ಕಂದಹಾರ್ ವಿಮಾನ ಅಪಹರಣದ ಸಂಚುಕೋರ ಮುಲ್ಲಾ ಒಮರ್ ಪುತ್ರ ಅಫ್ಘಾನಲ್ಲೀಗ ರಕ್ಷಣಾ ಸಚಿವ !

09-09-21 12:27 pm       Headline Karnataka News Network   ದೇಶ - ವಿದೇಶ

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅಚ್ಚರಿಯಂದ್ರೆ, ವಿಶ್ವಸಂಸ್ಥೆ ಜಾಗತಿಕ ಉಗ್ರರು ಎಂದು ಘೋಷಿಸಿದ್ದ ಬಹುತೇಕ ಉಗ್ರರು ನೂತನ ಸರಕಾರದಲ್ಲಿ ಸಚಿವ ಪಟ್ಟಕ್ಕೇರಿದ್ದಾರೆ.

ಕಾಬೂಲ್, ಸೆ.8: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರಕಾರ ಅಸ್ತಿತ್ವಕ್ಕೆ ಬಂದಿದೆ. ಅಚ್ಚರಿಯಂದ್ರೆ, ವಿಶ್ವಸಂಸ್ಥೆ ಜಾಗತಿಕ ಉಗ್ರರು ಎಂದು ಘೋಷಿಸಿದ್ದ ಬಹುತೇಕ ಉಗ್ರರು ನೂತನ ಸರಕಾರದಲ್ಲಿ ಸಚಿವ ಪಟ್ಟಕ್ಕೇರಿದ್ದಾರೆ. ಇದಕ್ಕಿಂತಲೂ ವಿಚಿತ್ರ ಅಂದ್ರೆ, ಕಳೆದ ಬಾರಿ ತಾಲಿಬಾನ್ ಸರಕಾರ ಇದ್ದಾಗ ಭಾರತದ ವಿಮಾನ ಹೈಜಾಕ್ ಮಾಡಿದ್ದ ಸಂಚುಕೋರ, ತಾಲಿಬಾನ್ ಸ್ಥಾಪಕರಲ್ಲಿ ಒಬ್ಬನಾಗಿದ್ದ ಮುಲ್ಲಾ ಒಮರ್ ಪುತ್ರ ಅಫ್ಘಾನಲ್ಲಿ ರಕ್ಷಣಾ ಸಚಿವ ಸ್ಥಾನಕ್ಕೇರಿದ್ದಾನೆ.

ಒಂದು ದೇಶದ ರಕ್ಷಣಾ ವ್ಯವಸ್ಥೆ ಮತ್ತು ಅಲ್ಲಿನ ಮಿಲಿಟರಿ ಶಕ್ತಿಯನ್ನು ನೋಡಿಕೊಳ್ಳುವ ಹೊಣೆಗಾರಿಕೆ ಹೊಂದಿರುವ ರಕ್ಷಣಾ ಖಾತೆಯನ್ನು ಮುಲ್ಲಾ ಒಮರ್ ಪುತ್ರ, ಮುಲ್ಲಾ ಮೊಹಮ್ಮದ್ ಯಾಕೂಬ್ ವಹಿಸಿಕೊಂಡಿದ್ದಾನೆ. 1999ರಲ್ಲಿ ಭಾರತದಲ್ಲಿ ಬಂಧಿಯಾಗಿದ್ದ ಉಗ್ರರನ್ನು ಪಾರು ಮಾಡುವುದಕ್ಕಾಗಿ ಭಾರತೀಯರಿದ್ದ ವಿಮಾನವನ್ನೇ ತಾಲಿಬಾನ್ ಉಗ್ರರು ಅಪಹರಿಸಿದ್ದರು. ಐಸಿ- 814 ಸಂಖ್ಯೆಯ ವಿಮಾನ ನೇಪಾಳ ರಾಜಧಾನಿ ಕಾಠ್ಮಂಡು ವಿಮಾನ ನಿಲ್ದಾಣದಿಂದ ದೆಹಲಿಗೆ ಹೊರಟಿತ್ತು. ಆದರೆ, ವಿಮಾನ ದೆಹಲಿಗೆ ಬರುವ ಮೊದಲೇ ಅದನ್ನು ಉಗ್ರರು ಹೈಜಾಕ್ ಮಾಡಿದ್ದು ನೇರವಾಗಿ ಅಫ್ಘನಿಸ್ತಾನದ ಕಂದಹಾರ್ ಗೆ ತಲುಪಿತ್ತು.

