ಸೌದಿ ಏರ್​ಪೋರ್ಟ್​ ಮೇಲೆ ಡ್ರೋನ್ ದಾಳಿ; 8 ಜನರಿಗೆ ಗಾಯ, ವಿಮಾನಗಳಿಗೆ ಹಾನಿ

31-08-21 04:13 pm       Headline Karnataka News Network   ದೇಶ - ವಿದೇಶ

ಸೌದಿ ಅರೇಬಿಯಾದ ಅಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಡ್ರೋನ್ ದಾಳಿ ನಡೆಸಲಾಗಿದೆ.

ಸೌದಿ ಅರೇಬಿಯಾದ ಅಬಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮತ್ತೊಂದು ಡ್ರೋನ್ ದಾಳಿ ನಡೆಸಲಾಗಿದೆ. ಈ ದುರ್ಘಟನೆಯಲ್ಲಿ 8 ಜನರಿಗೆ ಗಂಭೀರ ಗಾಯಗಳಾಗಿದ್ದು, ಏರ್​ಪೋರ್ಟ್​ನಲ್ಲಿದ್ದ ನಾಗರಿಕ ವಿಮಾನಕ್ಕೆ ಹಾನಿಯಾಗಿದೆ. 

ಅಬಾ ವಿಮಾನ ನಿಲ್ದಾಣದಲ್ಲಿ ಕಳೆದ 24 ಗಂಟೆಗಳಲ್ಲಿ ನಡೆಯುತ್ತಿರುವ ಎರಡನೇ ಡ್ರೋನ್ ದಾಳಿ ಇದಾಗಿದ್ದು, ಸೌದಿ ಅರೇಬಿಯಾದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಈ ಡ್ರೋನ್ ದಾಳಿಯ ಹಿಂದೆ ಯಾರ ಕೈವಾಡವಿದೆ ಎಂಬ ಬಗ್ಗೆ ಇನ್ನೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಯಾವ ಸಂಘಟನೆಯೂ ಬಹಿರಂಗವಾಗಿ ಇದರ ಜವಾಬ್ದಾರಿ ಹೊರದ ಕಾರಣ ಈ ಕುರಿತು ಇನ್ನಷ್ಟೇ ತನಿಖೆಯಾಗಬೇಕಾಗಿದೆ. ಈ ದುರಂತದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸದ್ಯಕ್ಕೆ ಗಾಯಗೊಂಡಿರುವವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಇದಕ್ಕೂ ಮೊದಲು ನೈಋತ್ಯ ಯೆಮನ್​ನಲ್ಲಿ ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆಗಳ ಮೇಲೆ ಡ್ರೋನ್ ದಾಳಿ ನಡೆಸಲಾಗಿತ್ತು. ಈ ದುರಂತದಲ್ಲಿ ಸುಮಾರು 30 ಸೈನಿಕರು ಸಾವನ್ನಪ್ಪಿ, 60ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಸೌದಿ ಅರೇಬಿಯಾ ನೇತೃತ್ವದ ಮೈತ್ರಿ ಪಡೆ ಹಾಗೂ ಹೌಥಿಗಳ ನಡುವಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಡ್ರೋನ್ ದಾಳಿ ನಡೆಸಲಾಗಿತ್ತು.

2015ರಿಂದ ಯೆಮನ್​ನ ಹೌಥಿ ಬಂಡಾಯಗಾರರು ಸೌದಿ ನೇತೃತ್ವದ ಸೇನಾ ಪಡೆಯ ವಿರುದ್ಧ ಸಂಘರ್ಷ ನಡೆಸುತ್ತಿದೆ. ಮುಖ್ಯವಾಗಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗುತ್ತಿದ್ದು, ಇಂದು ಅಬಾ ವಿಮಾನ ನಿಲ್ದಾಣದಲ್ಲಿ ಡ್ರೋನ್ ದಾಳಿ ನಡೆದಿದೆ.

A drone attack on Saudi Arabia's Abha airport wounded eight people on Tuesday, said the Saudi-led coalition battling Huthi rebels in neighbouring Yemen.