ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಾ ಕಣಕ್ಕೆ ಇಳಿಯಲಿರುವ ಐಪಿಎಸ್ ಅಧಿಕಾರಿ !

20-08-21 05:39 pm       Headline Karnataka News Network   ದೇಶ - ವಿದೇಶ

ಮುಂದಿನ ವರ್ಷ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದ ಯಾವುದೇ ಮೂಲೆಯಿಂದ ಸ್ಪರ್ಧಿಸಿದರೂ ಅವರ ವಿರುದ್ಧ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ.

ಲಕ್ನೋ, ಆಗಸ್ಟ್ 20: ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ವಿರುದ್ಧ ಸ್ಪರ್ಧಿಸಲು ಐಪಿಎಸ್ ಅಧಿಕಾರಿಯೊಬ್ಬರು ತಯಾರಾಗಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಗೃಹ ಇಲಾಖೆಯಿಂದ ಕಡ್ಡಾಯ ನಿವೃತ್ತಿಯ ಶಿಕ್ಷೆಗೆ ಒಳಗಾಗಿದ್ದ ಅಮಿತಾಭ್ ಠಾಕೂರ್, ಮುಂದಿನ ವರ್ಷ ಸಿಎಂ ಯೋಗಿ ಆದಿತ್ಯನಾಥ್ ರಾಜ್ಯದ ಯಾವುದೇ ಮೂಲೆಯಿಂದ ಸ್ಪರ್ಧಿಸಿದರೂ ಅವರ ವಿರುದ್ಧ ಚುನಾವಣೆಗೆ ನಿಲ್ಲುವುದಾಗಿ ಹೇಳಿದ್ದಾರೆ.

ಈ ಬಗ್ಗೆ ಅಮಿತಾಭ್ ಠಾಕೂರ್ ಪತ್ನಿ ನೂತನ್ ಹೇಳಿಕೆ ಬಿಡುಗಡೆ ಮಾಡಿದ್ದು, ಇದು ಸಿಎಂ ಯೋಗಿ ಆದಿತ್ಯನಾಥ್ ಅವರ ದುರಾಡಳಿತದ ವಿರುದ್ಧದ ಹೋರಾಟ. ಪ್ರಜಾಪ್ರಭುತ್ವ ವಿರೋಧಿ, ಅನೈತಿಕ, ತಾರತಮ್ಯ ಧೋರಣೆಯ ಆಡಳಿತದ ವಿರುದ್ಧದ ಹೋರಾಟ. ಯೋಗಿ ಆದಿತ್ಯನಾಥ್ ಹಲವಾರು ನಿರ್ಧಾರಗಳನ್ನು ಅನೈತಿಕ ನೆಲೆಯಲ್ಲಿ ತೆಗೆದುಕೊಂಡಿದ್ದಾರೆ. ಅವರು ರಾಜ್ಯದ ಯಾವುದೇ ಕಡೆಯಲ್ಲಿ ಸ್ಪರ್ಧಿಸಿದರೂ, ಅಮಿತಾಭ್ ಠಾಕೂರ್ ಚುನಾವಣೆಗೆ ನಿಲ್ಲಲಿದ್ದಾರೆ ಎಂದು ಹೇಳಿದ್ದಾರೆ.

ಅಮಿತಾಭ್ ತಮ್ಮ ಸೇವಾವಧಿಯಲ್ಲಿ ತಪ್ಪು ನೀತಿಗಳ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದಾರೆ. ತತ್ವ, ನಿಷ್ಠೆಗಳನ್ನು ಅನುಸರಿಸಿ, ತಪ್ಪು ನೀತಿಗಳನ್ನು ಖಂಡಿಸುತ್ತಾ ಬಂದಿದ್ದಾರೆ. ಈಗ ತತ್ವ, ಸಿದ್ಧಾಂತಕ್ಕಾಗಿ ಸ್ಪರ್ಧಾ ಕಣಕ್ಕೆ ಇಳಿಯಲಿದ್ದಾರೆ ಎಂದು ನೂತನ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಅಮಿತಾಭ್ ಠಾಕೂರ್ ಸೇವಾವಧಿ 2028ರ ವರೆಗೆ ಇದ್ದರೂ, ನೀವು ಉಳಿದ ಸೇವಾವಧಿಯನ್ನು ಪೂರೈಸಲು ಯೋಗ್ಯರಾಗಿಲ್ಲ ಎಂದು ಹೇಳಿ ಕೇಂದ್ರ ಗೃಹ ಇಲಾಖೆಯಿಂದ ಸಾರ್ವಜನಿಕ ಹಿತಾಸಕ್ತಿ ನೆಲೆಯಲ್ಲಿ ಕಡ್ಡಾಯ ನಿವೃತ್ತಿ ಪಡೆಯಲಾಗಿತ್ತು. 2017ರಲ್ಲಿ ಅಮಿತಾಭ್ ಠಾಕೂರ್ ತನ್ನ ಉತ್ತರ ಪ್ರದೇಶ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ ಸೇವೆ ಸಲ್ಲಿಸಲು ಅವಕಾಶ ಕೋರಿದ್ದರು. ಅದಕ್ಕೂ ಮುನ್ನ 2015ರ ಜುಲೈ 13ರಂದು ಅಮಿತಾಭ್ ಠಾಕೂರ್ ಸೇವೆಯಿಂದ ಸಸ್ಪೆಂಡ್ ಆಗಿದ್ದರು. ಸಮಾಜವಾದಿ ಪಕ್ಷದ ಮುಖಂಡ ಮುಲಾಯಂ ಸಿಂಗ್ ತನ್ನ ಮೇಲೆ ಬೆದರಿಕೆ ಒಡ್ಡಿದ್ದಾರೆಂದು ಆರೋಪಿಸಿದ್ದ ಕೆಲವು ದಿನಗಳಲ್ಲಿ ಸಸ್ಪೆಂಡ್ ಮಾಡಲಾಗಿತ್ತು.

ಅದರ ನಡುವೆ, ಅಮಿತಾಭ್ ವಿರುದ್ಧ ವಿಜಿಲೆನ್ಸ್ ತನಿಖೆ ನಡೆಸಲಾಗಿತ್ತು. ಆದರೆ, 2017ರಲ್ಲಿ ಕೇಂದ್ರೀಯ ಆಡಳಿತ ಪ್ರಾಧಿಕಾರ ಅಮಿತಾಭ್ ಮೇಲಿನ ಅಮಾನತು ಆದೇಶಕ್ಕೆ ತಡೆ ವಿಧಿಸಿದ್ದಲ್ಲದೆ, 2015ರಿಂದಲೇ ಪೂರ್ತಿ ವೇತನ ಸಹಿತ ಸೇವೆಗೆ ತೆಗೆದುಕೊಳ್ಳುವಂತೆ ಆದೇಶ ಮಾಡಿತ್ತು. ಅದರಂತೆ, ಮತ್ತೆ ರಾಜ್ಯ ಸೇವೆಯಲ್ಲಿ ಮುಂದುವರಿದಿದ್ದರು. ರಾಜ್ಯ ಸರಕಾರದ ಜೊತೆ ಜಟಾಪಟಿ ನಡೆಸುತ್ತಲೇ ಈಗ ಕಡ್ಡಾಯ ನಿವೃತ್ತಿ ಪಡೆಯಲು ಕೇಂದ್ರ ಸರಕಾರ ಸೂಚನೆ ನೀಡಿತ್ತು. 

Former IPS officer Amitabh Thakur says will contest UP assembly elections against Yogi Adityanath