ಮೆಕ್ಸಿಕೊದಲ್ಲಿ ರೈಲು ಅಪಘಾತ ; 23 ಮಂದಿ ಸಾವು

04-05-21 04:10 pm       Headline Karnataka News Network   ದೇಶ - ವಿದೇಶ

ಮೆಟ್ರೋ ಮೇಲ್ಸೇತುವೆ ಕುಸಿದು 23 ಮಂದಿ ಮೃತಪಟ್ಟು 700ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವ ಘಟನೆ ಮೆಕ್ಸಿಕೋ ಸಿಟಿಯಲ್ಲಿ ನಡೆದಿದೆ. 

Photo credits : 9news

ಮೆಕ್ಸಿಕೊ, ಮೇ 4 : ಜನನಿಬಿಡ ರಸ್ತೆಯ ಮೇಲೆ ಮೆಟ್ರೋ ಮೇಲ್ಸೇತುವೆ ಕುಸಿದು 23 ಮಂದಿ ಮೃತಪಟ್ಟು 700ಕ್ಕೂ ಹೆಚ್ಚು ಜನ ಗಂಭೀರ ಗಾಯಗೊಂಡಿರುವ ಘಟನೆ ಮೆಕ್ಸಿಕೋ ಸಿಟಿಯಲ್ಲಿ ನಡೆದಿದೆ. 

ಸೋಮವಾರ ರಾತ್ರಿ ಮೆಟ್ರೋ ರೈಲು ಸಂಚಾರ ಮಾಡುತ್ತಿದ್ದ ವೇಳೆಯಲ್ಲಿ ಈ ದುರಂತ ನಡೆದಿದ್ದು, ಮೇಲ್ಸೇತುವೆ ಕುಸಿಯುತ್ತಿದ್ದಂತೆ ರೈಲು ಕೆಳಗೆ ಬಿದ್ದಿದೆ. ಅಪಘಾತ ನಡೆದ ಕೆಲವೇ ಹೊತ್ತಲ್ಲಿ ಸ್ಥಳಕ್ಕೆ ಧಾವಿಸಿದ ರಕ್ಷಣಾ ಸಿಬ್ಬಂದಿ ಹಲವರನ್ನು ಕಾಪಾಡಿದ್ದಾರೆ. ಹಾಗೇ, ಅವಶೇಷಗಳಡಿ ಸಿಲುಕಿದ್ದ ಮೃತದೇಹಗಳನ್ನೂ ಹೊರತೆಗೆದಿದ್ದಾರೆ. ಮೊದಲು ಸುಮಾರು 13 ಮೃತದೇಹಗಳು ಸಿಕ್ಕಿದ್ದವು. ಇದೀಗ ಸಾವಿನ ಸಂಖ್ಯೆ ಹೆಚ್ಚಾಗಿದೆ.

ಇನ್ನು ಮೇಲ್ಸೇತುವೆ ಮತ್ತು ಆ ಸಮಯದಲ್ಲಿ ಅದರ ಮೇಲೆ ಸಂಚರಿಸುತ್ತಿದ್ದ ರೈಲು ಕೆಳಗೆ ರಸ್ತೆಯ ಮೇಲೆ ಹೋಗುತ್ತಿರುವ ಕಾರುಗಳು, ವಾಹನಗಳ ಮೇಲೆ ಬಿದ್ದ ದೃಶ್ಯವನ್ನು ಅಲ್ಲಿನ ಚಾನಲ್​​ವೊಂದು ತೋರಿಸಿದ್ದು, ವಿಡಿಯೋ ಭೀಕರವಾಗಿದೆ. 

ಇನ್ನು ರಕ್ಷಣಾ ಕಾರ್ಯಾಚರಣೆಯೂ ಸಹ ಕಷ್ಟಕರವಾಗಿಯೇ ಇತ್ತು. ಘಟನಾ ಸ್ಥಳವನ್ನು ಪರಿಶೀಲಿಸಿದ ಮೆಕ್ಸಿಕೋ ಸಿಟಿಯ ಮೇಯರ್​ ಕ್ಲೌಡಿಯಾ ಶೀನ್​ಬಾಮ್​, ಮೇಲ್ಸೇತುವ ಕುಸಿದಾಗ ರೈಲು ಅರ್ಧ ಕುಸಿದಿದೆ. ಹಾಗಾಗಿ ರಕ್ಷಣಾ ಕಾರ್ಯಾಚರಣೆ ಕಷ್ಟವಾಯಿತು. ನಂತರ ಸ್ಥಳಕ್ಕೆ ಕ್ರೇನ್​ ಕಳಿಸಲಾಯಿತು ಎಂದು ತಿಳಿಸಿದ್ದಾರೆ. ಇನ್ನು ಆಸ್ಪತ್ರೆಗೆ ದಾಖಲಾದವರ ಸ್ಥಿತಿ ಕೂಡ ತುಂಬ ಗಂಭೀರವಾಗಿದೆ. ಕೆಲವರಿಗೆ ಸರ್ಜರಿ ನಡೆಸಲಾಗಿದೆ ಎಂದು ಹೇಳಿದ್ದಾರೆ.