ಕಾಬೂಲಿನಲ್ಲಿ ಜೈಲು ಕೈದಿಗಳಾಗಿದ್ದ ಕೇರಳದ ಐಸಿಸ್ ವಿಧವೆಯರು ! 'ಸ್ವರ್ಗ'ದ ಕನಸಲ್ಲಿ ನರಳಾಡಿದ ನಿಮಿಷಾ ಫಾತಿಮಾ, ಮೆರಿನ್ ಮರಿಯಂ, ಸೋನಿಯಾ !!

22-08-21 02:33 pm       Giridhar Shetty   ದೇಶ - ವಿದೇಶ

ಐಸಿಸ್ ಜೈಲು ಕೈದಿಗಳಾಗಿದ್ದವರಲ್ಲಿ ಕೇರಳದಿಂದ ಐದು ವರ್ಷಗಳ ಹಿಂದೆ ಸಿರಿಯಾಕ್ಕೆ ತೆರಳಿದ್ದ ಯುವತಿಯರೂ ಇದ್ದಾರೆ. ಹೀಗಾಗಿ ತಾಲಿಬಾನಿಗಳು ಜೈಲಿನಿಂದ ಉಗ್ರ ಕೈದಿಗಳನ್ನು ಬಿಡುಗಡೆ ಮಾಡುತ್ತಿದ್ದಂತೆ, ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಬಿಂದು ಸಂಪತ್ ಭಾರತ ಸರಕಾರಕ್ಕೆ ತನ್ನ ಮಗಳು ನಿಮಿಷಾ ಫಾತಿಮಾಳನ್ನು ಮರಳಿ ತಂದುಕೊಡುವಂತೆ ಮನವಿ ಮಾಡಿದ್ದಾರೆ.

ತಿರುವನಂತಪುರ, ಆಗಸ್ಟ್ 21: ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಅಧಿಕಾರ ಕಿತ್ತುಕೊಂಡು ಜೈಲಿನಲ್ಲಿದ್ದ ಕೈದಿಗಳನ್ನು ಬಿಡುಗಡೆ ಮಾಡುತ್ತಿದ್ದಂತೆ ಇತ್ತ ಕೇರಳದಲ್ಲಿ ತಾಯಿಯೊಬ್ಬಳ ಆರ್ತನಾದ ಕೇಳಿಬಂದಿದೆ. ಐದು ವರ್ಷಗಳ ಹಿಂದೆ ತನ್ನನ್ನು ಬಿಟ್ಟು ಹೋದ ಮಗಳನ್ನು ಪತ್ತೆ ಮಾಡುವಂತೆ ಭಾರತ ಸರಕಾರದ ಬಳಿ ಮೊರೆ ಇಟ್ಟಿದ್ದಾಳೆ. ತಾಲಿಬಾನಿಗಳು ಕಾಬೂಲನ್ನು ವಶಕ್ಕೆ ಪಡೆದು ಅಲ್ಲಿ ಜೈಲಿನಲ್ಲಿ ಕೂಡಿಹಾಕಿದ್ದ 1400ಕ್ಕೂ ಹೆಚ್ಚು ಮಂದಿ ಐಸಿಸ್ ಕೈದಿಗಳನ್ನು ಬಿಟ್ಟು ಕಳಿಸಿದ್ದಾರೆ.

ಐಸಿಸ್ ಜೈಲು ಕೈದಿಗಳಾಗಿದ್ದವರಲ್ಲಿ ಕೇರಳದಿಂದ ಐದು ವರ್ಷಗಳ ಹಿಂದೆ ಸಿರಿಯಾಕ್ಕೆ ತೆರಳಿದ್ದ ಯುವತಿಯರೂ ಇದ್ದಾರೆ. ಹೀಗಾಗಿ ತಾಲಿಬಾನಿಗಳು ಜೈಲಿನಿಂದ ಉಗ್ರ ಕೈದಿಗಳನ್ನು ಬಿಡುಗಡೆ ಮಾಡುತ್ತಿದ್ದಂತೆ, ಕೇರಳದ ರಾಜಧಾನಿ ತಿರುವನಂತಪುರದಲ್ಲಿರುವ ಬಿಂದು ಸಂಪತ್ ಭಾರತ ಸರಕಾರಕ್ಕೆ ತನ್ನ ಮಗಳು ನಿಮಿಷಾ ಫಾತಿಮಾಳನ್ನು ಮರಳಿ ತಂದುಕೊಡುವಂತೆ ಮನವಿ ಮಾಡಿದ್ದಾರೆ. ಹೇಗಾದ್ರೂ ಮಾಡಿ, ನನ್ನ ಚಿನ್ನುವನ್ನು ತಂದುಕೊಡಿ ಎಂದು ಕೇಳಿಕೊಂಡಿದ್ದಾರೆ..

