ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧ ಎಪ್ರಿಲ್ ಕೊನೆ ವರೆಗೂ ವಿಸ್ತರಣೆ

24-03-21 12:01 pm       Headline Karnataka News Network   ದೇಶ - ವಿದೇಶ

ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಕೇಂದ್ರ ಸರಕಾರ ಎ.30ರ ವರೆಗೂ ವಿಸ್ತರಣೆ ಮಾಡಿದೆ.

ನವದೆಹಲಿ, ಮಾ.24: ಕೋವಿಡ್ ಹಿನ್ನೆಲೆಯಲ್ಲಿ ವಿಧಿಸಲಾಗಿರುವ ಅಂತಾರಾಷ್ಟ್ರೀಯ ವಿಮಾನ ಸಂಚಾರ ನಿರ್ಬಂಧವನ್ನು ಕೇಂದ್ರ ಸರಕಾರ ಎ.30ರ ವರೆಗೂ ವಿಸ್ತರಣೆ ಮಾಡಿದೆ. ಕಳೆದ 2020ರ ಮಾರ್ಚ್ ತಿಂಗಳಲ್ಲಿ ಕೋವಿಡ್ ಲಾಕ್ಡೌನ್ ಘೋಷಣೆಯಾದ ಬಳಿಕ ವಿಮಾನ ಸಂಚಾರ ನಿರ್ಬಂಧ ವಿಧಿಸಲಾಗಿತ್ತು. ಈಗ ನಿರ್ಬಂಧಕ್ಕೆ ಒಂದು ವರ್ಷ ಪೂರ್ತಿಯಾಗಿದ್ದು ಮತ್ತೆ ಮುಂದುವರಿಯುವ ಸಾಧ್ಯತೆ ಗೋಚರಿಸಿದೆ. 

ಕಳೆದ ಬಾರಿ ಲಾಕ್ಡೌನ್ ಘೋಷಣೆಯ ಬಳಿಕ ಮೇ ತಿಂಗಳಲ್ಲಿ ಜಗತ್ತಿನ ಹಲವೆಡೆ ಉಳಿದುಕೊಂಡಿದ್ದ ಭಾರತೀಯರನ್ನು ಕರೆತರುವ ಸಲುವಾಗಿ ಭಾರತ ಸರಕಾರ ವಂದೇ ಭಾರತ್ ಮಿಷನ್ ಯೋಜನೆ ಹಮ್ಮಿಕೊಂಡಿತ್ತು. ಈ ಸರಣಿ ಈಗ ಹತ್ತನೇ ಆವರ್ತನದಲ್ಲಿದ್ದು ಜಗತ್ತಿನಾದ್ಯಂತ ಇರುವ ಭಾರತೀಯ ಮೂಲದವರನ್ನು ಕರೆತರುವ ಕೆಲಸ ಮಾಡುತ್ತಿದೆ. ಇದರ ನಡುವೆ, ಭಾರತ ಸರಕಾರ ಕೊಡುಕೊಳ್ಳುವ ಒಪ್ಪಂದ ಯೋಜನೆಯಡಿ 27 ದೇಶಗಳ ಜೊತೆ ಪ್ರಯಾಣಿಕ ಸಂಚಾರಕ್ಕೆ ಅನುಮತಿ ಕೊಟ್ಟಿದೆ. 

ಇದರಂತೆ, ಅಫ್ಘಾನಿಸ್ತಾನ, ಬೆಹ್ರೈನ್, ಬಾಂಗ್ಲಾದೇಶ, ಭೂತಾನ್, ಕೆನಡಾ, ಇಥಿಯೋಪಿಯಾ, ಫ್ರಾನ್ಸ್, ಜರ್ಮನಿ, ಇರಾಕ್, ನೇಪಾಳ, ನೆದರ್ಲೆಂಡ್ಸ್‌, ನೈಜೀರಿಯಾ, ಒಮಾನ್, ಕತಾರ್, ರಷ್ಯಾ, ರವಾಂಡಾ, ಸೀಶೆಲ್ಸ್ , ತಾಂಜಾನಿಯಾ, ಯುನೈಟೆಡ್ ಕಿಂಗ್ಡಮ್, ಅಮೆರಿಕ ಮತ್ತು ಉಜ್ಬೆಕಿಸ್ತಾನದಿಂದ ನಿಗದಿತ ನೆಲೆಯಲ್ಲಿ ಪ್ರಯಾಣಿಕ ವಿಮಾನಗಳ ಸಂಚಾರ ನಡೆಯುತ್ತಿದೆ. 

ಕೊರೊನಾ ಸೋಂಕು ಕಂಡುಬಂದು ವರ್ಷ ಕಳೆಯುತ್ತಿದ್ದರೂ, ಜಗತ್ತಿನಾದ್ಯಂತ ಮತ್ತಷ್ಟು ಹರಡುವ ಭೀತಿ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ಹೊಸ ಗೈಡ್ ಲೈನ್ಸ್ ರೂಪಿಸಿದೆ. ಅದರಂತೆ, ವಿಮಾನಯಾನ ಸಚಿವಾಲಯ ವಿಮಾನ ಸಂಚಾರ ನಿರ್ಬಂಧವನ್ನು ಎಪ್ರಿಲ್ ವರೆಗೂ ವಿಸ್ತರಿಸಿ ಆದೇಶ ಮಾಡಿದೆ.

The director-general of civil aviation on Tuesday extended the suspension of international flights in India till April 30.