ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆ ! ಹಿಂದಿನದಕ್ಕಿಂತ 15 ಪಟ್ಟು ಹೆಚ್ಚು ತೀವ್ರತೆ !

04-05-21 11:21 pm       Headline Karnataka News Network   ದೇಶ - ವಿದೇಶ

ದೇಶದಲ್ಲಿ ಕೊರೊನಾ ಎರಡನೇ ಅಲೆ ಸದ್ದು ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ.

ವಿಶಾಖಪಟ್ಟಣ, ಮೇ 4: ದೇಶದಲ್ಲಿ ಕೊರೊನಾ ಎರಡನೇ ಅಲೆ ಸದ್ದು ಮಾಡಿರುವಾಗಲೇ ಆಂಧ್ರ ಪ್ರದೇಶದಲ್ಲಿ ಹೊಸ ರೀತಿಯ ರೂಪಾಂತರಿ ವೈರಸ್ ಪತ್ತೆಯಾಗಿದ್ದು ಸಂಚಲನ ಸೃಷ್ಟಿಸಿದೆ. ಹೊಸ ರೀತಿಯ ವೈರಸನ್ನು ಜೀವ ಶಾಸ್ತ್ರಜ್ಞರು ಪತ್ತೆ ಮಾಡಿದ್ದಾರೆ ಎನ್ನಲಾಗುತ್ತಿದ್ದು ಇದಕ್ಕೆ ಆಂಧ್ರಪ್ರದೇಶ ರೂಪಾಂತರಿ ಎಂದಿದ್ದಾರೆ. ಕಳೆದ ಬಾರಿಯ ಕೊರೊನಾ ವೈರಸ್ ಗಿಂತ ಈಗಿನ ವೈರಸ್ 15 ಪಟ್ಟು ಹೆಚ್ಚು ತೀವ್ರತೆಯನ್ನು ಹೊಂದಿದೆ ಎನ್ನುವ ಅಂಶವನ್ನು ತಜ್ಞರು ಗುರುತಿಸಿದ್ದಾರೆ. ಆದರೆ, ಇದು ಹೊಸ ರೀತಿಯ ರೂಪಾಂತರಿ ವೈರಸ್ ಎನ್ನುವುದನ್ನು ದೆಹಲಿ ವಿಜ್ಞಾನಿಗಳು ದೃಢಪಡಿಸಿಲ್ಲ.

ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯಲ್ಲಿ ಮೊದಲ ಬಾರಿಗೆ ಹೊಸ ವೈರಸ್ ಪತ್ತೆಯಾಗಿದ್ದು ಇದನ್ನು ವಿಜ್ಞಾನಿಗಳು ಎನ್ 440 ಕೆ ಎಂದು ಗುರುತಿಸಿದ್ದಾರೆ. ಹೈದರಾಬಾದಿನ ಸೆಂಟರ್ ಫಾರ್ ಸೆಲ್ಯುಲಾರ್ ಅಂಡ್ ಮೋಲೆಕ್ಯುಲಾರ್ ಬಯೋಲಜಿ ಕೇಂದ್ರದ ವಿಜ್ಞಾನಿ ದಿವ್ಯತೇಜ್ ಸೌಪಾಟಿ ಪ್ರಕಾರ, ಎನ್440 ಕೆ ರೂಪಾಂತರಿ ವೈರಸ್ ಆಗಿದ್ದು, ಕಳೆದ ವರ್ಷ ಪತ್ತೆಯಾಗಿದ್ದ ಕೊರೊನಾ ವೈರಸ್ ಮಾದರಿಯಲ್ಲೇ ಇದೆ. ಆದರೆ, ಇವುಗಳ ಜೀವಕೋಶಗಳ ಅಧ್ಯಯನದಲ್ಲಿ ಹರಡುವಿಕೆಯ ವೇಗ ಮತ್ತು ಸೋಂಕಿನ ತೀವ್ರತೆ ಹೆಚ್ಚಿರುವುದು ಕಂಡುಬಂದಿದೆ. ಆದರೆ ಹೊರ ಜಗತ್ತಿನಲ್ಲಿ ಅದು ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದನ್ನು ಈಗಲೇ ಹೇಳುವಂತಿಲ್ಲ ಎಂದಿದ್ದಾರೆ.

ಇದೇ ವೇಳೆ, ದೆಹಲಿಯ ವಿನೋದ್ ಸ್ಕರಿಯಾ ಎನ್ನುವ ಜೀವಶಾಸ್ತ್ರಜ್ಞರು ಬೇರೆಯದ್ದೇ ವರದಿ ನೀಡಿದ್ದಾರೆ. ಎನ್ 440ಕೆ ಮಾದರಿಯ ವೈರಸ್ ಭಾರತದಲ್ಲಿ ಬಹುತೇಕ ನಶಿಸುತ್ತಿದೆ. ಅದರ ಬದಲು, ಹೊಸ ರೀತಿಯ ರೂಪಾಂತರಿ ವೈರಸ್ ಆ ಸ್ಥಾನವನ್ನು ತುಂಬುತ್ತಿದೆ. ಬಿ.1.1.7 ಮತ್ತು ಬಿ.1.617 ಮಾದರಿಯ ವೈರಸ್ ಕೇರಳ ಸೇರಿದಂತೆ ದಕ್ಷಿಣ ಭಾರತದಲ್ಲಿ ಕಂಡುಬರುತ್ತಿದೆ. ಇದನ್ನು ಯುಕೆ ರೂಪಾಂತರಿ, ಭಾರತೀಯ ರೂಪಾಂತರಿ ವೈರಸ್ ಅಥವಾ ಡಬಲ್ ರೂಪಾಂತರಿ ಎನ್ನುವುದಾಗಿ ಹೇಳಲಾಗುತ್ತಿದೆ ಎಂದಿದ್ದಾರೆ.