ನಾಲ್ಕೇ ದಿನದಲ್ಲಿ ಬ್ರೇನ್ ವಾಷ್ ಆಗಿದ್ದ ನಿಮಿಷಾ

ಐದು ವರ್ಷಗಳ ಹಿಂದೆ, 2016ರಲ್ಲಿ ಕಾಸರಗೋಡಿನಿಂದ ನಾಪತ್ತೆಯಾಗಿದ್ದ 21 ಮಂದಿಯಲ್ಲಿ ನಿಮಿಷಾ ಫಾತಿಮಾ ಕೂಡ ಒಬ್ಬಳು. ಮೂಲತಃ ಹಿಂದು ಆಗಿದ್ದ ನಿಮಿಷಾ ಮತಾಂತರಗೊಂಡು ಫಾತಿಮಾ ಆಗಿದ್ದೇ ಒಂದು ಸೋಜಿಗದ ಕತೆ. ಹೌದು.. ತಿರುವನಂತಪುರದಲ್ಲಿ ಬ್ಯೂಟೀಷಿಯನ್ ಮಾಡುತ್ತಿದ್ದ ಹುಡುಗಿ ನಿಮಿಷಾ ಕಾಸರಗೋಡಿನಲ್ಲಿ ಡೆಂಟಿಸ್ಟ್ ಕಲಿಯುವುದಕ್ಕೆಂದು ಬಂದಿದ್ದಳು. ಅಲ್ಲಿ ಬೆಕ್ಸಿನ್ ಎಂಬಾತ ಪರಿಚಯವಾಗಿದ್ದು ನಾಲ್ಕೇ ದಿನದಲ್ಲಿ ಆತನ ಬಲೆಗೆ ಬಿದ್ದಿದ್ದಳು. ಮೂಲತಃ ಕ್ರಿಸ್ತಿಯನ್ ಆಗಿದ್ದ ಬೆಕ್ಸಿನ್ ಇಸ್ಲಾಮ್ ಬಗ್ಗೆ ಮರುಳಾಗಿದ್ದುದಲ್ಲದೆ, ತನ್ನವರನ್ನೂ ಇಸ್ಲಾಂಗೆ ಮತಾಂತರಿಸುತ್ತಿದ್ದ.

ಕೆಲವೇ ದಿನಗಳಲ್ಲಿ ನಿಮಿಷಾಳನ್ನು ಮದುವೆಯಾಗಿದ್ದ ಬೆನಿಕ್ಸ್, ಆನಂತರ ಇಬ್ಬರೂ ಮುಸ್ಲಿಂ ಆಗಿ ಮತಾಂತರಗೊಂಡಿದ್ದರು. ನಿಮಿಷಾ ತನ್ನ ಹೆಸರನ್ನು ಫಾತಿಮಾ ಎಂದು ಪರಿವರ್ತಿಸಿದ್ದರೆ, ಬೆನಿಕ್ಸ್ ತನ್ನ ಹೆಸರನ್ನು ಇಸಾ ಎಂದು ಮಾಡಿಕೊಂಡಿದ್ದ. ಕೆಲವು ಸಮಯದ ವರೆಗೆ ಎರ್ನಾಕುಲಂನಲ್ಲಿಯೇ ಇವರು ನೆಲೆಸಿದ್ದರು. ಏಳು ತಿಂಗಳ ಗರ್ಭಿಣಿಯಾಗಿದ್ದ ನಿಮಿಷಾ ಒಂದು ದಿನ ದಿಢೀರ್ ಆಗಿ ಶ್ರೀಲಂಕಾಕ್ಕೆ ಹೋಗುತ್ತಿರುವುದಾಗಿ ತನ್ನ ತಾಯಿ ಮೆಸೇಜ್ ಮಾಡಿದ್ದಳು. ಗಂಡ ಬೆನಿಕ್ಸ್ ಶ್ರೀಲಂಕಾದಲ್ಲಿ ಕಾರ್ಪೆಟ್ ಬಿಸಿನೆಸ್ ಮಾಡುತ್ತಾನೆ. ನಾವಿಬ್ಬರೂ ಅಲ್ಲಿಗೆ ಹೋಗುತ್ತಿದ್ದೇವೆ ಎಂದು ತಿಳಿಸಿದ್ದಳು. 2016ರ ಎಪ್ರಿಲ್ ನಲ್ಲಿ ಕೊನೆಯ ಬಾರಿಗೆ ತಾಯಿ ಬಿಂದು ಸಂಪತ್ ಮಗಳ ಮೆಸೇಜ್ ನೋಡಿದ್ದರು. ಹಾಗೆ ಹೋದವರು ಎಲ್ಲಿ ಹೋಗಿದ್ದಾರೆಂದು ತಿಳಿದಿರಲಿಲ್ಲ.

