಹಣಕಾಸು ಖಾತೆಯಲ್ಲಿ ರಾಜ್ಯ ಸಚಿವರಾಗಿದ್ದರು. 2019ರಲ್ಲಿ ಮರು ಆಯ್ಕೆಯಾಗಿದ್ದರೂ, ಜಯಂತ್ ಸಿನ್ಹಾಗೆ ಸಚಿವ ಸ್ಥಾನದ ಜವಾಬ್ದಾರಿ ನೀಡಿಲ್ಲ.

ಈ ನಡುವೆ, ಯಶವಂತ್ ಸಿನ್ಹಾ ಈಗಿನ ಬಿಜೆಪಿಯ ವಿರುದ್ಧ ಕಟು ಟೀಕಾಕಾರರಾಗಿ ಬದಲಾಗಿದ್ದರು. ಈಗ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಕೆಲವೇ ದಿನಗಳಿರುವಾಗ ಬದ್ಧ ಪ್ರತಿಸ್ಪರ್ಧಿ ಟಿಎಂಸಿ ಪಕ್ಷ ಸೇರಿ ಟಾಂಗ್ ನೀಡಿದ್ದಾರೆ. ಬಂಗಾಳದಲ್ಲಿ ಏಳು ಹಂತದ ಚುನಾವಣೆಯಿದ್ದು ಮೊದಲ ಮತದಾನ ಮಾ.27ರಂದು ನಡೆಯಲಿದೆ.