ಇನ್ಫೋಸಿಸ್ ಹಿಂದೆ ದೇಶದ್ರೋಹಿ ಹಿತಾಸಕ್ತಿ ; ವಿವಾದದ ಕಿಡಿ ಎಬ್ಬಿಸಿದ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯ ಅಂಕಣ !

06-09-21 05:52 pm       Headline Karnataka News Network   ದೇಶ - ವಿದೇಶ

ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್ ಬಗ್ಗೆ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯದಲ್ಲಿ ಅವಹೇಳನಕಾರಿ ವರದಿ ಮಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ.

ನವದೆಹಲಿ, ಸೆ.6: ದೇಶದ ಪ್ರತಿಷ್ಠಿತ ಐಟಿ ಸಂಸ್ಥೆ ಇನ್ಫೋಸಿಸ್ ಬಗ್ಗೆ ಆರೆಸ್ಸೆಸ್ ಮುಖವಾಣಿ ಪಾಂಚಜನ್ಯದಲ್ಲಿ ಅವಹೇಳನಕಾರಿ ವರದಿ ಮಾಡಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ಐಟಿ ತೆರಿಗೆ ಸಲ್ಲಿಕೆಗಾಗಿ ವೆಬ್ ಪೋರ್ಟಲ್ ರೆಡಿ ಮಾಡಲು ಇನ್ಫೋಸಿಸ್ ಸಂಸ್ಥೆಗೆ ಕೇಂದ್ರ ಹಣಕಾಸು ಇಲಾಖೆಯಿಂದ ಗುತ್ತಿಗೆ ನೀಡಲಾಗಿತ್ತು. ಎರಡೂವರೆ ತಿಂಗಳ ಹಿಂದೆ ವೆಬ್ ಸೈಟ್ ಲಾಂಚ್ ಆಗಿದ್ದರೂ, ಪದೇ ಪದೇ ಕೈಕೊಡುವುದು, ಸ್ಥಗಿತ ಆಗುತ್ತಿದ್ದುದು ಕೇಂದ್ರ ಹಣಕಾಸು ಇಲಾಖೆಗೆ ಭಾರೀ ಇರಿಸುಮುರಿಸು ಉಂಟುಮಾಡಿತ್ತು.

ಕಳೆದ ವಾರ ಎರಡು ದಿನಗಳ ಕಾಲ ವೆಬ್ ಕೈಕೊಟ್ಟಿತ್ತು. ಈ ಬಗ್ಗೆ ಹಲವು ಕಡೆಗಳಿಂದ ವ್ಯತಿರಿಕ್ತ ಅಭಿಪ್ರಾಯಗಳು ಕೇಳಿಬಂದಿದ್ದವು. ಇದೇ ವಿಚಾರದಲ್ಲಿ ಇನ್ಫೋಸಿಸ್ ಸಂಸ್ಥೆಯ ಸಿಇಓ ಸಲೀಲ್ ಪರೇಖ್ ಅವರನ್ನು ಕರೆದು ಮಾತನಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವೆಬ್ ಸೈಟ್ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಎಲ್ಲ ಸಮಸ್ಯೆಗಳನ್ನು ಸರಿಪಡಿಸುವಂತೆ ಸೂಚಿಸಿ ಸೆಪ್ಟಂಬರ್ 15ರ ವರೆಗೆ ಗಡುವು ಕೊಟ್ಟಿದ್ದರು. ಈ ಬೆಳವಣಿಗೆಯ ಬೆನ್ನಲ್ಲೇ ಪಾಂಚಜನ್ಯ ಪತ್ರಿಕೆಯಲ್ಲಿ ಸುದೀರ್ಘ ಅಂಕಣ ಪ್ರಕಟಗೊಂಡಿದ್ದು, ಇನ್ಫೋಸಿಸ್ ಸಂಸ್ಥೆಯ ವಿರುದ್ಧ ಹೀನಾಯವಾಗಿ ಬರೆದು ಅವಹೇಳನ ಮಾಡಲಾಗಿದೆ. ಅಲ್ಲದೆ, ಪತ್ರಿಕೆಯ ಹಿಂದಿ ಅವತರಣಿಕೆಯಲ್ಲಿ ಇನ್ಫೋಸಿಸ್ ಸಂಸ್ಥೆಯ ಸ್ಥಾಪಕ ನಾರಾಯಣಮೂರ್ತಿ ಫೋಟೋ ಪ್ರಕಟಿಸಿ, ಶಾಖ್ ಔರ್ ಆಘಾತ್ ಎಂದು ಹೆಡ್ ಲೈನ್ ಕೊಟ್ಟಿತ್ತು.

