ಉತ್ತರ ಪ್ರದೇಶದಲ್ಲಿ ಎರಡು ಮಕ್ಕಳ ನೀತಿ ಕರಡು ರೆಡಿ ; ಸರಕಾರಿ ಸೌಲಭ್ಯಕ್ಕೆ ಕತ್ತರಿ, ಚುನಾವಣೆ ಸ್ಪರ್ಧೆ ಇರಲ್ಲ !

10-07-21 05:35 pm       Headline Karnataka News Network   ದೇಶ - ವಿದೇಶ

ಉತ್ತರ ಪ್ರದೇಶ ಸರಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿ ಜಾರಿಗೆ ತರುತ್ತಿರುವ ನೂತನ ಮಸೂದೆಯ ಕರಡು ಪ್ರತಿ ಬಿಡುಗಡೆಯಾಗಿದ್ದು, ಎರಡು ಮಕ್ಕಳ ನೀತಿಯನ್ನು ಪಾಲಿಸದ ಕುಟುಂಬಗಳಿಗೆ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗದಂತೆ ನಿಯಮ ರೂಪಿಸಲಾಗಿದೆ.

ಲಕ್ನೋ, ಜುಲೈ 10: ಉತ್ತರ ಪ್ರದೇಶ ಸರಕಾರ ಜನಸಂಖ್ಯಾ ನಿಯಂತ್ರಣಕ್ಕಾಗಿ ಜಾರಿಗೆ ತರುತ್ತಿರುವ ನೂತನ ಮಸೂದೆಯ ಕರಡು ಪ್ರತಿ ಬಿಡುಗಡೆಯಾಗಿದ್ದು, ಎರಡು ಮಕ್ಕಳ ನೀತಿಯನ್ನು ಪಾಲಿಸದ ಕುಟುಂಬಗಳಿಗೆ ಸರಕಾರದ ಸೌಲಭ್ಯ ಪಡೆಯಲು ಸಾಧ್ಯವಾಗದಂತೆ ನಿಯಮ ರೂಪಿಸಲಾಗಿದೆ. ಅಲ್ಲದೆ, ಗ್ರಾಮ ಪಂಚಾಯಿತಿ ಚುನಾವಣೆಗೂ ಸ್ಪರ್ಧಿಸದಂತೆ ತಡೆಯೊಡ್ಡುವ ಪ್ರಸ್ತಾವ ಇದೆ.

ಈ ಬಗ್ಗೆ ಉತ್ತರ ಪ್ರದೇಶ ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ಜಸ್ಟಿಸ್ ಎ.ಎನ್.ಮಿತ್ತಲ್ ಮಾಹಿತಿ ನೀಡಿದ್ದು, ಪ್ರಸ್ತಾವಿತ ಮಸೂದೆ ಪ್ರಕಾರ ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಸ್ಥರು ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಸ್ಪರ್ಧಿಸುವಂತಿಲ್ಲ. ಸರಕಾರದ ಸೌಲಭ್ಯಗಳನ್ನೂ ಪಡೆಯುವಂತಿಲ್ಲ. ಇದರ ಜೊತೆಗೆ ರೇಶನ್ ಕಾರ್ಡ್ ಸೌಲಭ್ಯವನ್ನೂ ಪಡೆಯಲು ಸಾಧ್ಯವಿಲ್ಲ. ರೇಶನ್ ಕಾರ್ಡಿನಲ್ಲಿ ಕುಟುಂಬದಲ್ಲಿ ನಾಲ್ಕು ಯೂನಿಟ್ ಮಾತ್ರ ಕೊಡುವಂತೆ ನಿಯಮ ರೂಪಿಸಲಾಗುವುದು ಎಂದು ತಿಳಿಸಿದ್ದಾರೆ.

