ಯೋಗಿ ಸರಕಾರದ ವಿರುದ್ಧ ಅವಹೇಳನಕಾರಿ ಹೇಳಿಕೆ ; ಮಾಜಿ ರಾಜ್ಯಪಾಲರ ವಿರುದ್ಧ ದೇಶದ್ರೋಹ ಪ್ರಕರಣ

06-09-21 02:36 pm       Headline Karnataka News Network   ದೇಶ - ವಿದೇಶ

ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಲಕ್ನೋ, ಸೆ.6: ಯೋಗಿ ಆದಿತ್ಯನಾಥ್ ಸರಕಾರದ ವಿರುದ್ಧ ಅವಹೇಳಕಾರಿ ಹೇಳಿಕೆ ನೀಡಿದ ಆರೋಪದಲ್ಲಿ ಉತ್ತರ ಪ್ರದೇಶದ ಮಾಜಿ ರಾಜ್ಯಪಾಲ ಅಜೀಜ್ ಖುರೇಷಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ನಾಯಕ ಆಕಾಶ್ ಕುಮಾರ್ ಸಕ್ಸೇನಾ ನೀಡಿರುವ ದೂರಿನ ಪ್ರಕಾರ ರಾಮಪುರ ಜಿಲ್ಲೆಯ ಸಿವಿಲ್ ಲೈನ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯೋಗಿ ಆದಿತ್ಯನಾಥ್ ಸರ್ಕಾರ ಜನರ ರಕ್ತ ಹೀರುವ ಸರಕಾರ ಎಂದು ಅಜೀಜ್ ಖುರೇಷಿ ಹೇಳಿಕೆ ನೀಡಿದ್ದಾರೆ ಎಂದು ಸಕ್ಸೇನಾ ದೂರಿನಲ್ಲಿ ತಿಳಿಸಿದ್ದಾರೆ.

ಸಮಾಜವಾದಿ ಪಕ್ಷದ ನಾಯಕ ಅಜಂ ಖಾನ್ ಮನೆಗೆ ಭೇಟಿ ನೀಡಿದ ವೇಳೆ ಅಜೀಜ್ ಖುರೇಷಿ ಈ ಹೇಳಿಕೆ ನೀಡಿದ್ದಾರೆಂದು ಸಕ್ಸೇನಾ ತಿಳಿಸಿದ್ದಾರೆ. ಖುರೇಷಿ ಹೇಳಿಕೆಯಿಂದ ಎರಡು ಸಮುದಾಯಗಳ ನಡುವೆ ಸಂಘರ್ಷ ಸೃಷ್ಟಿಯಾಗಲಿದೆ. ಅಶಾಂತಿಗೆ ಕಾರಣವಾಗಲಿದೆ ಎಂದು ಸಕ್ಸೇನಾ ತಿಳಿಸಿದ್ದು, ಇದರ ಸಾಕ್ಷ್ಯಕ್ಕಾಗಿ ಪೊಲೀಸರಿಗೆ ಹೇಳಿಕೆಯುಳ್ಳ ದಾಖಲೆಯನ್ನು ನೀಡಿದ್ದಾರೆ.

ಖುರೇಷಿ ಅವರ ವಿರುದ್ಧ 153 ಎ( ಧರ್ಮಗಳ ನಡುವೆ ವಿಷಬೀಜ ಬಿತ್ತುವುದು), 153 ಬಿ (ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವುದು), 124 ಎ (ದೇಶದ್ರೋಹ), 505(1) ಬಿ (ಸಮಾಜದಲ್ಲಿ ಭಯ ಸೃಷ್ಟಿಸುವುದು) ಸೆಕ್ಷನ್ ಪ್ರಕಾರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿರುವ ಅಜೀಜ್ ಖುರೇಷಿ 2014ರಿಂದ 2015ರ ವರೆಗೆ ಮಿಜೋರಾಂ ರಾಜ್ಯಪಾಲರಾಗಿದ್ದರು. ಕೆಲ ಕಾಲ ಉತ್ತರ ಪ್ರದೇಶದ ರಾಜ್ಯಪಾಲರಾಗಿಯೂ ಕರ್ತವ್ಯ ನಿರ್ವಹಿಸಿದ್ದರು.

Former Uttar Pradesh Governor Aziz Qureshi has been booked for sedition over his alleged derogatory remarks against the Yogi Adityanath government in the state, police said on Monday.