ಮನೆಯಲ್ಲಿನ ಇಲಿಗಳ ಸಮಸ್ಯೆಗೆ ಇಲ್ಲಿದೆ ಸೂಪರ್ ಟಿಪ್ಸ್

14-09-21 05:08 pm       Source: News 18 Kannada   ದೇಶ - ವಿದೇಶ

ಇಲಿಗಳು ನಿಮ್ಮ ಮನೆ ಮತ್ತು ವೈಯಕ್ತಿಕ ಆರೋಗ್ಯದ ಮೇಲೆ ಗಂಭೀರ  ಪರಿಣಾಮವನ್ನು ಕೂಡ ಬೀರುತ್ತದೆ.

ಸಾಮಾನ್ಯವಾಗಿ ಮನೆಗಳಲ್ಲಿ ಇಲಿಗಳು(Rat) ಓಡಾಡುವುದನ್ನ ನೋಡಿರುತ್ತೇವೆ. ಇಲಿಗಳು ಆಹಾರ,ಮತ್ತು ಆಶ್ರಯವನ್ನು ಹುಡುಕಲು ಮನೆಯೊಳಗೆ ಅಡ್ಡಾಡುತ್ತವೆ. ಅವುಗಳು ಯಾವುದೇ ಆಹಾರ ಮತ್ತು ವಸ್ತುವನ್ನು ಇಟ್ಟರೆ ಅದನ್ನು ಹಾಳು ಮಾಡದೇ ಬಿಡುವುದಿಲ್ಲ. ಅವು ನಿಮ್ಮ ಮನೆ ಮತ್ತು ವೈಯಕ್ತಿಕ ಆರೋಗ್ಯದ(Health) ಮೇಲೆ ಗಂಭೀರ  ಪರಿಣಾಮವನ್ನು ಕೂಡ ಬೀರುತ್ತದೆ. ಅವುಗಳಲ್ಲಿರುವ ಬ್ಯಾಕ್ಟೀರಿಯಾ ಅಲರ್ಜಿ ಮತ್ತು ಆಸ್ತಮಾವನ್ನು  ಹೆಚ್ಚು ಮಾಡುತ್ತದೆ. ಮನೆಯಲ್ಲಿರುವ ಇಲಿ(Mice)ಗಳಿಂದ ಮುಕ್ತಿ ಪಡೆಯಲು ಹಲವಾರು ಪ್ರಯತ್ನಗಳನ್ನು ಮಾಡಿದ್ದರೂ ಅದು ಅಷ್ಟು ಸುಲಭವಾಗಿ ಹೋಗುವುದಿಲ್ಲ.

ಯಾವುದೇ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೊದಲು, ಇಲಿಗಳು ಯಾವ ಮೂಲೆಯಲ್ಲಿದೆ ಎಂಬುದನ್ನ ತಿಳಿದುಕೊಳ್ಳಬೇಕು.  ನೀವು ಇಲಿಯ ಹಿಕ್ಕೆಗಳು ಎಲ್ಲಿದೆ, ಯಾವ  ಜಾಗದಲ್ಲಿ ಹೆಚ್ಚಿನ ಹಾನಿಯಾಗಿದೆ ಎಂಬುದನ್ನ ಸರಿಯಾಗಿ ನೋಡಿ, ಇಲಿಯನ್ನು ಪತ್ತೆ ಹಚ್ಚಬೇಕು.  ಒಮ್ಮೆ ನೀವು ಇಲಿಗಳನ್ನು ಹಾಗೂ ಅದರ ಹಿಕ್ಕೆ ಅಥವಾ ಕಚ್ಚಿದ ಆಹಾರ ಪೆಟ್ಟಿಗೆಗಳನ್ನು ಗಮನಿಸಿದರೆ, ಇಲಿಗಳು  ಹೆಚ್ಚಿನ ಹಾನಿ ಮಾಡುವ ಮೊದಲು ಅವುಗಳನ್ನು ಹೋಗಲಾಡಿಸಲು ಬೇಗನೆ ಕ್ರಮ ತೆಗೆದುಕೊಳ್ಳಿ. ಸಾಮಾನ್ಯವಾಗಿ ಪ್ರತಿಯೊಬ್ಬರು ಇಲಿಗಳ ಕಾಟದಿಂದ ಮುಕ್ತಿ ಪಡೆಲು ಬೋನ್​ಗಳನ್ನು ಅಥವಾ ವಿಷವನ್ನು ಇಡುತ್ತಾರೆ,ಆದರೆ ಆ ವಿಷ ಮನೆಯವರ ಆರೋಗ್ಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ನೈಸರ್ಗಿಕವಾಗಿ ಇಲಿಗಳಿಂದ ಮುಕ್ತಿ ಪಡೆಯಲು ಇಲ್ಲಿದೆ ಸುಲಭ ಮಾರ್ಗ.

