ಕಾಶ್ಮೀರದಲ್ಲಿ ತಾಲಿಬಾನ್ ಪರ ಸಂಭ್ರಮ ಬೆನ್ನಲ್ಲೇ 60 ಯುವಕರು ನಾಪತ್ತೆ ! ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು ಹೆಣೆದ ಉಗ್ರರು !

31-08-21 04:48 pm       Headline Karnataka News Network   ದೇಶ - ವಿದೇಶ

ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಚಿಗಿತುಕೊಂಡಿರುವುದನ್ನು ಗುಪ್ತಚರ ಪಡೆಗಳು ದೃಢಪಡಿಸಿದ್ದು ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎನ್ನುವ ಮುನ್ನೆಚ್ಚರಿಕೆಯನ್ನು ಸರಕಾರಕ್ಕೆ ನೀಡಿದೆ.‌

ಶ್ರೀನಗರ, ಆಗಸ್ಟ್ 31: ಅತ್ತ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಿಡಿತ ಸಾಧಿಸುತ್ತಿದ್ದಂತೆ ಕಾಶ್ಮೀರದಲ್ಲಿ ಉಗ್ರರು ಮತ್ತೆ ಮೈಕೊಡವಿದ್ದಾರೆ.‌ ತಾಲಿಬಾನ್ ಜಯವನ್ನು ತಮ್ಮದೇ ಜಯವೆಂದು ಕಾಶ್ಮೀರಿ ಯುವಕರು ಸಂಭ್ರಮಿಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ.‌ ಇದೇ ವೇಳೆ, ಕಣಿವೆ ರಾಜ್ಯದಲ್ಲಿ ಉಗ್ರರು ಮತ್ತೆ ಚಿಗಿತುಕೊಂಡಿರುವುದನ್ನು ಗುಪ್ತಚರ ಪಡೆಗಳು ದೃಢಪಡಿಸಿದ್ದು ಉಗ್ರರು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎನ್ನುವ ಮುನ್ನೆಚ್ಚರಿಕೆಯನ್ನು ಸರಕಾರಕ್ಕೆ ನೀಡಿದೆ.‌

ಕಳೆದ 15 ದಿನಗಳಲ್ಲಿ ಕಣಿವೆ ರಾಜ್ಯದಲ್ಲಿ ಉಗ್ರ ಚಟುವಟಿಕೆಗಳು ತೀವ್ರಗೊಂಡಿದ್ದು, ತಮಗೆ ಲಭಿಸಿರುವ ಮಾಹಿತಿಯಂತೆ ಉಗ್ರರು ಕಾಶ್ಮೀರ ಕಣಿವೆಯಲ್ಲಿ ಏನಾದರೂ ದೊಡ್ಡ ಕಾರ್ಯಕ್ಕೆ ಯೋಜನೆ ಹಾಕಿದ್ದಾರೆ ಎಂದು ಗುಪ್ತಚರ ಪಡೆ ಮಾಹಿತಿ ನೀಡಿದೆ. ಈ ಬಗ್ಗೆ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಮಾಹಿತಿ ನೀಡಿದ್ದು, ಭಯೋತ್ಪಾದಕರು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಪ್ರದೇಶದಲ್ಲಿ ಸಕ್ರಿಯವಾಗಿದ್ದಾರೆ. ಕಳೆದ 15 ದಿನಗಳಲ್ಲಿ ಗಡಿ ಪ್ರದೇಶದಲ್ಲಿ ಭಯೋತ್ಪಾದಕ ಚಟುವಟಿಕೆ ತೀವ್ರಗೊಂಡಿದ್ದು ಶಂಕಿತರ ಬಗ್ಗೆ ಕೆಲವು ದಿನಗಳಲ್ಲಿ 10 ಬಾರಿ ಎಚ್ಚರಿಕೆ ನೀಡಲಾಗಿದೆ. ಯಾವುದೇ ರೀತಿಯ ದಾಳಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಐಇಡಿ ಬ್ಲಾಸ್ಟ್ ಬಗ್ಗೆ ಎಚ್ಚರಿಕೆ ವಹಿಸುವಂತೆ ಎಲ್ಲ ಭದ್ರತಾ ಏಜೆನ್ಸಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಈಗಾಗಲೇ ಕಣಿವೆ ಭಾಗದಲ್ಲಿ ಲಷ್ಕರ್-ಎ-ತೊಯ್ಬಾ, ಜೈಶ್-ಎ-ಮೊಹಮ್ಮದ್, ಹಿಜ್ಬುಲ್ ಮುಜಾಹಿದ್ದೀನ್ ಮತ್ತು ಇತರೆ ಭಯೋತ್ಪಾದಕ ಸಂಘಟನೆಗಳ ಚಲನವಲನಗಳ ಮೇಲೆ ಗುಪ್ತಚರ ಸಂಸ್ಥೆಗಳು ತೀವ್ರ ನಿಗಾ ಇರಿಸಿವೆ.  ಅಲ್ಲದೆ ಸಂಭವನೀಯ ಗ್ರೆನೇಡ್ ದಾಳಿಗಳು ಅಥವಾ ಅದಕ್ಕಿಂತಲೂ ದೊಡ್ಡದಾದ ದಾಳಿ, ಯಾವುದೇ ಸಾರ್ವಜನಿಕ ಸ್ಥಳಗಳ ಮೇಲೆ ದಾಳಿಯಾಗುವ ಕುರಿತು ಭದ್ರತಾ ಏಜೆನ್ಸಿಗಳಿಗೆ ಎಚ್ಚರಿಕೆ ನೀಡಲಾಗಿದೆ.

ಕಳೆದ 15 ದಿನಗಳಲ್ಲಿ ಜಮ್ಮು ಕಾಶ್ಮೀರದಲ್ಲಿ 60 ಮಂದಿ ಯುವಕರು ನಾಪತ್ತೆಯಾಗಿದ್ದಾರೆ ಎನ್ನುವ ಮಾಹಿತಿಗಳಿವೆ.  ತಾಲಿಬಾನ್ ಬೆಳವಣಿಗೆ ಹಿನ್ನೆಲೆಯಲ್ಲಿ ಅಲ್ಲಿಂದ ಬರುತ್ತಿರುವ ಸಂದೇಶಗಳಿಗೆ ಯುವಕರು ಮಾರು ಹೋಗುತ್ತಿದ್ದಾರೆ. ಅಲ್ಲದೆ, ಕೆಲವು ಸಂಘಟನೆಗಳು ಅದೇ ರೀತಿಯ ಹೋರಾಟಕ್ಕೆ ಕರೆ ಕೊಡುತ್ತಿರುವುದು ಮುಗ್ಧ ಯುವಕರನ್ನು ಉಗ್ರವಾದದತ್ತ ಸೆಳೆಯುತ್ತಿದೆ. ಇದೇ ಹಿನ್ನೆಲೆಯಲ್ಲಿ 60 ಮಂದಿ ಯುವಕರು ನಾಪತ್ತೆಯಾಗಿದ್ದಾರೆ ಎನ್ನಲಾಗುತ್ತಿದ್ದು ಗುಪ್ತಚರ ಏಜೆನ್ಸಿಗಳಿಗೆ ತಲೆನೋವು ಸೃಷ್ಟಿಸಿದೆ.

About 100 members of banned terror outfit Jaish-e-Mohammed (JeM), who were released from Afghan prisons by the Taliban, have joined back and the outfit is planning to carry out fresh attacks in India, particularly in Jammu and Kashmir, according to information gathered by security agencies.