ಸ್ವದೇಶಿ ನಿರ್ಮಿತ ಎಚ್ ಎಸ್ ಟಿಡಿವಿ ಹಾರಾಟ ಪರೀಕ್ಷೆ ಯಶಸ್ವಿ

07-09-20 06:06 pm       Headline Karnataka News Network   ದೇಶ - ವಿದೇಶ

ಭವಿಷ್ಯದ ಯುದ್ದಗಳಲ್ಲಿ ಪ್ರಮುಖ ಪಾತ್ರ ವಹಿಸುವ ಹೈಪರ್​ಸೋನಿಕ್ ಮಿಸೈಲ್​ಗಳ ತಯಾರಿಕೆ ನಿಟ್ಟಿನಲ್ಲಿ ಭಾರತ ಮುಂದಡಿ ಇಟ್ಟಿದೆ.

ನವದೆಹಲಿ, ಸೆಪ್ಟೆಂಬರ್ 7: ದೇಶೀಯ ರಕ್ಷಣಾ ತಂತ್ರಜ್ಞಾನಗಳಲ್ಲಿ ದೈತ್ಯ ಎಂದು ಕರೆಯಬಹುದಾದ ಮತ್ತು ಆತ್ಮನಿರ್ಭರ ಭಾರತದತ್ತ ಮಹತ್ವದ ಮೈಲಿಗಲ್ಲು ಎಂದು ಗುರುತಿಸಬಹುದಾದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ)ಹಾರಾಟ ಪರೀಕ್ಷೆ ಯಶಸ್ವಿಯಾಗಿದೆ. 

ಒಡಿಶಾದ ಕರಾವಳಿ ತೀರ ಪ್ರದೇಶದಲ್ಲಿರುವ ಡಾ. ಎಪಿಜೆ ಅಬ್ದುಲ್ ಕಲಾಂ ಕ್ಷಿಪಣಿ ಉಡಾವಣಾ ಕೇಂದ್ರದಿಂದ ಇಂದು ಬೆಳಗ್ಗೆ 11ಗಂಟೆ ಸುಮಾರಿನಲ್ಲಿ ಎಚ್ ಎಸ್ ಟಿಡಿವಿ ಯಶಸ್ವಿಯಾಗಿ ಹಾರಾಟ ನಡೆಸಿದೆ. ಈ ವಾಹಕ 6 ಮಾಕ್ ವೇಗದಲ್ಲಿ ಕೇವಲ 20 ಸೆಕೆಂಡ್ ಗಳಲ್ಲಿ 32.5 ಎತ್ತರಕ್ಕೆ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ.

ಮೊದಲಿಗೆ ಹೈಪರ್​ಸೋನಿಕ್ ವಾಹನವನ್ನು ಮಿಸೈಲ್ ಬೂಸ್ಟರ್ ಮೂಲಕ 30 ಕಿಮೀ ಎತ್ತರಕ್ಕೆ ಉಡಾಯಿಸಲಾಯಿತು. ಅಷ್ಟು ಎತ್ತರ ತಲುಪಿದ ಬಳಿಕ ವಾಹನವು ಬೂಸ್ಟರ್​ನಿಂದ ಬೇರ್ಪಟ್ಟಿತು. ಆ ಬಳಿಕ ವಾಹನದ ಒಳಕ್ಕೆ ಗಾಳಿಯನ್ನು ಸೆಳೆಯಲಾಯಿತು. ಆಗ ಸ್ಕ್ರಾಮ್​ಜೆಟ್ ಎಂಜಿನ್ ಚಾಲನೆಗೊಂಡು 20 ಸೆಕೆಂಡುಗಳ ಕಾಲ ವಾಹನ ಮಾಚ್6 ವೇಗದಲ್ಲಿ ಸಾಗಿತು. ಬರೋಬ್ಬರಿ 2,500 ಡಿಗ್ರಿ ಸೆಲ್ಷಿಯಸ್​ನಷ್ಟು ಶಾಖ ಹಾಗೂ ಗಾಳಿಯ ವೇಗವನ್ನು ಈ ವಾಹನ ತಡೆದುಕೊಂಡು ಯಶಸ್ವಿಯಾಗಿ ಸಾಗಿತು.

ಡಿಆರ್​ಡಿಒ ಮುಖ್ಯಸ್ಥ ಸತೀಶ್ ರೆಡ್ಡಿ ನೇತೃತ್ವದ ಹೈಪರ್​ಸಾನಿಕ್ ಮಿಸೈಲ್ ತಂಡ ಇದನ್ನು ದೇಶೀಯವಾಗಿಯೇ ಅಭಿವೃದ್ಧಿಪಡಿಸಿದೆ. ಭವಿಷ್ಯದ ಕ್ಷಿಪಣಿಗಳಿಗೆ ಈ ಪರೀಕ್ಷೆ ಮುನ್ನುಡಿ ಬರೆದಿದೆ. ಮುಂದಿನ 5 ವರ್ಷದಲ್ಲಿ ಸ್ಕ್ರಾಮ್​ಜೆಟ್ ಎಂಜಿನ್ ಹೊಂದಿರುವ ಹೈಪರ್ ಸೋನಿ ಮಿಸೈಲ್​ಗಳನ್ನ ಅಭಿವೃದ್ಧಿಪಡಿಸಲು ಸಾಧ್ಯವಾಗುತ್ತದೆ. ಹೈಪರ್​ಸೋನಿಕ್ ಎಂದರೆ ಶಬ್ದದ ವೇಗಕ್ಕೆ ಹಲವು ಪಟ್ಟು ವೇಗ ಎಂದರ್ಥ. ಡಿಆರ್​ಡಿಒ ಮೂಲಗಳ ಪ್ರಕಾರ, ಮಾಚೋ-6 ವೇಗದಲ್ಲಿ, ಅಂದರೆ ಸೆಕೆಂಡ್​ಗೆ 2 ಕಿಮೀಯಷ್ಟು ವೇಗದಲ್ಲಿ ಈ ಭವಿಷ್ಯದ ಕ್ಷಿಪಣಿಗಳು ಹೋಗಬಲ್ಲುವು.

ಹೆಚ್​ಎಸ್​ಟಿಡಿವಿ ವಾಹನದ ಪ್ರಯೋಗ ಯಶಸ್ವಿಯಾಗುತ್ತಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಡಿಆರ್​ಡಿಒಗೆ ಅಭಿನಂದನೆ ಸಲ್ಲಿಸಿದರು. ಇದು ಸ್ವಾವಲಂಬಿ ಭಾರತದ ಆಶಯವನ್ನು ಈಡೇರಿಸುವತ್ತ ಒಂದು ಹೆಜ್ಜೆಯಾಗಿದೆ ಎಂದು ಬಣ್ಣಿಸಿದರು.

ದೇಶೀಯವಾಗಿ ಅಭಿವೃದ್ಧಿ ಹೊಂದಿದ ಹೈಪರ್ಸಾನಿಕ್ ಟೆಕ್ನಾಲಜಿ ಡೆಮೋನ್‌ಸ್ಟ್ರೇಟರ್ ವೆಹಿಕಲ್ (ಎಚ್‌ಎಸ್‌ಟಿಡಿವಿ) ಯನ್ನು  ಯಶಸ್ವಿಯಾಗಿ ಹಾರಾಟ ಪರೀಕ್ಷಿಸಿದ್ದಕ್ಕಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಯನ್ನು ಅಭಿನಂದಿಸಿದ್ದಾರೆ.

Join our WhatsApp group for latest news updates