ಬ್ಯಾಂಕ್ ಖಾತೆಗೆ ಬಿದ್ದಿತ್ತು ಒಂದೂವರೆ ಲಕ್ಷ ; ಮೋದಿ ಹಣವೆಂದು ತಿಳಿದು ಮಜಾ ಮಾಡಿ ಜೈಲು ಪಾಲಾದ !

16-09-21 04:00 pm       Headline Karnataka News Network   ದೇಶ - ವಿದೇಶ

ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ಗ್ರಾಮಸ್ಥನೊಬ್ಬನ ಖಾತೆಗೆ 1.61 ಲಕ್ಷ ರೂಪಾಯಿ ಪಾವತಿ ಆಗಿತ್ತು. ಪ್ರಧಾನಿ ಮೋದಿಯೇ ತನ್ನ ಖಾತೆಗೆ ಹಣ ಹಾಕಿದ್ದಾಗಿ ತಿಳಿದು ಮಜಾ ಮಾಡಿ ಜೈಲು ಪಾಲಾದ.

ಪಾಟ್ನಾ, ಸೆ.16: ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ಗ್ರಾಮಸ್ಥನೊಬ್ಬನ ಖಾತೆಗೆ 1.61 ಲಕ್ಷ ರೂಪಾಯಿ ಪಾವತಿ ಆಗಿತ್ತು. ಬ್ಯಾಂಕಿನಿಂದ ತನ್ನಿಂತಾನೇ ತನ್ನ ಖಾತೆಗೆ ಇಷ್ಟೊಂದು ಹಣ ಬಿದ್ದಿರುವುದನ್ನು ಕಂಡ ಆ ವ್ಯಕ್ತಿ ಪ್ರಧಾನಿ ಮೋದಿಯೇ ತನ್ನ ಖಾತೆಗೆ ಹಣ ಹಾಕಿದ್ದಾಗಿ ತಿಳಿದು ಖರ್ಚು ಮಾಡತೊಡಗಿದ್ದ. ಆನಂತರ ಬ್ಯಾಂಕ್ ಸಿಬಂದಿ ಎಡವಟ್ಟು ತಿಳಿದು ಆತನಲ್ಲಿ ಹಣ ಕೇಳಿದಾಗ, ಮೋದಿ ಕೊಟ್ಟ ಹಣವೆಂದು ಹೇಳಿ ಹಿಂತಿರುಗಿಸಲು ನಿರಾಕರಿಸಿದ್ದಾನೆ.

ಮಾನ್ಸಿ ಎಂಬಲ್ಲಿ ಈ ಘಟನೆ ನಡೆದಿದ್ದು ದಕ್ಷಿಣ್ ಗ್ರಾಮೀಣ ಬ್ಯಾಂಕಿನ ಭಕ್ತಿಯಾರ್ ಪುರ ಶಾಖೆಯ ಸಿಬಂದಿ ಬೇರೆಯವರ ಖಾತೆಗೆ ಹಾಕಬೇಕಿದ್ದ ಹಣವನ್ನು ತಪ್ಪಾಗಿ ರಂಜಿತ್ ಕುಮಾರ್ ದಾಸ್ ಎನ್ನುವ ವ್ಯಕ್ತಿಗೆ ಹಾಕಿದ್ದರು. ಬರೋಬ್ಬರಿ 1,60,970 ರೂಪಾಯಿ ಹಣ ಹೆಚ್ಚುವರಿಯಾಗಿ ತನ್ನ ಖಾತೆಗೆ ಬಿದ್ದಿದ್ದನ್ನು ನೋಡಿದ ರಂಜಿತ್ ಕುಮಾರ್ ದಾಸ್, ಮೋದಿ ತನ್ನ ಖಾತೆಗೆ ಹಣ ಹಾಕಿದ್ದಾರೆಂದು ತಿಳಿದು ಬೇಕಾಬಿಟ್ಟಿ ಖರ್ಚು ಮಾಡಲಾರಂಭಿಸಿದ್ದ. ಮೋದಿ ಯಾವುದೋ ಯೋಜನೆ ಹೆಸರಲ್ಲಿ, ತನ್ನ ಖಾತೆಗೆ ಹಣ ಹಾಕಿಸಿದ್ದಾರೆ ಎಂದುಕೊಂಡಿದ್ದ.

