ಮಾರ್ಗ ಮಧ್ಯದಲ್ಲೇ 108 ಆ್ಯಂಬ್ಯುಲೆನ್ಸ್ ಪಂಕ್ಚರ್ ; ಚಿಕಿತ್ಸೆ ಸಿಗದೆ 19 ವರ್ಷದ ಯುವಕ ಸಾವು

03-04-21 12:27 pm       Headline Karnataka News Network   ದೇಶ - ವಿದೇಶ

108 ಆ್ಯಂಬ್ಯುಲೆನ್ಸ್ ಪಂಕ್ಚರ್ ಆದ ಪರಿಣಾಮ ರೋಗಿ ಮೃತಪಟ್ಟ ಘಟನೆ ಅಕೋಲದಲ್ಲಿ ನಡೆದಿದೆ.

ಮಹಾರಾಷ್ಟ್ರ,ಏ.03 : 108 ಆ್ಯಂಬ್ಯುಲೆನ್ಸ್ ಪಂಕ್ಚರ್ ಆದ ಪರಿಣಾಮ ರೋಗಿ ಮಾರ್ಗ ಮಧ್ಯದಲ್ಲೇ ಮೃತಪಟ್ಟ ಘಟನೆ ಮಹಾರಾಷ್ಟ್ರದ ಅಕೋಲದಲ್ಲಿ ನಡೆದಿದೆ.

19 ವರ್ಷದ ಯುವಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಅಕೋತ್​​ನಿಂದ ಅಕೋಲ ಸರ್ಕಾರಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗುತ್ತಿತ್ತು. ಆದರೆ ಮಧ್ಯ ದಾರಿಯಲ್ಲೇ ಆಂಬುಲೆನ್ಸ್‌ನ ಹಿಂದಿನ ಚಕ್ರ ಪಂಕ್ಚರ್ ಆಗಿದೆ. ಅಲ್ಲದೆ ಆಂಬುಲೆನ್ಸ್‌ನಲ್ಲಿ ಮತ್ತೊಂದು ಚಕ್ರ​(ಸ್ಟೆಪ್ನಿ) ಕೂಡ ಇರಲಿಲ್ಲ. ಹೀಗಾಗಿ ಯುವಕ ರೋಶನ್ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾನೆ.

ಪಂಕ್ಚರ್ ಆದ ಹಿನ್ನೆಲೆ ಯುವಕನ ಕಡೆಯವರು ಮತ್ತೊಂದು ಆ್ಯಂಬ್ಯುಲೆನ್ಸ್​ಗೆ ಫೋನ್​ ಕರೆ ಮಾಡಿದ್ದಾರೆ. ಆದರೆ ಅಕೋತ್​​ನಿಂದ ಆ್ಯಂಬ್ಯುಲೆನ್ಸ್​ ಬರುವುದಕ್ಕೆ ಸುಮಾರು 2 ತಾಸು ತಡವಾಗಿದೆ. ಈ ವೇಳೆಗಾಗಲೇ ಯುವಕ ರೋಶನ್ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದಿದ್ದಾನೆ.

ಕಳೆದ ಮೂರ್ನಾಲ್ಕು ವರ್ಷಗಳಿಂದ ಅಕೋತ್​-ಅಕೋಲ ರಸ್ತೆ ದುರಸ್ತಿ ಕಾರ್ಯ ನಡೆಯುತ್ತಿದ್ದು, ಇದುವರೆಗೂ ಪೂರ್ಣಗೊಂಡಿಲ್ಲ. ಈ ಹಿಂದಿನಿಂದಲೂ ಅನೇಕ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧದಲ್ಲೇ ಬಿಟ್ಟಿದ್ದಾರೆ ಎನ್ನಲಾಗಿದೆ.