ಗೂಡ್ಸ್ ಮತ್ತು ಸರ್ವಿಸ್ ಟ್ಯಾಕ್ಸ್ ಪಾವತಿದಾರರು ವೆಬ್ ಸೈಟನ್ನು ಅವಲಂಬಿಸಿದ್ದಾರೆ. ಆದರೆ, ಇನ್ಫೋಸಿಸ್ ಸಂಸ್ಥೆಯು ಭಾರತದ ಆರ್ಥಿಕತೆಯನ್ನೇ ಬುಡಮೇಲು ಮಾಡುವ ಹುನ್ನಾರ ಇದ್ದಂತೆ ವರ್ತಿಸುತ್ತಿದೆ. ಭಾರತದ ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಹಿತಾಸಕ್ತಿ ಇದರೆ ಹಿಂದಿರುವಂತೆ ತೋರುತ್ತಿದೆ. ಇದರ ಹಿಂದೆ ದೇಶದ್ರೋಹಿ ಹಿತಾಸಕ್ತಿಗಳ ಕೈವಾಡ ಇದೆಯೇ ಎಂದು ಪಾಂಚಜನ್ಯದ ಲೇಖನದಲ್ಲಿ ಗಂಭೀರ ಪ್ರಶ್ನೆ ಎತ್ತಲಾಗಿದೆ. ಅಲ್ಲದೆ, ಇನ್ಫೋಸಿಸ್ ಈ ಹಿಂದೆ ನಕ್ಸಲೈಟ್, ಎಡಪಂಥೀಯರು ಮತ್ತು ತುಕ್ಡೆ ತುಕ್ಡೆ ಗ್ಯಾಂಗ್ ಗಳಿಗೆ ಸಹಾಯ ಮಾಡಿರುವ ಚರಿತ್ರೆ ಹೊಂದಿದೆ ಎಂದು ಪತ್ರಿಕೆ ಆರೋಪಿಸಿದೆ.

ಅಂಕಣದ ಬಗ್ಗೆ ಭಾರೀ ಆಕ್ರೋಶ, ಪರ – ವಿರೋಧ ಕೇಳಿಬರುತ್ತಿದ್ದಂತೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಂಚಜನ್ಯ ಪತ್ರಿಕೆಯ ಸಂಪಾದಕ ಹಿತೇಶ್ ಶಂಕರ್, ಇನ್ಫೋಸಿಸ್ ದೊಡ್ಡ ಸಂಸ್ಥೆಯಾಗಿದ್ದು, ಅದರ ಮೇಲಿನ ನಂಬಿಕೆಯಿಂದ ಸರಕಾರದ ದೊಡ್ಡ ಪ್ರಾಜೆಕ್ಟನ್ನು ವಹಿಸಲಾಗಿತ್ತು. ಈ ರೀತಿಯ ಟ್ಯಾಕ್ಸ್ ಪೋರ್ಟಲ್ ಹಿಂದೆ ದೇಶದ ಹಿತಾಸಕ್ತಿ ಅಡಗಿರುತ್ತದೆ. ಈ ಬಗ್ಗೆ ಇನ್ಫೋಸಿಸ್ ಸಂಸ್ಥೆಗೆ ಅಷ್ಟೇ ಜವಾಬ್ದಾರಿಯೂ ಇರುತ್ತದೆ ಎಂದು ಹೇಳಿದ್ದಾರೆ.

ಪಾಂಚಜನ್ಯ ಅಂಕಣದ ಬಗ್ಗೆ ವಿರೋಧ ಕೇಳಿಬಂದಿರುವ ಹಿನ್ನೆಲೆಯಲ್ಲಿ ಆರೆಸ್ಸೆಸ್ ತನಗೂ ಅದಕ್ಕೂ ಸಂಬಂಧ ಇಲ್ಲ ಎಂದು ಹೇಳಿಕೆ ನೀಡಿದೆ. ಪಾಂಚಜನ್ಯ ನಮ್ಮ ಮುಖವಾಣಿಯಲ್ಲ. ಅದರಲ್ಲಿ ಬಂದಿರುವ ವರದಿ ಆರೆಸ್ಸೆಸ್ ಅಭಿಪ್ರಾಯವೂ ಅಲ್ಲ. ಅಂಕಣ ಬಂದಿದ್ದರೆ ಅದು ಆಯಾ ಲೇಖಕನ ಅಭಿಪ್ರಾಯ ಮಾತ್ರ ಆಗಿರುತ್ತದೆ ಎಂದು ಹೇಳಿದೆ. ಈ ಬಗ್ಗೆ ಆರೆಸ್ಸೆಸ್ ನಾಯಕ ಸುನಿಲ್ ಅಂಬೇಕರ್, ತೇಪೆ ಹಚ್ಚುವ ರೀತಿಯ ಅಭಿಪ್ರಾಯವನ್ನು ಟ್ವೀಟ್ ಮೂಲಕ ನೀಡಿದ್ದಾರೆ. 

The BJP's ideological mentor RSS has distanced itself from a piece published in Panchjanya - a journal with roots in the Sangh - that questioned whether an "anti-national" conspiracy could be behind glitches on India's tax-filing websites handled by information technology giant Infosys Ltd. The editor of the magazine, Hitesh Shankar, backed the article and said if Infosys has objections "it should present its side by urging for a more thorough investigation".