ಜಾಲತಾಣಗಳ ಜನಕನಿಗೆ ಸರ್ವರ್ ಶಾಕ್ ! ವಿಶ್ವಾದ್ಯಂತ ಫೇಸ್ಬುಕ್, ವಾಟ್ಸಪ್ ಸ್ತಬ್ಧಕ್ಕೆ ಶಾಪ ಹಾಕಿದ ಬಳಕೆದಾರರು ; ಏಳು ಗಂಟೆ ತಡಕಾಟದ ಬಳಿಕ ಮರಳಿ ಹಾದಿಗೆ 

05-10-21 10:25 am       Mangaluru Correspondent   ದೇಶ - ವಿದೇಶ

ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಒಮ್ಮಿಂದೊಮ್ಮೆಲೇ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಸ್ತಬ್ಧ ಆಗಿತ್ತು. ಹೆಚ್ಚಿನ ಜನರು ತಮ್ಮದೇ ಮೊಬೈಲ್ ತೊಂದ್ರೆ ಆಗಿರಬೇಕೆಂದು ರೀಸ್ಟಾರ್ಟ್ ಮಾಡಿ, ತಡಕಾಡಿದ್ದರು. ಆಬಳಿಕ ಫೇಸ್ಬುಕ್ ಕಂಪನಿ ಸಮೂಹಕ್ಕೆ ಸೇರಿದ ವಾಟ್ಸಪ್, ಇನ್‌ಸ್ಟಾಗ್ರಾಂ, ಮೆಸೆಂಜರ್‌ ಸೇರಿ ಇನ್ನಿತರ ಸೇವೆಗಳೆಲ್ಲ ತೊಂದರೆಗೆ ಒಳಗಾಗಿದ್ದು ತಿಳಿದುಬಂದಿತ್ತು

ನವದೆಹಲಿ, ಅ.5: ನಿನ್ನೆ ರಾತ್ರಿ ಒಂಬತ್ತು ಗಂಟೆಗೆ ಒಮ್ಮಿಂದೊಮ್ಮೆಲೇ ಫೇಸ್‌ಬುಕ್‌ ಮತ್ತು ವಾಟ್ಸಾಪ್‌ ಸ್ತಬ್ಧ ಆಗಿತ್ತು. ಹೆಚ್ಚಿನ ಜನರು ತಮ್ಮದೇ ಮೊಬೈಲ್ ತೊಂದ್ರೆ ಆಗಿರಬೇಕೆಂದು ರೀಸ್ಟಾರ್ಟ್ ಮಾಡಿ, ತಡಕಾಡಿದ್ದರು. ಆಬಳಿಕ ಫೇಸ್ಬುಕ್ ಕಂಪನಿ ಸಮೂಹಕ್ಕೆ ಸೇರಿದ ವಾಟ್ಸಪ್, ಇನ್‌ಸ್ಟಾಗ್ರಾಂ, ಮೆಸೆಂಜರ್‌ ಸೇರಿ ಇನ್ನಿತರ ಸೇವೆಗಳೆಲ್ಲ ತೊಂದರೆಗೆ ಒಳಗಾಗಿದ್ದು ತಿಳಿದುಬಂದಿತ್ತು. ವಿಶ್ವಾದ್ಯಂತ ಬಳಕೆದಾರರು ಹಿಡಿಶಾಪ ಹಾಕುತ್ತಿದ್ದಂತೆ, ಫೇಸ್ಬುಕ್ ಜನಕ ಮಾರ್ಕ್ ಜುಕರ್ ಬರ್ಗ್ ಕ್ಷಮೆ ಕೋರಿ ವಿಷಾದವನ್ನು ಪ್ರಕಟಿಸಿದ್ದರು. 

ಜಾಗತಿಕವಾಗಿ 350 ಕೋಟಿಗೂ ಹೆಚ್ಚು ಬಳಕೆದಾರರನ್ನು ಹೊಂದಿರುವ ಫೇಸ್ಬುಕ್, ವಾಟ್ಸಪ್ ಜಾಲತಾಣಗಳು ಸುದೀರ್ಘ ಆರು ಗಂಟೆಗಳ ಬಳಿಕ ಮತ್ತೆ ಸೇವೆ ಆರಂಭಿಸಿವೆ. ಈ ಬಗ್ಗೆ ಮಾರ್ಕ್ ಜುಕರ್ ಬರ್ಗ್ ಭಾರತೀಯ ಕಾಲಮಾನ ನಸುಕಿನ 4 ಗಂಟೆ ಸುಮಾರಿಗೆ ಟ್ವಿಟರ್ ನಲ್ಲಿ ಸಂದೇಶ ನೀಡಿದ್ದಾರೆ.‌ ಭಾರತದಲ್ಲಿ ರಾತ್ರಿಯಾಗಿದ್ದರೆ, ಅಮೆರಿಕ, ಯುರೋಪ್ ನಲ್ಲಿ ಬಹುತೇಕ ರಾಷ್ಟ್ರಗಳು ಭಾರತೀಯರಿಗಿಂತ ಹೆಚ್ಚು ಸಮಸ್ಯೆ ಅನುಭವಿಸಿದ್ದಾರೆ. ನಿತ್ಯದ ವಹಿವಾಟು, ಹಣಕಾಸು ವಿನಿಮಯ ಉದ್ದೇಶಕ್ಕೆ ಜಾಲತಾಣ ಬಳಸುತ್ತಿದ್ದವರು ದಿಢೀರ್ ಸಮಸ್ಯೆಯಿಂದಾಗಿ ತೀವ್ರ ತೊಂದರೆ ಅನುಭವಿಸಿದ್ದರು. 