ಅಡುಗೆ ಸೋಡಾ

ಇಲಿಗಳು ಮತ್ತು ಇತರ ಕೀಟಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಸಾಬೀತಾಗಿದೆ. ನಿಮ್ಮ ಮನೆಯಲ್ಲಿ ಇಲಿಗಳು ಕಾಣಿಸಿಕೊಂಡಲ್ಲಿ , ಯಾವ ಮೂಲೆಯಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತದೆ ಎಂದು ಗಮನಿಸಿ , ಆ ಮೂಲೆಯಲ್ಲಿ ಅಡುಗೆ ಸೋಡಾವನ್ನು ಹಾಕಿ. ರಾತ್ರಿ ಇಡೀ ಅದನ್ನು ಹಾಗೆಯೇ ಬಿಡಬೇಕು. ನಂತರ ಬೆಳಗ್ಗೆ ಆ ಪುಡಿಯನ್ನು ಕ್ಲೀನ್ ಮಾಡಿ. ಇನ್ನು ಇದನ್ನು  ನಿಯಮಿತವಾಗಿ ಮಾಡಬೇಕು. ಒಂದು ಸಾರಿ ಮಾಡುವುದು  ಯಾವುದೇ ಪರಿಹಾರ ನೀಡುವುದಿಲ್ಲ. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕವಿರದ ಕಾರಣ ನಮ್ಮ ಆರೋಗ್ಯಕ್ಕೆ ಹಾನಿ ಮಾಡುವುದಿಲ್ಲ.

ಈರುಳ್ಳಿ

ಈರುಳ್ಳಿಯ ಘಾಟಿನ ವಾಸನೆ ಮನುಷ್ಯರಿಗೂ ಸಹ ತಡೆಯಲು ಸಾಧ್ಯವಾಗುವುದಿಲ್ಲ. ಹಾಗೆಯೇ ಇಲಿಗಳಿಗೂ ಸಹ ಈರುಳ್ಳಿಯ ವಾಸನೆಯನ್ನು ತಡೆಯುವ ಶಕ್ತಿ ಇಲ್ಲ. ಈರುಳ್ಳಿಯನ್ನು ಬಳಸಿ ನೀವು ಸುಲಭವಾಗಿ ಇಲಿಗಳಿಂದ ಮುಕ್ತಿ ಪಡೆಯಬಹುದು.  ಆದರೆ ಇದನ್ನು ಬಳಸುವ ಎಚ್ಚರವಾಗಿರಬೇಕು. ಏಕೆಂದರೆ ಈರುಳ್ಳಿ  ಬೇಗನೆ ಕೊಳೆಯುತ್ತದೆ. ಮನೆಯ ಮೂಲೆಗಳಲ್ಲಿ ಈರುಳ್ಳಿಯನ್ನು ಕತ್ತರಿಸಿ ಇರಿಸಿ, ಹಾಗೂ ಇದನ್ನು ಎರೆಡು ದಿನಗಳಿಗೊಮ್ಮೆ ಬದಲಾಯಿಸಿ, ಆಗ ಇಲಿಗಳ ಕಾಟ ತಪ್ಪುತ್ತದೆ. ಆದರೆ ನೀವು ಮನೆಯಲ್ಲಿ  ಸಾಕುಪ್ರಾಣಿಗಳನ್ನು ಹೊಂದಿದ್ದರೆ ಈ ವಿಧಾನವನ್ನು ಬಳಸದಿರುವುದು ಒಳ್ಳೆಯದು, ಏಕೆಂದರೆ ಇದು ನಾಯಿ ಮತ್ತು ಬೆಕ್ಕುಗಳಿಗೆ ವಿಷಕಾರಿಯಾಗುತ್ತದೆ, ಅವುಗಳ ಜೀವಕ್ಕೆ ಅಪಾಯವನ್ನು ಮಾಡುತ್ತದೆ.



ಕೆಂಪು ಮೆಣಸಿನ ಪುಡಿ

ಕ್ರಿಮಿಕೀಟಗಳನ್ನು ನಿಮ್ಮ ಮನೆಯಿಂದ ಹೊರಗಿಡಲು ಇದು ಅತ್ಯಂತ ಸುಲಭ ಮಾರ್ಗ. ಕೆಂಪು ಮೆಣಸಿನಕಾಯಿಯ ಬಲವಾದ ವಾಸನೆಯು ಇಲಿಗಳನ್ನು ದೂರವಿಡಲು ಮಾತ್ರವಲ್ಲದೆ, ಜಿರಲೆಗಳು ಮತ್ತು ತಿಗಣೆಯಂತಹ ಇತರ ಕೀಟಗಳನ್ನು  ಹೊರ ಹಾಕಲು ಸಹಾಯ ಮಾಡುತ್ತದೆ.

ಇಲಿಗಳು ಕಂಡುಬರುವ ಜಾಗದಲ್ಲಿ ಮೆಣಸಿನ ಪುಡಿಯನ್ನು ಹಾಕಿ, ಇದನ್ನು ನಿಯಮಿತವಾಗಿ ಮಾಡುವ ಮೂಲಕ ಇಲಿಗಳನ್ನು ಹೊಡೆದೋಡಿಸಬಹುದು. ಇನ್ನು  ಮನೆಯಲ್ಲಿ ನಾಯಿ ಮತ್ತು ಬೆಕ್ಕು ಇದ್ದಲ್ಲಿ ಮೆಣಸಿನ ಪುಡಿಯನ್ನು ಬಟ್ಟೆಯೊಂದರಲ್ಲಿ ಕಟ್ಟಿ, ಮನೆಯ ಮೂಲೆಗಳಲ್ಲಿ ಇಡುವುದು ಉತ್ತಮ.

ಇದಿಷ್ಟೇ ಅಲ್ಲದೇ ಲವಂಗ, ಪುದೀನಾ ಸೇರಿದಂತೆ ಹಲವಾರು ಪದಾರ್ಥಗಳು ಮನೆಯಲ್ಲಿರುವ ಇಲಿಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ.