ಪ್ರಧಾನಿ ನರೇಂದ್ರ ಮೋದಿಗೆ ರಾಖಿ ಕಳುಹಿಸಿದ ಪಾಕಿಸ್ತಾನ ಮಹಿಳೆ

31-07-20 03:20 pm       Headline Karnataka News Network   ದೇಶ - ವಿದೇಶ

ರಕ್ಷಾ ಬಂಧನದ ಪ್ರಯುಕ್ತ ಪಾಕಿಸ್ತಾನ ಮಹಿಳೆ ಖಮರ್ ಮೊಹ್ಸಿನ್ ಶೈಖ್ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿಯನ್ನು ಕಳುಹಿಸಿದ್ದಾರೆ.

ನವದೆಹಲಿ: ರಕ್ಷಾ ಬಂಧನದ ಪ್ರಯುಕ್ತ ಪಾಕಿಸ್ತಾನ ಮಹಿಳೆ ಖಮರ್ ಮೊಹ್ಸಿನ್ ಶೈಖ್ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿಯನ್ನು ಕಳುಹಿಸಿದ್ದಾರೆ.

ಶೈಖ್ ಅವರು ಕಳೆದ 25 ವರ್ಷಗಳಿಂದ ಪ್ರತಿ ರಕ್ಷಾ ಬಂಧನಕ್ಕೆ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸುತ್ತಿದ್ದು, ಭಾರತದಿಂದ ಆಹ್ವಾನ ನೀಡಿದರೆ ದೆಹಲಿಗೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ ಎಂದು ವರದಿಯಾಗಿದೆ.

ವರ್ಷಕ್ಕೊಂದು ಬಾರಿ ನನ್ನ ಹಿರಿಯ ಸಹೋದರನಿಗೆ ರಾಖಿ ಕಟ್ಟುವ ಅವಕಾಶ ಸಿಕ್ಕಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ. ಮುಂದಿನ ಐದು ವರ್ಷಗಳು ಅವರಿಗೆ ಉತ್ತಮವಾಗಿರಲಿ ಎಂದು ಪ್ರಾರ್ಥಿಸುತ್ತೇನೆ. ಅವರ ಧನಾತ್ಮಕ ನಿರ್ಧಾರವನ್ನು ವಿಶ್ವವೇ ಗುರುತಿಸುತ್ತಿದೆ ಎಂದು ಕಳೆದ ವರ್ಷ ಅವರು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದರು. ಇದಕ್ಕೂ ಮುನ್ನ ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧಿಸುವ ಭಾರತ ಸರ್ಕಾರದ ನಿರ್ಧಾರವನ್ನು ಅವರು ಸ್ವಾಗತಿಸಿದ್ದಾರೆ. ಅಲ್ಲದೆ ಪತಿ ರಚಿಸಿದ ಪೇಂಟಿಂಗ್‍ನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಉಡುಗೊರೆ ನೀಡಲು ಉತ್ಸುಕರಾಗಿದ್ದಾರಂತೆ.

ಖುರಾನ್ ಹಾಗೂ ಇಸ್ಲಾಂನಲ್ಲಿ ತ್ರಿವಳಿ ತಲಾಖ್ ಕುರಿತು ನಿಬಂಧನೆ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಹೊರತು ಇನ್ನಾರೂ ತ್ರಿವಳಿ ತಲಾಖ್ ನಿಷೇಧಿಸುವ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ. ಮುಸ್ಲಿಂ ಮಹಿಳೆಯರ ಹಿತದೃಷ್ಟಿಯಿಂದ ಮೋದಿಯವರು ಅತ್ಯುತ್ತಮ ಕೆಲಸ ಮಾಡಿದ್ದಾರೆ ಎಂದು ತ್ರಿವಳಿ ತಲಾಖ್ ಕುರಿತ ಕಾನೂನು ರೂಪಿಸಿದ್ದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ 370ನೇ ವಿಧಿ ರದ್ದುಪಡಿಸಿದ ಭಾರತ ಸರ್ಕಾರದ ನಿರ್ಧಾರವನ್ನೂ ಶೈಖ್ ಶ್ಲಾಘಿಸಿದ್ದಾರೆ. ಕಳೆದ 25 ವರ್ಷಗಳಿಂದ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಖಿ ಕಳುಹಿಸುತ್ತಿರುವ ಶೈಖ್ ಅವರು, ಜಮ್ಮು ಕಾಶ್ಮೀರದ ಕುರಿತು ಭಾರತದ ಸರ್ಕಾರದ ನಿರ್ಧಾರವನ್ನು ಪಾಕಿಸ್ತಾನ ವಿರೋಧಿಸುತ್ತಿರುವುದರ ಮಧ್ಯೆಯೂ ಈ ನಡೆ ಅನುಸರಿಸಿರುವುದು ಮೆಚ್ಚುಗೆಗೆ ಪಾತ್ರವಾಗಿದೆ.

ಆಗಸ್ಟ್ 3ರಂದು ರಕ್ಷಾ ಬಂಧನ ಆಚರಿಸಲಾಗುತ್ತಿದ್ದು, ಮಹಿಳಾ ಕುಶಲಕರ್ಮಿಗಳು ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಹಾಗೂ ಗಲ್ವಾನ್‍ನ ಗಡಿ ವಾಸ್ತವ ರೇಖೆ(ಎಲ್‍ಎಸಿ)ಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸೈನಿಕರಿಗೆ ರಾಖಿಯನ್ನು ಕಳುಹಿಸಿದ್ದಾರೆ. ಹೀಗೆ ರಕ್ಷಾ ಬಂಧನವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.