ಆನಂತರ ಕಾಸರಗೋಡು ಜಿಲ್ಲೆಯಿಂದ 21 ಮಂದಿ ಡಾ. ಅಬ್ದುಲ್ ರಶೀದ್ ಎಂಬಾತನ ನೇತೃತ್ವದಲ್ಲಿ ಸಿರಿಯಾಕ್ಕೆ ತೆರಳಿದ್ದಾರೆಂದು ಸುದ್ದಿಯಾಗಿತ್ತು. 21 ಮಂದಿಯಲ್ಲಿ ನಿಮಿಷಾ ಫಾತಿಮಾ ಮತ್ತು ಆಕೆಯ ಗಂಡ ಬೆನಿಕ್ಸ್ ಅಲಿಯಾಸ್ ಇಸಾ ಕೂಡ ಇದ್ದರು. ಆ ಗ್ರೂಪಿನಲ್ಲಿ ನಿಮಿಷಾಳ ಫೋಟೋ ನೋಡಿದ್ದ ತಾಯಿ ಬಿಂದುಗೆ ಶಾಕ್ ಆಗಿತ್ತು. ಆನಂತರ ಈ ಬಗ್ಗೆ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿ, ನಿಮಿಷಾ ಅಫ್ಘಾನ್ ಪ್ರಾಂತದಲ್ಲಿ ಇರುವುದನ್ನು ದೃಢಪಡಿಸಿದ್ದರು. ಎರಡು ವರ್ಷಗಳ ಬಳಿಕ ಬೆನಿಕ್ಸ್ ಅಫ್ಘನ್ ಯೋಧರ ಜೊತೆಗಿನ ಸಂಘರ್ಷದಲ್ಲಿ ಮೃತಪಟ್ಟಿದ್ದು ಮತ್ತು ಆತನ ಜೊತೆಗಿದ್ದವರು ಅಫ್ಘನ್ ಸೇನೆಗೆ ಶರಣಾಗಿದ್ದಲ್ಲದೆ, ಆ ಪೈಕಿ ನಿಮಿಷಾ ಕೂಡ ಇದ್ದಳು ಅನ್ನೋದನ್ನೂ ದೃಢಪಡಿಸಿದ್ದರು. 2018ರಲ್ಲಿ ಪೂರ್ವ ಅಫ್ಘಾನಿಸ್ತಾನದ ನಂಗರ್ ಹರ್ ಪ್ರಾಂತದಲ್ಲಿ ಅಫ್ಘನ್ ಯೋಧರ ಕೈಗೆ ಸಿಕ್ಕಿಬಿದ್ದು ಜೈಲು ಸೇರಿದ್ದ ಐಸಿಸ್ ಉಗ್ರರ ಜೊತೆ ನಿಮಿಷಾ ಕೂಡ ಇದ್ದುದನ್ನು ಅಲ್ಲಿ ಸ್ಪೈ ಏಜನ್ಸಿ ಖಾತ್ರಿ ಮಾಡಿತ್ತು.

ಕೇರಳದಿಂದ ತೆರಳಿದ್ದ ಏಳು ವಿಧವೆಯರಿದ್ದರು!

