ಎರಡು ನಿಮಿಷ ಬೇಗನೇ ಮನೆಗೆ ಹೊರಟ ಸರಕಾರಿ ನೌಕರರಿಗೆ ವೇತನ ಕಡಿತ ! ಇದು ಅಲ್ಲಿ ಮಾತ್ರ ಸಾಧ್ಯ!

18-03-21 05:32 pm       Headline Karnataka News Network   ದೇಶ - ವಿದೇಶ

ನಿಗದಿಗಿಂತ ಎರಡು ನಿಮಿಷ ಬೇಗನೇ ಮನೆಗೆ ಹೊರಟಿದ್ದಕ್ಕೆ ಸಿಬಂದಿಯ ಸಂಬಳವನ್ನೇ ಕಡಿತ ಮಾಡಿರುವ ಪ್ರಸಂಗ ವರದಿಯಾಗಿದೆ.

ನವದೆಹಲಿ, ಮಾ.18: ನಮ್ಮಲ್ಲಿ ಸರಕಾರಿ ನೌಕರರು ಅಂದ್ರೆ ಸ್ವರ್ಗದಿಂದ ಕೆಳಗಿಳಿದು ಬಂದವರ ರೀತಿ. ಹೆಚ್ಚಿನ ಮಂದಿಗೆ ಹೊತ್ತು ಗೊತ್ತು ಅನ್ನುವುದಂತೂ ಇರುವುದೇ ಇಲ್ಲ. ಆದರೆ, ಸಮಯದ ಪರಿಪಾಲನೆ, ಕೆಲಸದಲ್ಲಿ ಪ್ರಾಮಾಣಿಕತೆಗೆ ಜಗತ್ತಿನಲ್ಲೇ ಹೆಸರಾಗಿರುವ ಜಪಾನಲ್ಲಿ ಸರಕಾರಿ ನೌಕರಿಯಂದ್ರೆ, ಅಷ್ಟೇ ಪರಿಪಕ್ವ. ಅಲ್ಲಿನ ಒಂದು ಇಲಾಖೆಯಲ್ಲಿ ಕೆಲಸ ಮುಗಿಸಿ ನಿಗದಿಗಿಂತ ಎರಡು ನಿಮಿಷ ಬೇಗನೇ ಮನೆಗೆ ಹೊರಟಿದ್ದಕ್ಕೆ ಸಿಬಂದಿಯ ಸಂಬಳವನ್ನೇ ಕಡಿತ ಮಾಡಿರುವ ಪ್ರಸಂಗ ವರದಿಯಾಗಿದೆ.

ಜಪಾನ್ ದೇಶದ ಶಿಕ್ಷಣ ಇಲಾಖೆಯ ಫುನಬಾಶಿ ಸಿಟಿ ಬೋರ್ಡ್, ತನ್ನ ಸಿಬಂದಿ ಎರಡು ನಿಮಿಷ ಬೇಗನೆ ಹೊರಟಿದ್ದಕ್ಕೆ ತಿಂಗಳ ವೇತನದಲ್ಲಿ ಹತ್ತನೇ ಒಂದು ಭಾಗದಷ್ಟು ಕಡಿತ ಮಾಡಿರುವ ಸುದ್ದಿ ಜಗತ್ತಿನ ಗಮನ ಸೆಳೆದಿದೆ. ಮೇ 2019ರಿಂದ 2020ರ ಜನವರಿ ಮಧ್ಯೆ ಈ ರೀತಿಯ 316 ಪ್ರಕರಣಗಳನ್ನು ಇಲಾಖೆ ಪತ್ತೆ ಮಾಡಿದ್ದು, ಏಳು ಸಿಬಂದಿ ಈ ರೀತಿ ಬೇಗನೇ ನಿರ್ಗಮಿಸಿದ್ದನ್ನು ಪತ್ತೆ ಹಚ್ಚಿ ವೇತನಕ್ಕೆ ಕತ್ತರಿ ಹಾಕಿದೆ.

ಸಂಜೆ 5.15ಕ್ಕೆ ಕೆಲಸ ಮುಗಿಸಿ ನಿರ್ಗಮಿಸುವ ಸಮಯವಾಗಿದ್ದರೆ, ಎರಡು ನಿಮಿಷ ಮೊದಲೇ 5.15ಕ್ಕೆ ಕೆಲವು ಸಿಬಂದಿಗಳು ತೆರಳುತ್ತಿದ್ದರು. ಮನೆಗೆ ತೆರಳುವ ಬಸ್ ಬೇಗ ಇರುವುದರಿಂದ ಹೀಗೆ ಮಾಡುತ್ತಿದ್ದರು. 5.17ಕ್ಕೆ ಬಸ್ ಬರುತ್ತೆ. ಅದಕ್ಕಾಗಿ ಎರಡು ನಿಮಿಷ ಬೇಗನೆ ಹೋಗುತ್ತಿದ್ದೆವು. ಅದು ಬಸ್ ತಪ್ಪಿದರೆ, ಬಳಿಕ ಅರ್ಧ ಗಂಟೆ ಕಾಯಬೇಕಾಗುತ್ತದೆ ಎಂದು ಸಿಬಂದಿ ಈ ಬಗ್ಗೆ ಮೇಲಧಿಕಾರಿಗಳಿಗೆ ಲಿಖಿತ ಸ್ಪಷ್ಟನೆ ಕೊಟ್ಟಿದ್ದರು.

ಆದರೆ, ಮಾರ್ಚ್ 10ರಂದು ಫುನಬಾಶಿ ಸಿಟಿ ಬೋರ್ಡ್, ಸಮಯಕ್ಕೆ ಮುಂಚಿತವಾಗಿ ಹೊರಡುತ್ತಿದ್ದ ಕೌನ್ಸಿಲರ್ ಸೇರಿದಂತೆ ಸಿಬಂದಿಯ ಮೂರು ತಿಂಗಳ ವೇತನದಲ್ಲಿ ಹತ್ತನೇ ಒಂದು ಭಾಗದಷ್ಟು ಕಡಿತ ಮಾಡಿ ಆದೇಶ ಮಾಡಿತ್ತು. ಎರಡು ನಿಮಿಷಕ್ಕಾಗಿ ಸರಕಾರಿ ನೌಕರರ ವೇತನ ಕಡಿತ ಮಾಡಿದ್ದು ಜಪಾನ್ ಟುಡೇ ಪತ್ರಿಕೆಯಲ್ಲಿ ಸುದ್ದಿಯಾಗಿದೆ. ಭಾರತಕ್ಕೆ ಅನ್ವಯಿಸಿದರೆ, ಈ ರೀತಿಯ ವೇತನ ಕಡಿತವಾಗಲೀ, ಸಿಬಂದಿ ಎರಡು ನಿಮಿಷಕ್ಕೂ ಮಹತ್ವ ಕೊಡುವುದನ್ನು ನಿರೀಕ್ಷೆ ಮಾಡುವುದೇ ಅಸಾಧ್ಯ ಎನ್ನುವಂತಾಗಿದೆ.