ಎರಡು ಮಕ್ಕಳ ನೀತಿಯನ್ನು ಪಾಲಿಸಿದವರಿಗೆ ಸರಕಾರದ ವಿವಿಧ ಸೌಲಭ್ಯಗಳಲ್ಲಿ ರಿಯಾಯ್ತಿ ಸಿಗಲಿದೆ. ಸರಕಾರಿ ನೌಕರರು ಎರಡು ಮಕ್ಕಳ ನೀತಿಯನ್ನು ಪಾಲಿಸಿದರೆ ರಿಯಾಯ್ತಿ ದರದಲ್ಲಿ ಸೌಲಭ್ಯ ಸಿಗಲಿದೆ. ಭಡ್ತಿಯ ಜೊತೆಗೆ ನೌಕರರಿಗೆ ಎರಡು ಬಾರಿ ಹೆಚ್ಚುವರಿ ವೇತನ(ಇಂಕ್ರಿಮೆಂಟ್) ಹೆಚ್ಚಳದ ಸೌಲಭ್ಯ, ಮನೆ ಅಥವಾ ಜಾಗ ಖರೀದಿಸುವುದಿದ್ದರೆ ಸಬ್ಸಿಡಿ, ಇಪಿಎಫ್ ಮೊತ್ತದಲ್ಲಿ ಬಡ್ಡಿ ರಿಯಾಯ್ತಿ ಸಿಗಲಿದೆ. ಅದೇ ಒಂದು ಮಗುವನ್ನು ಹೊಂದಿದ್ದರೆ, ಅಂಥ ನೌಕರನಿಗೆ ನಾಲ್ಕು ಬಾರಿ ಹೆಚ್ಚುವರಿ ವೇತನದಲ್ಲಿ ಇಂಕ್ರಿಮೆಂಟ್, ಮಗುವಿನ ಆರೋಗ್ಯ ಮತ್ತು ಶಿಕ್ಷಣದ ವೆಚ್ಚ 20 ವರ್ಷದ ವರೆಗೆ ಸಂಪೂರ್ಣ ಉಚಿತ ಸಿಗಲಿದೆ.

ಸರಕಾರಿ ನೌಕರರು ಅಲ್ಲದೆ, ಸಾಮಾನ್ಯ ನಾಗರಿಕರು ಎರಡು ಮಕ್ಕಳ ನೀತಿಯನ್ನು ಪಾಲಿಸಿದವರಿಗೆ ಮನೆ ತೆರಿಗೆ, ನೀರಿನ ಬಿಲ್, ವಿದ್ಯುತ್ ಬಿಲ್, ಮನೆ ಸಾಲದ ಕಂತಿನಲ್ಲಿ ರಿಯಾಯ್ತಿ ಸಿಗಲಿದೆ. ಸದ್ಯಕ್ಕೆ ಯುಪಿ ಲಾ ಕಮಿಷನ್ನಿನ ವೆಬ್ ಸೈಟಿನಲ್ಲಿ ಮಸೂದೆಯ ಕರಡು ಪ್ರತಿಯನ್ನು ಹಾಕಲಾಗಿದ್ದು, ಜುಲೈ 19ರ ವರೆಗೆ ಸಾರ್ವಜನಿಕರು ಮಸೂದೆ ಬಗ್ಗೆ ಸಲಹೆಗಳನ್ನು ನೀಡಬಹುದು ಎಂದು ಎ.ಎನ್. ಮಿತ್ತಲ್ ತಿಳಿಸಿದ್ದಾರೆ.

ಸಿಎಂ ಯೋಗಿ ಆದಿತ್ಯನಾಥ್ ಇನ್ನೆರಡು ದಿನದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಹೊಸ ನೀತಿಗಳನ್ನು ಪ್ರಕಟಿಸಲಿದ್ದು, ಅದಕ್ಕೂ ಮುನ್ನ ಪ್ರಸ್ತಾವಿತ ಮಸೂದೆಯ ಕರಡು ಪ್ರತಿಯನ್ನು ಬಿಡುಗಡೆ ಮಾಡಲಾಗಿದೆ. ಕಳೆದ ತಿಂಗಳು ಅಸ್ಸಾಂ ಮುಖ್ಯಮಂತ್ರಿ ಹಿಮಾಂತ್ ಬಿಸ್ವಾಸ್ ಶರ್ಮಾ ಕೂಡ ಜನಸಂಖ್ಯಾ ನಿಯಂತ್ರಣಕ್ಕಾಗಿ ಎರಡು ಮಕ್ಕಳ ಪಾಲಿಸಿಯನ್ನು ಜಾರಿಗೆ ತರುವುದಾಗಿ ಹೇಳಿಕೆ ನೀಡಿದ್ದರು.

Uttar Pradesh, the most populous state in India and only the fourth largest in terms of area, is all set to come out with a population control legislation, a draft for which was released on Saturday in the public domain. The bill provides incentives to married couples who limit their families to two or fewer children, whereas it disincentivizes those who fail to adhere to the two-child norm.