ಇರುಮುಡಿ ಹೊತ್ತು ಶಬರಿಮಲೆಗೆ ತೆರಳಿದ ಡಿಸಿಎಂ

17-03-21 04:42 pm       Headline Karnataka News Network   ದೇಶ - ವಿದೇಶ

ಡಿಸಿಎಂ ಅಶ್ವತ್ಧ ನಾರಾಯಣ ಇರುಮುಡಿ ಹೊತ್ತುಕೊಂಡು ಪುಣ್ಯಕ್ಷೇತ್ರ ಶಬರಿಮಲೆಗೆ ತೆರಳಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು.

ಶಬರಿಮಲೆ, ಮಾ.17: ಕೇರಳದಲ್ಲಿ ಬಿಜೆಪಿ ಪರ ಚುನಾವಣಾ ಪ್ರಚಾರದಲ್ಲಿರುವ ಡಿಸಿಎಂ ಅಶ್ವತ್ಧ ನಾರಾಯಣ ಇರುಮುಡಿ ಹೊತ್ತುಕೊಂಡು ಪುಣ್ಯಕ್ಷೇತ್ರ ಶಬರಿಮಲೆಗೆ ತೆರಳಿ, ಅಯ್ಯಪ್ಪ ಸ್ವಾಮಿಯ ದರ್ಶನ ಪಡೆದರು. ಮಂಗಳವಾರ ಸಂಜೆ 5.30ಕ್ಕೆ ಪಂಪಾ ನದಿಯ ಬಳಿಯಿಂದ ಬೆಟ್ಟಕ್ಕೆ ಇರುಮುಡಿಯನ್ನು ಹೊತ್ತು ಕಾಲ್ನಡಿಗೆಯಲ್ಲಿ ಹೊರಟ ಡಿಸಿಎಂ, ಬಳಿಕ ರಾತ್ರಿ ವೇಳೆಗೆ ಸನ್ನಿಧಾನ ತಲುಪಿದ್ದಾರೆ.

ಅದೇ ವೇಳೆಗೆ ಸನ್ನಿಧಾನದಲ್ಲಿ ನಡೆಯುವ ವಿಶಿಷ್ಟ ಸಂಪ್ರದಾಯ ಪಡಿಪೂಜೆಯಲ್ಲಿ ಪಾಲ್ಗೊಂಡು ದೇವರ ದರ್ಶನ ಪಡೆದರು. ಈ ವೇಳೆ, ಕ್ಷೇತ್ರದ ಮುಖ್ಯ ಅರ್ಚಕರಾದ ರಾಜೀವ ಕಂದರಾರು ಮತ್ತು ಮೇಲ್ ಶಾಂತಿ ಕೆ.ವಿ. ಜಯರಾಜ್ ಪೊಟ್ರಿ ಡಿಸಿಎಂ ಭೇಟಿ ನೀಡಿದ ಕಾರಣ ವಿಶೇಷ ಪೂಜೆ ನೆರವೇರಿಸಿ, ಎಲೆ ಪ್ರಸಾದವನ್ನು ನೀಡಿದರು. ಅಶ್ವತ್ಥ ನಾರಾಯಣ ತಾವು ಹೊತ್ತು ತಂದ ಇರುಮುಡಿಯನ್ನು ಸನ್ನಿಧಾನದ ಸ್ವರ್ಣ ಮೆಟ್ಟಿಲ ಮುಂದೆ ನಿಂತು ದೇವರಿಗೆ ಅರ್ಪಿಸಿದರು.

ಇದಕ್ಕೂ ಮುನ್ನ ಪಂದಳಮ್ ಅರಮನೆಗೆ ಭೇಟಿ ನೀಡಿದ ಅಶ್ವತ್ಥ ನಾರಾಯಣ, ಅಲ್ಲಿ ಅಯ್ಯಪ್ಪ ಸ್ವಾಮಿಯ ಸಾಕು ತಂದೆಯಾಗಿದ್ದ ರಾಜಶೇಖರ ಪೆರುಮಾಳ್ ವಂಶಸ್ಥರನ್ನು ಭೇಟಿಯಾಗಿ ಆಶೀರ್ವಾದ ಪಡೆದರು.