ಕಾಶಿ ವಿಶ್ವನಾಥ ಮಂದಿರ, ಜ್ಞಾನವಾಪಿ ಮಸೀದಿ ಕಾಂಪ್ಲೆಕ್ಸ್ ಸರ್ವೆಗೆ ಕೋರ್ಟ್ ಅಸ್ತು

09-04-21 12:20 pm       Headline Karnataka News Network   ದೇಶ - ವಿದೇಶ

ಪ್ರಾಚ್ಯವಸ್ತು ಇಲಾಖೆಯಿಂದ ಮಸೀದಿ ಕಾಂಪ್ಲೆಕ್ಸ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ವ್ಯಾಪ್ತಿಯಲ್ಲಿ ಸರ್ವೆ ನಡೆಸಬಹುದು ಎಂದು ಕೋರ್ಟ್ ಹೇಳಿದೆ.

ಲಕ್ನೋ, ಎ.9: ವಾರಣಾಸಿಯಲ್ಲಿರುವ ಕಾಶಿ ವಿಶ್ವನಾಥ ದೇವಸ್ಥಾನ ಮತ್ತು ಪರಿಸರದ ಜ್ಞಾನವಾಪಿ ಮಸೀದಿಯ ಆವರಣದಲ್ಲಿ ಸರ್ವೆ ನಡೆಸುವುದಕ್ಕೆ ವಾರಣಾಸಿ ಕೋರ್ಟ್ ಅನುಮತಿ ನೀಡಿದೆ. ಪ್ರಾಚ್ಯವಸ್ತು ಇಲಾಖೆಯಿಂದ ಮಸೀದಿ ಕಾಂಪ್ಲೆಕ್ಸ್ ಮತ್ತು ಕಾಶಿ ವಿಶ್ವನಾಥ ದೇವಸ್ಥಾನ ವ್ಯಾಪ್ತಿಯಲ್ಲಿ ಸರ್ವೆ ನಡೆಸಬಹುದು ಎಂದು ಕೋರ್ಟ್ ಹೇಳಿದೆ.

ಅಲ್ಲದೆ, ಸರ್ವೆ ನಡೆಸುವುದಕ್ಕೆ ಆಗಬಹುದಾದ ವೆಚ್ಚವನ್ನು ಉತ್ತರ ಪ್ರದೇಶ ಸರಕಾರ ಭರಿಸಬೇಕೆಂದು ಕೋರ್ಟ್ ಹೇಳಿದೆ. ವಿ.ಎಸ್. ರಸ್ತೋಗಿ ಎಂಬ ವಕೀಲರೊಬ್ಬರು ಈ ಬಗ್ಗೆ ಕೋರ್ಟಿಗೆ ಮನವಿ ಮಾಡಿದ್ದು, ಜ್ಞಾನವಾಪಿ ಮಸೀದಿಯನ್ನು 1664ರಲ್ಲಿ ಔರಂಗಜೇಬ್ ಕಟ್ಟಿದ್ದ. ಎರಡು ಸಾವಿರ ವರ್ಷಗಳ ಪ್ರಾಚೀನ ಕಾಲದ ಕಾಶಿ ವಿಶ್ವನಾಥ ಮಂದಿರವನ್ನು ಒಡೆದು ಮಸೀದಿ ಕಟ್ಟಲಾಗಿತ್ತು. ಮಸೀದಿ ಇರುವ ಭೂಮಿಯನ್ನು ಕಾಶಿ ವಿಶ್ವನಾಥ ದೇವಸ್ಥಾನ ಕಮಿಟಿಗೇ ಬಿಟ್ಟುಕೊಡಬೇಕು. ಸರಕಾರ ಅದನ್ನು ವಶಕ್ಕೆ ಪಡೆಯಬೇಕು. ಅದಕ್ಕಾಗಿ ಪ್ರಾಚ್ಯವಸ್ತು ಇಲಾಖೆಯಿಂದ ಸರ್ವೆ ನಡೆಸಿ, ಅಧ್ಯಯನ ನಡೆಸಬೇಕು ಎಂದು ಕೋರ್ಟಿಗೆ ಮನವಿ ಮಾಡಿದ್ದರು.

ಈ ಬಗ್ಗೆ ವಿಚಾರಣೆ ನಡೆಸಿದ ಕೋರ್ಟ್, ದೇವಸ್ಥಾನ ಮತ್ತು ಮಸೀದಿ ಇರುವ ಜಾಗದಲ್ಲಿ ಭಾರತೀಯ ಪ್ರಾಚ್ಯವಸ್ತು ಇಲಾಖೆಯಿಂದ ಸರ್ವೆ ನಡೆಸುವಂತೆ ಸೂಚನೆ ನೀಡಿದೆ.