177 ಮಂದಿ ಪ್ರಯಾಣಿಕರಿದ್ದ ವಿಮಾನವನ್ನು ಕಂದಹಾರ್ ನಲ್ಲಿ ಏಳು ದಿನಗಳ ವರೆಗೆ ಇರಿಸಲಾಗಿತ್ತು. ಪಾಕಿಸ್ಥಾನದ ಐಎಸ್ಐ ಮತ್ತು ತಾಲಿಬಾನ್ ಉಗ್ರರು ವಿಮಾನ ಅಪಹರಣದ ಸಂಚು ಹೂಡಿದ್ದರು. ಪಾಕಿಸ್ಥಾನ ಮೂಲದ ಉಗ್ರ ಜೈಶ್ ಇ- ಮಹಮ್ಮದ್ ಸಂಘಟನೆಯ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಉಗ್ರರಾದ ಅಲ್ ಉಮರ್ ಮುಜಾಹಿದೀನ್, ಮುಶ್ತಾಕ್ ಅಹ್ಮದ್ ಝರ್ಗರ್, ಬ್ರಿಟಿಷ್ ಮೂಲದ ಅಲ್ ಖೈದಾ ಉಗ್ರ ಅಹ್ಮದ್ ಒಮರ್ ಸಯೀದ್ ಶೇಖ್ ಅವರನ್ನು ಭಾರತದ ಜೈಲಿನಿಂದ ಬಿಡುಗಡೆ ಮಾಡಲು ಷರತ್ತು ವಿಧಿಸಲಾಗಿತ್ತು. ಬಳಿಕ 177 ಮಂದಿಯ ಪ್ರಾಣ ಉಳಿಸುವುದಕ್ಕಾಗಿ ನಾಲ್ವರು ಉಗ್ರರನ್ನು ಭಾರತ ಸರಕಾರ ಜೈಲಿನಿಂದ ಬಿಡುಗಡೆ ಮಾಡಿತ್ತು.

ಬಾಂಬ್ ಸ್ಫೋಟ ಮತ್ತು ವಿಧ್ವಂಸಕ ಕೃತ್ಯಗಳಲ್ಲಿ ಸಂಚು ಹೂಡುವಲ್ಲಿ ನಿಷ್ಣಾತನಾಗಿದ್ದ ವಿಶ್ವಸಂಸ್ಥೆಯಿಂದ ಜಾಗತಿಕ ಉಗ್ರನೆಂದು ಉಲ್ಲೇಖಿಸಲ್ಪಟ್ಟಿರುವ ಸಿರಾಜುದ್ದೀನ್ ಹಕ್ಕಾನಿ ಗೃಹ ಸಚಿವನಾಗಿದ್ದಾನೆ. ತಾಲಿಬಾನಿಗಳ ಜಾಗತಿಕ ಗುಪ್ತಚರ ನೆಟ್ವರ್ಕ್ ಹಕ್ಕಾನಿಯ ಮುಖ್ಯಸ್ಥನೂ ಆಗಿದ್ದಾನೆ. ಇವರೆಲ್ಲ ಪಾಕಿಸ್ಥಾನಿಯರಾಗಿದ್ದು, ಇವರೆಲ್ಲರಿಗೂ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಸಂಘಟನೆಯೇ ಮಾಸ್ಟರ್ ಮೈಂಡ್ ಆಗಿತ್ತು. ವಾರದ ಹಿಂದೆ ಸರಕಾರ ರಚನೆಯ ಸಂದರ್ಭದಲ್ಲಿ ತಾಲಿಬಾನ್ ಸಂಘಟನೆಯಲ್ಲೇ ಒಡಕು ಮೂಡಿದ್ದಾಗ ಐಎಸ್ಐ ಮುಖ್ಯಸ್ಥನೇ ಕಾಬೂಲಿಗೆ ಬಂದು ಈಗ ಸರಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. 

Mullah Mohammad Yaqoob, son of Taliban's first emir or leader and founder Mullah Omar, who was the mastermind of the IC-814 hijacking, is the defence minister of Afghanistan under the Taliban regime.