ಕೇರಳ ಅಸೆಂಬ್ಲಿ ; ಚುನಾವಣೆ ಮೊದಲೇ ಬಿಜೆಪಿಗೆ ಹಿನ್ನಡೆ, ಮೂವರ ನಾಮಪತ್ರ ತಿರಸ್ಕೃತ

22-03-21 02:05 pm       Headline Karnataka News Network   ದೇಶ - ವಿದೇಶ

ಬಿಜೆಪಿ ಮತ್ತು ಮಿತ್ರಪಕ್ಷ ಎಐಎಡಿಎಂಕೆಯ ಮೂವರು ಅಸೆಂಬ್ಲಿ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ತಿರುವನಂತಪುರಂ, ಮಾ.22: ಕೇರಳ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿಗೆ ಚುನಾವಣೆಯ ಮೊದಲೇ ಹಿನ್ನಡೆಯಾಗಿದೆ. ಬಿಜೆಪಿ ಮತ್ತು ಮಿತ್ರಪಕ್ಷ ಎಐಎಡಿಎಂಕೆಯ ಮೂವರು ಅಸೆಂಬ್ಲಿ ಅಭ್ಯರ್ಥಿಗಳ ನಾಮಪತ್ರವನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ.

ತಲಶ್ಶೇರಿ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿ ಕಣ್ಣೂರು ಜಿಲ್ಲಾಧ್ಯಕ್ಷ ಎನ್.ಹರಿದಾಸ್ ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರವನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಬಿಜೆಪಿಯಿಂದ ನೀಡಿರುವ ಬಿ ಫಾರ್ಮ್ ನಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಹಿ ಇಲ್ಲವೆಂದು ನಾಮಪತ್ರ ತಿರಸ್ಕಾರ ಮಾಡಿದ್ದಾರೆ ಎನ್ನಲಾಗುತ್ತಿದೆ.

ಇದೇ ರೀತಿ ಗುರುವಾಯೂರು ಕ್ಷೇತ್ರದಲ್ಲಿ ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ನಿವೇದಿತಾ ಸುಬ್ರಹ್ಮಣ್ಯಂ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ನಾಮಪತ್ರದಲ್ಲಿ ಪಕ್ಷದ ಅಧ್ಯಕ್ಷರ ಸಹಿ ಇಲ್ಲವೆಂದು ಅಧಿಕಾರಿಗಳು ನಿರಾಕರಣೆ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಇಡುಕ್ಕಿ ಜಿಲ್ಲೆಯ ದೇವಿಕುಳಂ ಕ್ಷೇತ್ರದಲ್ಲಿ ಎಐಎಡಿಎಂಕೆಯ ಅಭ್ಯರ್ಥಿ ಧನಲಕ್ಷ್ಮಿ ಎಂಬವರ ನಾಮಪತ್ರವನ್ನು ಪೂರ್ತಿಯಾಗಿ ತುಂಬಿಲ್ಲ ಎಂಬ ಕಾರಣಕ್ಕೆ ನಿರಾಕರಣೆ ಮಾಡಲಾಗಿದೆ. ಕೇರಳ ಮತ್ತು ತಮಿಳುನಾಡಿನಲ್ಲಿ ಎಐಎಡಿಎಂಕೆ ಬಿಜೆಪಿಯ ಮಿತ್ರಪಕ್ಷವಾಗಿದ್ದು, ಎನ್ ಡಿಎ ಮೈತ್ರಿಕೂಟದಲ್ಲಿ ಸ್ಪರ್ಧಿಸುತ್ತಿದ್ದಾರೆ.

ಇದೇ ಬಿಜೆಪಿ ಚುನವಾಣಾಧಿಕಾರಿಗಳ ನಿರ್ಧಾರವನ್ನು ಪ್ರಶ್ನಿಸಿ, ಹೈಕೋರ್ಟ್ ಮೆಟ್ಟಿಲೇರಿದೆ. ಕೋರ್ಟ್ ಚುನಾವಣಾ ಆಯೋಗಕ್ಕೆ ಉತ್ತರ ನೀಡುವಂತೆ ನೋಟೀಸ್ ಮಾಡಿದೆ.

Kerala Election 2021 Live News: Nomination forms of 2 BJP candidates declared invalid