ಆನಂತರ, 85 ವರ್ಷದ ಮಹಿಳೆಯ ಖಾತೆಗೆ ಹಣ ಪಾವತಿಯಾಗದೇ ಇರುವ ಬಗ್ಗೆ ಆಕೆಯ ಕುಟುಂಬಸ್ಥರು ಬ್ಯಾಂಕ್ ಸಿಬಂದಿಯಲ್ಲಿ ವಿಚಾರಿಸಿದ್ದರು. ಬ್ಯಾಂಕ್ ಸಿಬಂದಿ ಪರಿಶೀಲನೆ ನಡೆಸಿದಾಗ ರಂಜಿತ್ ಕುಮಾರ್ ಹೆಸರಲ್ಲಿ ಹಣ ವರ್ಗಾವಣೆಯಾಗಿದ್ದು ಕಂಡುಬಂದಿತ್ತು. ರಂಜಿತ್ ಬಳಿ ಹಣ ಹಿಂತಿರುಗಿಸುವಂತೆ ಹೇಳಿದರೆ, ಆತ ನಿರಾಕರಿಸಿದ್ದಾನೆ. ಮೋದಿಯೇ ನನಗೆ ಹಣ ಹಾಕಿದ್ದಾರೆ. ಅದನ್ನು ನಾನು ಯಾಕೆ ಹಿಂತಿರುಗಿಸಬೇಕು ಎಂದು ಕೇಳಿದ್ದಾನೆ.

ರಂಜಿತ್ ಗೆ ಬ್ಯಾಂಕ್ ಮ್ಯಾನೇಜರ್ ನೋಟೀಸ್ ನೀಡಿದರೂ, ಕ್ಯಾರ್ ಮಾಡಿಲ್ಲ. ಆಬಳಿಕ, ಬ್ಯಾಂಕ್ ಮ್ಯಾನೇಜರ್ ಸತ್ಯನಾರಾಯಣ ಪ್ರಸಾದ್ ಮಾನ್ಸಿ ಠಾಣೆಯಲ್ಲಿ ರಂಜಿತ್ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರು ರಂಜಿತ್ ನನ್ನು ಬಂಧಿಸಿದ್ದಾರೆ. 85 ವರ್ಷದ ತಾರಾದೇವಿ ಎಂಬ ಮಹಿಳೆಯ ಖಾತೆಗೆ ಹಣ ಹಾಕಬೇಕಿತ್ತು. ಬ್ಯಾಂಕ್ ಸಿಬಂದಿಯ ತಪ್ಪಿನಿಂದಾಗಿ ತಾನು ದುಡಿದಿಟ್ಟ ಹಣ ಯಾರದ್ದೋ ಪಾಲಾಗಿದ್ದು ಚಿಂತೆಗೆ ಕಾರಣವಾಗಿತ್ತು. ಅಜ್ಜಿಯ ಕುಟುಂಬಸ್ಥರು ದೂರು ನೀಡಿದ ಬಳಿಕ ಬ್ಯಾಂಕ್ ಸಿಬಂದಿ ಕೊನೆಗೂ ಪೊಲೀಸ್ ಮೆಟ್ಟಿಲೇರಿದ್ದಾರೆ. ಮೋದಿ ಹಣದ ಆಸೆಯಲ್ಲಿದ್ದ ಗ್ರಾಮಸ್ಥ ಜೈಲುಪಾಲಾಗಿದ್ದಾನೆ. 

A resident of Bihar’s Khagaria received Rs 1.61 lakh in his account after a bank error and has now refused to let go of the money saying it was sent by Prime Minister Narendra Modi as financial aid.