ಪಾಕಿಸ್ಧಾನ ಮತ್ತು ಐಎಸ್ಐ ವಿರುದ್ಧ ಆಝಾದಿ ಘೋಷಣೆ ; ಕಾಬೂಲ್ ಬೀದಿಯಲ್ಲಿ ಪ್ರತಿಭಟನೆ ನಡೆಸಿದ ಮಹಿಳೆಯರು

07-09-21 02:40 pm       Headline Karnataka News Network   ದೇಶ - ವಿದೇಶ

ಕಾಬೂಲ್ ನಲ್ಲಿ ನೂರಾರು ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಪಾಕಿಸ್ಥಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಘೋಷಣೆ ಹಾಕಿದ್ದಾರೆ.

ಕಾಬೂಲ್, ಸೆ.7: ರಾಜಧಾನಿ ಕಾಬೂಲ್ ನಲ್ಲಿ ನೂರಾರು ಮಹಿಳೆಯರು ಪ್ರತಿಭಟನಾ ಮೆರವಣಿಗೆ ನಡೆಸಿದ್ದು, ಪಾಕಿಸ್ಥಾನ ಮತ್ತು ಅದರ ಗುಪ್ತಚರ ಸಂಸ್ಥೆ ಐಎಸ್ಐ ವಿರುದ್ಧ ಘೋಷಣೆ ಹಾಕಿದ್ದಾರೆ. ಪಂಜ್ ಶೀರ್ ಪ್ರಾಂತ್ಯದಲ್ಲಿ ಹೋರಾಡುತ್ತಿರುವ ಪ್ರತಿರೋಧ ಪಡೆಯ ವಿರುದ್ಧ ಪಾಕಿಸ್ಥಾನಿ ಸೈನಿಕರು ಎರಗಿದ್ದನ್ನು ವಿರೋಧಿಸಿ, ಪ್ರತಿಭಟನೆ ನಡೆಸಿದ್ದಾರೆ. ಪಾಕಿಸ್ಥಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆಯಲ್ಲಿ ಮೆರವಣಿಗೆ ನಡೆಸಿದ್ದಾರೆ.

ನೂರಾರು ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ ವೇಳೆ ತಾಲಿಬಾನ್ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಜನರಲ್ಲಿ ಭಯ ಸೃಷ್ಟಿಸಿದ್ದಾರೆ. ಗುಂಡು ಹಾರುತ್ತಿದ್ದಂತೆ, ಮಹಿಳೆಯರು ದಿಕ್ಕಾಪಾಲು ಓಡಿ ತಪ್ಪಿಸಿಕೊಳ್ಳುತ್ತಿರುವ ವಿಡಿಯೋಗಳನ್ನು ಅಲ್ಲಿನ ಸ್ಥಳೀಯ ಮಾಧ್ಯಮಗಳು ಟ್ವಿಟರ್ ನಲ್ಲಿ ಹಂಚಿಕೊಂಡಿವೆ. ರಾಜಧಾನಿ ಕಾಬೂಲ್ ನಲ್ಲಿರುವ ಅಧ್ಯಕ್ಷರ ಅರಮನೆಯ ಹೊರಗೆ ಮಹಿಳೆಯರು ಸೇರಿದ್ದು, ಘೋಷಣೆ ಕೂಗಿದ್ದಾರೆ. ಅಲ್ಲದೆ, ಕಳೆದ ಒಂದು ವಾರದಿಂದ ಪಾಕಿಸ್ಥಾನದ ಐಎಸ್ಐ ಮುಖ್ಯಸ್ಥ ಉಳಿದುಕೊಂಡಿರುವ ಕಾಬೂಲಿನ ಸೆರೆನಾ ಹೊಟೇಲ್ ಮುಂದುಗಡೆಯೇ ಮಹಿಳೆಯರು ಪಾಕಿಸ್ಧಾನ ಮತ್ತು ಐಎಸ್ಐ ವಿರುದ್ಧ ಘೋಷಣೆ ಕೂಗುತ್ತಾ ಸಾಗಿದ್ದಾರೆ.

ಮುಖಕ್ಕೆ ಮಾಸ್ಕ್ ಮತ್ತು ಬುರ್ಖಾ ಧರಿಸಿದ್ದ ಮಹಿಳೆಯರು ಆಕ್ರೋಶಭರಿತರಾಗಿ ಪಾಕಿಸ್ಥಾನ ಸಾವು ಬರಲಿ, ಆಝಾದಿ ಆಝಾದಿ ಎನ್ನುತ್ತಾ ಘೋಷಣೆ ಕೂಗಿದ್ದಾರೆ. ಒಂದು ವಿಡಿಯೋದಲ್ಲಿ ಮಹಿಳೆ ಮಾತನಾಡುತ್ತಾ, ತಾಲಿಬಾನ್ ಆಗಲೀ, ಪಾಕಿಸ್ಥಾನ ಆಗಲೀ ಯಾರಿಗೂ ಪಂಜ್ ಶೀರ್ ಒಳಗೆ ನುಗ್ಗುವ ಹಕ್ಕು ಇಲ್ಲ ಎಂದು ಹೇಳಿದ್ದಾಳೆ. ತಾಲಿಬಾನ್ ಪಡೆಗಳು ಸೋಮವಾರ ಪಂಜ್ ಶೀರ್ ಪ್ರಾಂತ್ಯವನ್ನು ಸಂಪೂರ್ಣ ಹಿಡಿತಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿಕೊಂಡ ಬೆನ್ನಲ್ಲೇ ಮಹಿಳೆಯರು ಈ ರೀತಿ ಪ್ರತಿಭಟನೆ ನಡೆಸಿದ್ದಾರೆ.  

Hundreds of Afghans, mostly women, took to the streets of Kabul on Tuesday in an anti-Pakistan rally in which they chanted slogans against Islamabad and ISI. As the protests intensified, the Taliban opened fire on the rally.