ಸಂಸದ ಓವೈಸಿ ಮನೆಗೆ ಹಿಂದೂ ಸೇನಾ ದಾಳಿ, ವಸ್ತುಗಳೆಲ್ಲ ಪುಡಿಪುಡಿ ; ಅಸಾದುದ್ದೀನ್‌ ಒಬ್ಬ ಜಿಹಾದಿ ಎಂದು ಘೋಷಣೆ !

22-09-21 11:14 am       Headline Karnataka News Network   ದೇಶ - ವಿದೇಶ

ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆಗೆ ಹಿಂದೂ ಸೇನಾ ಸಂಘಟನೆಗೆ ಸೇರಿದವರು ಎಂದು ಹೇಳಿಕೊಂಡು ನುಗ್ಗಿದ ದುಷ್ಕರ್ಮಿಗಳನ್ನು ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ.

ನವದೆಹಲಿ, ಸೆ. 22: ಸಂಸದ ಹಾಗೂ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆಗೆ ಹಿಂದೂ ಸೇನಾ ಸಂಘಟನೆಗೆ ಸೇರಿದವರು ಎಂದು ಹೇಳಿಕೊಂಡು ನುಗ್ಗಿದ ದುಷ್ಕರ್ಮಿಗಳನ್ನು ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದಾರೆ. ಈ ಸಂಬಂಧ ದೆಹಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮಂಗಳವಾರ ಸಂಜೆ ವೇಳೆಗೆ ನವೆದಹಲಿಯ ಅಶೋಕ ರಸ್ತೆಯಲ್ಲಿರುವ ಸಂಸದ ಅಸಾದುದ್ದೀನ್ ಓವೈಸಿಯವರಿಗೆ ಸೇರಿದ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ವಸ್ತುಗಳನ್ನು ಧ್ವಂಸಗೊಳಿಸಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಓವೈಸಿ, ದುಷ್ಕರ್ಮಿಗಳ ತಂಡವು ಕೋಮು ಘೋಷಣೆಗಳನ್ನು ಕೂಗುತ್ತಿದ್ದು, ತಮಗೆ ಜೀವ ಬೆದರಿಕೆ ಹಾಕಿದೆ. 'ಇದು ದೇಶದಲ್ಲಿ ಸೃಷ್ಠಿಸಲಾದ ಧರ್ಮಾಂಧತೆ ಹಾಗೂ ದ್ವೇಷದ ವಾತಾವರಣದಿಂದಾಗಿ ನಡೆದ ದಾಳಿ. ನೀವು ಪ್ರತಿಭಟನೆ ಮಾಡಿ. ವಿಧ್ವಂಸಕ ಕೃತ್ಯ ಯಾಕೆ ಮಾಡುತ್ತೀರಿ? ಜಂತರ್‌ ಮಂತರ್‌ ಕೇವಲ 200 ಮೀಟರ್‌ ದೂರದಲ್ಲಿದೆ. ಅಲ್ಲಿ ಪ್ರತಿಭಟನೆ ಮಾಡಬಹುದು. ನಿಮ್ಮನ್ನು ತಡೆಯುವವರು ಯಾರು? ಇದೆಲ್ಲಾ ಹಿಂದುತ್ವ ಬ್ರಿಗೇಡ್‌ನ ಪ್ರಮುಖ ಅಂಶಗಳು. ಇದಕ್ಕೆ ಸರ್ಕಾರವೇ ಅಂತ್ಯ ಹಾಡಬೇಕು. ಸರ್ಕಾರ ಮಾತ್ರವೇ ಈ ಮೂಲಭೂತವಾದವನ್ನು ನಿಲ್ಲಿಸಲು ಸಾಧ್ಯ. ಈ ದಾಳಿಯನ್ನೆಲ್ಲಾ ನಾನು ನೋಡುತ್ತಾ ಬಂದಿದ್ದೇನೆ. ಇಂಥ ದಾಳಿಗಳಿಂದ ನನ್ನ ಕೆಲಸವನ್ನು ತಡೆಯಲು ಸಾಧ್ಯವಿಲ್ಲ' ಎಂದು ಹೇಳಿದ್ದಾರೆ.

ಸರಣಿ ಟ್ವೀಟ್‌ಗಳ ಮೂಲಕ ಅವರು ತಮ್ಮ ಆಕ್ರೋಶ ಹೊರ ಹಾಕಿದ್ದು, 'ನನ್ನ ಮನೆಯ ಸೆಕ್ಯೂರಿಟಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಕೋಮು ದ್ವೇಷದ ಘೋಷಣೆಗಳನ್ನು ಕೂಗಲಾಗಿದೆ' ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ದೇಶದಲ್ಲಿ "ಸಂಸದರ ಮನೆಯೇ ಸುರಕ್ಷಿತವಾಗಿಲ್ಲದಿದ್ದರೆ, ಅಮಿತ್ ಶಾ ಇದರಿಂದ ಯಾವ ರೀತಿಯ ಸಂದೇಶವನ್ನು ರವಾನಿಸುತ್ತಿದ್ದಾರೆ?" ಅಸಾದುದ್ದೀನ್ ಓವೈಸಿ ತಮ್ಮ ಟ್ವಿಟರ್‌ನಲ್ಲಿ ಕೇಂದ್ರ ಗೃಹ ಸಚಿವರನ್ನು ಟ್ಯಾಗ್ ಮಾಡಿ ಪ್ರಶ್ನಿಸಿದ್ದಾರೆ.

ಘಟನೆಯ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದರಲ್ಲಿ 6-7 ಮಂದಿ ಓವೈಸಿ ಮನೆಯ ಮುಂದೆ ಘೋಷಣೆ ಕೂಗುತ್ತಾ, ಬಡಿಗೆಗಳ ಮೂಲಕ ನೇಮ್‌ ಪ್ಲೇಟ್‌, ಟ್ಯೂಬ್‌ ಲೈಟ್‌ ಹಾಗೂ ಮನೆಯ ಕಿಟಕಿ ಗಾಜುಗಳನ್ನು ಒಡೆಯುತ್ತಿರು ದೃಶ್ಯ ದಾಖಲಾಗಿದೆ. ಅದರಲ್ಲೊಬ್ಬ ವ್ಯಕ್ತಿ, 'ನಾನು ಜಿಹಾದಿ ಅಸಾದುದ್ದೀನ್‌ ಓವೈಸಿಗೆ ಪಾಠ ಕಲಿಸಲೆಂದೇ ಬಂದಿದ್ದೇನೆ.. ಜೈ ಶ್ರೀರಾಮ್..' ಎಂದು ಹೇಳುವುದು ದಾಖಲಾಗಿದೆ.

ಐವರು ಆರೋಪಿಗಳನ್ನು ಬಂಧಿಸಿದ ದೆಹಲಿ ಪೊಲೀಸ್:

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಮನೆ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತ ದೀಪಕ್ ಯಾದವ್ ಹೇಳಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Five men who claim to be from a group called the Hindu Sena were arrested by the police for vandalising the official residence of Hyderabad MP Asaduddin Owaisi in Delhi's Ashoka Road.