ವಿಚಿತ್ರ ಅಂದರೆ, ಅಫ್ಘನ್ ಜೈಲಿನಲ್ಲಿ ಕೇರಳದ ಏಳು ಮಂದಿ ವಿಧವೆ ಮಹಿಳೆಯರು ಇದ್ದರು ಅನ್ನೋ ಮಾಹಿತಿಗಳಿದ್ದವು. ಇವರೆಲ್ಲ ಮೂಲತಃ ಹಿಂದು ಮತ್ತು ಕ್ರಿಸ್ತಿಯನ್ ಆಗಿದ್ದು ಯಾವುದೋ ಕಾರಣಕ್ಕಾಗಿ ಮತಾಂತರಗೊಂಡು ಇಸ್ಲಾಂ ಸೇರಿದ್ದರು. ಆನಂತರ, ಐಸಿಸ್ ಉಗ್ರವಾದಕ್ಕೆ ಶರಣಾಗಿ ಸಿರಿಯಾಕ್ಕೆ ಹೋಗಿದ್ದರು. ಇದರಲ್ಲಿ ನಿಮಿಷಾ ಫಾತಿಮಾಗೆ ಹತ್ತಿರದ ಲಿಂಕ್ ಹೊಂದಿದ್ದ ಒಬ್ಬಾಕೆಯೇ ಮೆರಿನ್ ಜೇಕಬ್ ಪಲ್ಲತ್ ಅಲಿಯಾಸ್ ಮರಿಯಂ..

ಮರಿಯಂ ಆಗಿ ಬದಲಾಗಿದ್ದ ಮೆರಿನ್ ಜೇಕಬ್

ಪಾಲಕ್ಕಾಡ್ ಜಿಲ್ಲೆಯ ಮುರಿಕ್ಕಾವು ಗ್ರಾಮದ ಕಲವಾರ ಪರಂಬಿಲ್ ನಿವಾಸಿಯಾಗಿದ್ದ ಮೆರಿನ್ ಜೇಕಬ್ ಪಲ್ಲತ್ ಐಸಿಸ್ ನೆಟ್ವರ್ಕ್ ಸೇರಿದ್ದೂ ಅಷ್ಟೇ ವಿಸ್ಮಯಕಾರಿ ಕತೆ. 22 ವರ್ಷದವಳಾಗಿದ್ದ ಮೆರಿನ್ ಜೇಕಬ್, ಮುಂಬೈನಲ್ಲಿ ಐಬಿಎಂ ಫ್ಯಾಕಲ್ಟಿ ಆಗಿದ್ದಳು. ತನ್ನ ಹೈಸ್ಕೂಲ್ ಸಹಪಾಠಿಯಾಗಿದ್ದ ಮತ್ತು ಸುದೀರ್ಘ ಕಾಲದ ಗೆಳೆಯನಾಗಿದ್ದ ಬೆಸ್ಟಿನ್ ವಿನ್ಸೆಂಟ್ ಅನ್ನು ಪ್ರೀತಿಸಿ ಮದುವೆಯಾಗಿದ್ದಳು. ಬೆಸ್ಟಿನ್ ಕೂಡ ಮುಂಬೈನಲ್ಲಿಯೇ ಉದ್ಯೋಗದಲ್ಲಿದ್ದುದರಿಂದ ಅಲ್ಲಿಯೇ ಮದುವೆ ನಡೆದಿತ್ತು. ಆದರೆ, ಬೆಸ್ಟಿನ್ ಮುಂಬೈನಲ್ಲಿರುವಾಗಲೇ ಇಸ್ಲಾಂ ಪ್ರವಚನಕಾರ ಝಾಕಿರ್ ನಾಯ್ಕ್ ಭಾಷಣಗಳಿಂದ ಪ್ರಭಾವಿತನಾಗಿದ್ದ. ಮುಂಬೈನಲ್ಲಿ ಇಸ್ಲಾಮಿಕ್ ರೀಸರ್ಚ್ ಫೌಂಡೇಶನ್ ಸಂಸ್ಥೆಯ ಮ್ಯಾನೇಜರ್ ಆಗಿದ್ದ ಆರ್ಷಿ ಖುರೇಷಿಯ ಸಂಪರ್ಕದಲ್ಲಿ ಇಸ್ಲಾಮ್ ಬಗ್ಗೆ ಮೋಹಗೊಂಡು ಬಳಿಕ ಮುಸ್ಲಿಮ್ ಆಗಿ ಮತಾಂತರಗೊಂಡಿದ್ದ. ಅಷ್ಟೇ ಅಲ್ಲಾ ತನ್ನ ಹೆಸರನ್ನು ಯಾಹ್ಯಾ ಎಂದು ಬದಲಿಸಿದ್ದ. ಇದೇ ವೇಳೆ, ತನ್ನ ಸೋದರ ಬೆಕ್ಸಿನನ್ನೂ ಇಸ್ಲಾಂ ಮತಕ್ಕೆ ಮತಾಂತರ ಆಗುವಂತೆ ಪ್ರೇರಣೆ ಕೊಟ್ಟಿದ್ದೂ ಇದೇ ಬೆಸ್ಟಿನ್ ವಿನ್ಸೆಂಟ್.