ಭಾರತದಲ್ಲಿ ಹರಡುತ್ತಿರುವ ವೈರಸ್ ಬಗ್ಗೆ ಯಾವುದೇ ಖಚಿತ ನಿರ್ಧಾರಕ್ಕೆ ಬರುವಂತಿಲ್ಲ. ವೈರಾಣು ತಜ್ಞರು ಈ ಬಗ್ಗೆ ಇನ್ನೂ ಅಧ್ಯಯನ ನಡೆಸುತ್ತಿದ್ದಾರೆ. ಆದರೆ, ವಿಶಾಖಪಟ್ಟಣ ಭಾಗದಲ್ಲಿ ಹರಡುತ್ತಿರುವ ವೈರಸ್ ಮಾತ್ರ ವಿಭಿನ್ನ ರೀತಿಯದ್ದು ಎಂದು ಗುರುತಿಸಲಾಗಿದೆ. ಕಳೆದ ವರ್ಷ ನಾವು ನೋಡಿದ ವೈರಸ್ ಮಾದರಿಗಿಂತ ಈಗ ಕಂಡುಬರುತ್ತಿರುವ ಸೋಂಕು ಮತ್ತು ಅದರ ತೀವ್ರತೆ ಹೆಚ್ಚಿನದ್ದಿದೆ ಎಂದು ಆರೋಗ್ಯ ತಜ್ಞರ ಜೊತೆಗಿನ ಸಭೆಯ ಬಳಿಕ ವಿಶಾಖಪಟ್ಟಣದ ಜಿಲ್ಲಾಧಿಕಾರಿ ವಿ. ವಿನಯಚಂದ್ ಹೇಳಿದ್ದಾರೆ.

ಆದರೆ, ಆಂಧ್ರದಲ್ಲಿ ಪತ್ತೆಯಾಗಿರುವ ಹೊಸ ರೀತಿಯ ವೈರಸ್ ಬಗ್ಗೆ ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಮತ್ತು ಆಂಧ್ರ ಪ್ರದೇಶ ಮೆಡಿಕಲ್ ಕಾಲೇಜಿನ ಪ್ರಿನ್ಸಿಪಾಲ್ ಕೂಡ ಆಗಿರುವ ಡಾ. ಪಿ.ವಿ.ಸುಧಾಕರ್ ಎಚ್ಚರಿಕೆಯ ಮಾತನ್ನು ಆಡಿದ್ದಾರೆ. ಹೊಸ ರೀತಿಯ ವೈರಸ್ ಮನುಷ್ಯನಿಗೆ ದಾಳಿಯೆಸಗಿದ ಮೂರ್ನಾಲ್ಕು ದಿನಗಳಲ್ಲೇ ತೀವ್ರತೆಗೆ ಹೋಗುತ್ತಿರುವುದನ್ನು ಪತ್ತೆ ಮಾಡಲಾಗಿದೆ. ಹಿಂದೆ ಕಂಡುಬಂದಿದ್ದ ವೈರಸ್ ಸೋಂಕು ಆಗಿ ಅದರ ತೀವ್ರತೆ ಕಂಡುಬರಲು ಒಂದು ವಾರವಾದ್ರೂ ಬೇಕಿತ್ತು. ಈಗಿನದ್ದು ಮೂರ್ನಾಲ್ಕು ದಿನದಲ್ಲೇ ತೀವ್ರ ಸ್ಥಿತಿಗೆ ತಲುಪುತ್ತಿದ್ದು ಸಮಸ್ಯೆಗೆ ಕಾರಣವಾಗಿದೆ. ಇದರಿಂದಾಗಿ ಐಸಿಯು ಮತ್ತು ಬೆಡ್ ಕೊರತೆ ಕಾಡುವ ಸಾಧ್ಯತೆ ಇದೆ ಎಂದಿದ್ದಾರೆ.

ಈ ವೈರಸ್ ಹರಡುವ ವೇಗವೂ ಹೆಚ್ಚಿದೆ. ಏಕಕಾಲದಲ್ಲಿ ಮೂರ್ನಾಲ್ಕು ಜನರಿಗೆ ಸೋಂಕು ಹರಡುತ್ತಿರುವುದು ಕಂಡುಬಂದಿದೆ. ಹೆಚ್ಚು ರೋಗ ನಿರೋಧಕ ಶಕ್ತಿ ಇರುವ ಯುವಜನರ ಮೇಲೆ ಹೆಚ್ಚಾಗಿ ಸೋಂಕು ತಗಲುತ್ತಿದೆ. ಕೆಲವರು ಚಿಕಿತ್ಸೆಗೆ ಸ್ಪಂದಿಸುತ್ತಿದ್ದರೆ ಇನ್ನು ಕೆಲವರು ಸ್ಪಂದಿಸುತ್ತಿಲ್ಲ ಎಂದು ಡಾ.ಸುಧಾಕರ್ ಹೇಳಿದ್ದಾರೆ.

Amid reports that coronavirus variant N440K is more virulent and spreading "a lot more" in southern states of the country, experts have suggested that there is no need for people to panic. As per reports, Centre for Cellular and Molecular Biology (CCMB) Advisor Rakesh Mishra said that the N440K strain which was present in the samples of Andhra Pradesh, Karnataka, Telangana will fade away soon.