ಬೆಸ್ಸಿನ್ ವಿನ್ಸೆಂಟ್ ಯಾಹ್ಯಾ ಆಗಿದ್ದ

ಅಧಿಕೃತವಾಗಿ ಯಾಹ್ಯಾ ಆಗಿದ್ದ ಬೆಸ್ಟಿನ್ ವಿನ್ಸೆಂಟ್ ಆಬಳಿಕ ಪತ್ನಿ ಮೆರಿನ್ ಜೇಕಬಳನ್ನೂ ಮತಾಂತರಿಸಿ, ಆಕೆಯ ಹೆಸರನ್ನು ಮರಿಯಂ ಎಂದು ಮಾಡಿಕೊಂಡಿದ್ದ. ಅದೇ ಸಂದರ್ಭದಲ್ಲಿ ಬೆಸ್ಟಿನ್ ತಮ್ಮ ಬೆಕ್ಸಿನ್ ಕಾಸರಗೋಡಿನಲ್ಲಿದ್ದ ವೇಳೆ ನಿಮಿಷಾಳ ಸಂಪರ್ಕಕ್ಕೆ ಬಂದು ಆಕೆಯನ್ನೂ ಮತಾಂತರಿಸಿ, ಮದುವೆಯಾಗಿದ್ದಲ್ಲದೆ ಹೊಸ ಜೀವನ ಆರಂಭಿಸಿದ್ದರು. ಕೊನೆಗೆ, ಕಾಸರಗೋಡಿನಿಂದ ನಾಪತ್ತೆಯಾಗಿ ಐಸಿಸ್ ಸೇರಿದ್ದ 21 ಮಂದಿಯಲ್ಲಿ ಈ ಅಣ್ಣ- ತಮ್ಮಂದಿರ ದಂಪತಿಯೂ ಇತ್ತು. ಯಾಹ್ಯಾ- ಮರಿಯಂ ಮತ್ತು ಇಸಾ ಬೆಕ್ಸಿನ್ – ನಿಮಿಷಾ ಫಾತಿಮಾ. ಈ ನಾಲ್ಕೂ ಮಂದಿಯೂ ಮತಾಂತರಗೊಂಡು ಐಸಿಸ್ ಸೇರಿದ್ದೇ ನಿಜಕ್ಕೂ ವಿಸ್ಮಯಕಾರಿ ಕತೆ.

ವಿಷ್ಯ ಇಷ್ಟಕ್ಕೇ ಮುಗಿಯಲ್ಲ. 2018ರಲ್ಲಿ ಅಫ್ಘಾನಿಸ್ತಾನದಲ್ಲಿದ್ದ ವೇಳೆ ಬೆಸ್ಟಿನ್ ಯಾನೆ ಯಾಹ್ಯಾ ಅಫ್ಘನ್ ಯೋಧರ ಜೊತೆಗಿನ ಸಂಘರ್ಷದಲ್ಲಿ ಸಾವನ್ನಪ್ಪುತ್ತಾನೆ. ಆನಂತರ, ಒಬ್ಬಂಟಿಯಾಗಿದ್ದ ಮೆರಿನ್ ಜೇಕಬ್ ಅಲ್ಲಿ ಇತರ ಪುರುಷರ ಸಾಥ್ ಇಲ್ಲದೆ ಹೊರಗೆ ಬರಲಾಗದ ಸ್ಥಿತಿ ಇರುವುದರಿಂದ ಅಲ್ಲಿಯೇ ಇನ್ನೊಬ್ಬ ಐಸಿಸ್ ಸದಸ್ಯನನ್ನು ಮದುವೆಯಾಗುತ್ತಾಳೆ. ಅದೇ ವ್ಯಕ್ತಿ ಕಾಸರಗೋಡು ಮೂಲದ ಅಬ್ದುಲ್ ರಶೀದ್. ಇದಕ್ಕೂ ಮೊದಲೇ ಸೋನಿಯಾ ಸೆಬಾಸ್ಟಿಯನ್ ಎಂಬ ಕ್ರಿಸ್ತಿಯನ್ ಮಹಿಳೆಯನ್ನು ಮತಾಂತರಿಸಿ ಮದುವೆಯಾಗಿದ್ದ ಅಬ್ದುಲ್ ರಶೀದ್, ಮರಿಯಂಳನ್ನು ಎರಡನೇ ಪತ್ನಿಯಾಗಿ ಸ್ವೀಕರಿಸಿದ್ದ. ಸೋನಿಯಾ ಸೆಬಾಸ್ಟಿಯನ್, ಅಬ್ದುಲ್  ರಶೀದನ್ನು ಮದುವೆಯಾದ ಬಳಿಕ ಆಯೆಷಾ ಆಗಿ ಬದಲಾಗಿದ್ದಳು.

ಆದರೆ, 2019ರಲ್ಲಿ ನಂಗರ್ ಹರ್ ಪ್ರಾಂತದಲ್ಲಿ ಅಫ್ಘನ್ ಯೋಧರ ಜೊತೆಗಿನ ಸಂಘರ್ಷದಲ್ಲಿ ಅಬ್ದುಲ್ ರಶೀದ್ ಕೂಡ ಸಾವು ಕಂಡಿದ್ದಾನೆ ಎಂದು ಎನ್ಐಎ ಅಧಿಕಾರಿಗಳು ಚಾರ್ಜ್ ಶೀಟ್ ನಲ್ಲಿ ಹೇಳಿದ್ದರು. ಕೇರಳ ವಿಭಾಗದ ಎನ್ಐಎ ಅಧಿಕಾರಿಗಳು ಸಲ್ಲಿಕೆ ಮಾಡಿರುವ ಚಾರ್ಜ್ ಶೀಟ್ ನಲ್ಲಿ ಮೇಲಿನ ಎಲ್ಲ ವಿಚಾರಗಳೂ ದಾಖಲಾಗಿವೆ. ಅಬ್ದುಲ್ ರಶೀದ್ ಕಾಸರಗೋಡಿನಲ್ಲಿದ್ದಾಗ ಯುವಕರನ್ನು ಐಸಿಸ್ ನೆಟ್ವರ್ಕ್ ಸೇರುವಂತೆ ಪ್ರೇರಣೆ ನೀಡುತ್ತಿದ್ದ. ಅಲ್ಲಿನ ಹಿಂಸಾತ್ಮಕ ವಿಡಿಯೋಗಳನ್ನು ತೋರಿಸಿ ಪ್ರಚೋದನೆ ಮಾಡುತ್ತಿದ್ದ.. ಜಿಹಾದ್ ಮತ್ತು ಐಸಿಸ್ ತತ್ವಗಳ ಬಗ್ಗೆ ಯುವಕರ ತಲೆ ತುಂಬುತ್ತಿದ್ದ ಎಂದು ಎನ್ಐಎ ಅಧಿಕಾರಿಗಳು ದಾಖಲಿಸಿದ್ದಾರೆ.

ಮನೆಗೆ ಹೋಗಬೇಕು ಎಂದಿದ್ದ ಮರಿಯಂ

ಆನಂತರ, 2019ರಿಂದ ಈವರೆಗೂ ಕೇರಳದ ಏಳು ಮಂದಿ ವಿಧವೆ ಮಹಿಳೆಯರು ಐಸಿಸ್ ಉಗ್ರ ಕೈದಿಗಳಾಗಿ ಅಫ್ಘನ್ ಜೈಲಿನಲ್ಲಿದ್ದರು. ಒಂದು ವರ್ಷದ ಬಳಿಕ 2020ರಲ್ಲಿ ಅಂತಾರಾಷ್ಟ್ರೀಯ ಜರ್ನಲ್ ‘ದಿ ನೇಶನಲ್’’ ಎಂಬ ಮ್ಯಾಗಜೀನಲ್ಲಿ ಮರಿಯಂ ಸಂದರ್ಶನ ಬಂದಿತ್ತು. ನನಗೆ ಹಿಂತಿರುಗಿ ಮನೆಗೆ ಹೋಗಬೇಕು ಅನಿಸುತ್ತಿದೆ. ನಾನು ಯಾರಿಗಾಗಿ ಇಲ್ಲಿರಬೇಕು. ನಮ್ಮವರು ಅಂತ ಇದ್ದವರೆಲ್ಲ ಇಲ್ಲವಾಗಿದ್ದಾರೆ. ನನಗೆ ಹಳೆಯ ನೆನಪುಗಳು ಮರುಕಳಿಸುತ್ತಿವೆ. ನಾವು ಏಳು ಮಹಿಳೆಯರ ಜೊತೆಗೆ 15 ಮಕ್ಕಳಿದ್ದಾರೆ. ಅವರ ಭವಿಷ್ಯದ ಬಗ್ಗೆ ಮರುಕ ಉಂಟಾಗುತ್ತಿದೆ. ನಾವು ನಮ್ಮ ಕುಟುಂಬದ ಜೊತೆ ಇಲ್ಲಿ ಬಂದಿದ್ದೆವು. ಆದರೆ, ಅವರು ಯಾರೂ ಈಗ ಬದುಕುಳಿದಿಲ್ಲ. ನಾವು ಯಾಕಾಗಿ ಇಲ್ಲಿ ಉಳಿಯಬೇಕು ಎಂದು ಹೇಳಿಕೊಂಡಿದ್ದಳು.

ಆದರೆ, ಆಕೆಯ ಮಾತುಗಳನ್ನು ಕೇಳೋರು ಯಾರಿದ್ದಾರೆ. ಐಸಿಸ್ ಉಗ್ರವಾದಿಗಳಿಗೆ ಬೆಂಬಲಿಸಿದ್ದಕ್ಕಾಗಿ ಅಫ್ಘನ್ ಸರಕಾರ ಅವರನ್ನು ಜೈಲಿಗೆ ತಳ್ಳಿತ್ತು. ಆನಂತರ ಭಾರತ ಮೂಲದ ಅಧಿಕಾರಿಗಳು ಕೂಡ ಜೈಲಿನಲ್ಲಿದ್ದ ಇವರನ್ನು ಭೇಟಿಯಾಗಿದ್ದರು ಎನ್ನಲಾಗಿತ್ತು. ಆದರೆ, ಯಾರು ಕೂಡ ಆಕೆಗೆ ಸಪೋರ್ಟ್ ಮಾಡಿರಲಿಲ್ಲ ಎಂದು ‘ದಿ ನೇಶನಲ್ ’ 2020ರ ಫೆಬ್ರವರಿಯಲ್ಲಿ ಬರೆದುಕೊಂಡಿತ್ತು. ಅಷ್ಟೇ ಅಲ್ಲ, ನನಗೀಗ ಪೂರ್ತಿ ಬ್ಲಾಂಕ್ ಆಗಿದೆ. ನನ್ನ ಭವಿಷ್ಯ ಏನಾಗುತ್ತೆ ಎಂದು ಹೇಳಕ್ಕಾಗಲ್ಲ ಎಂದು ಕೈಯಲ್ಲಿ ಮಗುವನ್ನು ಹಿಡಿದು ಮರಿಯಂ ಬಿಕ್ಕಳಿಸಿದ್ದಳು.

ಅತ್ತ ಅಫ್ಘನ್ ಜೈಲಿನಲ್ಲಿದ್ದ ಅಷ್ಟೂ ಮಂದಿ ಐಸಿಸ್ ಕೈದಿ ಮಹಿಳೆಯರು ಸೇರಿದಂತೆ ಸಾವಿರಾರು ಮಂದಿ ಬಿಡುಗಡೆಯಾಗಿದ್ದಾರೆ. ಇತ್ತ ಕೇರಳದಲ್ಲಿರುವ ತಾಯಂದಿರು ತಮ್ಮ ಕಂದಮ್ಮಗಳು ಪುಟ್ಟ ಮೊಮ್ಮಕ್ಕಳ ಜೊತೆ ಮತ್ತೆ ಬರಬಹುದೇ ಎನ್ನುವ ನಿರೀಕ್ಷೆಯಲ್ಲಿದ್ದಾರೆ.

Mariyam, formerly Merrin Jacob Pallath, is one of a group of young people who left south India for Afghanistan in 2016. Mariyam and seven other Indian women who took the same path are being held by Afghanistan’s spy agency, the National Directorate of Security, in the far corner of a prison in Kabul. They were arrested after Afghan forces retook the eastern province of Nangarhar from ISIS in November 2019.Sitting in a dimly lit cell, Mariyam described her journey from growing up as a Catholic in the south Indian state of Kerala to languishing in an Afghan prison as a member of the ISIS affiliate known as Islamic State Khorasan Province.