ಫೇಸ್‌ಬುಕ್‌ ಹೊಸ ಪೇಜ್‌ ಲೋಡ್‌ ಆಗದೇ ಇದ್ರೆ, ವಾಟ್ಸಾಪ್‌ ಯಾವುದೇ ಮೆಸೇಜ್‌ ಸೆಂಡ್‌ ಹಾಗೂ ರಿಸೀವ್‌ ಮಾಡುವುದನ್ನೇ ನಿಲ್ಲಿಸಿ ಬಿಟ್ಟಿತ್ತು. ಇನ್ನು ಮೆಸೆಂಜರ್‌ ಹಾಗೂ ಇನ್‌ಸ್ಟಾ ಗ್ರಾಂ ಕೂಡ ಬಳಕೆದಾರರಿಗೆ ಲಭ್ಯವಾಗುತ್ತಿರಲಿಲ್ಲ. ಸ್ವಲ್ಪ ಹೊತ್ತಲ್ಲೇ ಫೇಸ್‌ಬುಕ್‌ ಟ್ವೀಟರ್‌ ಮೂಲಕ ತಾಂತ್ರಿಕ ದೋಷವಾಗಿರುವುದನ್ನು ಖಚಿತ ಪಡಿಸಿದೆ. ಮಾತ್ರವಲ್ಲ ತನ್ನ ಗ್ರಾಹಕರಿಗೆ ಸೇವೆಯಲ್ಲಿ ವ್ಯತ್ಯಯವಾಗಿರುವುದಕ್ಕೆ ಕ್ಷಮೆಯಾಚನೆ ಮಾಡಿದೆ. ಆದರೆ ಫೇಸ್ ಬುಕ್, ವಾಟ್ಸಪ್ ಮತ್ತು ಇನ್ ಸ್ಟಾಗ್ರಾಮ್ ಕನಿಷ್ಠ ಏಳು ಗಂಟೆಗಳ ಸ್ಥಗಿತದ ನಂತರ ಜಾಗತಿಕ ಇಂಟರ್ನೆಟ್ ಕ್ಷೇತ್ರಕ್ಕೆ ಮರುಸಂಪರ್ಕ ಪಡೆದಿವೆ.

ಫೇಸ್ ಬುಕ್ ಮಾಲೀಕತ್ವದ ಮೂರು ಪ್ಲಾಟ್ ಫಾರ್ಮ್ ಗಳು ತಾಂತ್ರಿಕ ಸಮಸ್ಯೆಗೆ ತುತ್ತಾಗುತ್ತಲೇ ಬಳಕೆದಾರರು ಟ್ವೀಟರ್‌ ಮೂಲಕ ಸಮಸ್ಯೆಯಾಗಿದ್ದನ್ನು ತಿಳಿಸಿದ್ದಾರೆ. ಕೆಲವರು ಫೇಸ್ಬುಕ್, ವಾಟ್ಸಪ್ ಡಿಲೀಟ್ ಮಾಡಿ ಎಂದು ಹ್ಯಾಷ್ ಟ್ಯಾಗ್ ಆರಂಭಿಸಿದ್ದರು. ಫೇಸ್ಬುಕ್ ಬಗ್ಗೆ ಭಾರೀ ಆಕ್ರೋಶವನ್ನೂ ಹೊರಹಾಕಿದ್ದರು. 

ಇದನ್ನು ಗಮನಿಸಿದ ಫೇಸ್ ಬುಕ್ ಸಂವಹನ ವಿಭಾಗದ ಸಿಇಓ ಆಂಡಿ ಸ್ಟೋನ್ ಭಾರತೀಯ ಕಾಲಮಾನ ರಾತ್ರಿ 9.37 ಕ್ಕೆ ಟ್ವಿಟರ್ ನಲ್ಲಿ ಈ ಬಗ್ಗೆ ಸಂದೇಶ ಪೋಸ್ಟ್ ಮಾಡಿದ್ದರು. ಕೆಲವರು ನಮ್ಮ ಅಪ್ಲಿಕೇಶನ್ ಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ನಾವು ಆದಷ್ಟು ಬೇಗ ಸಮಸ್ಯೆ ಸರಿಪಡಿಸಲು ಕೆಲಸ ಮಾಡುತ್ತಿದ್ದೇವೆ ಮತ್ತು ಆಗಿರುವ ಅನಾನುಕೂಲತೆಗಾಗಿ ಕ್ಷಮೆ ಯಾಚಿಸುತ್ತೇವೆ ಎಂದಿದ್ದಾರೆ. 

ಭಾರತವು ಫೇಸ್ ಬುಕ್ ಗೆ ಅತಿದೊಡ್ಡ ಬಳಕೆದಾರರನ್ನು ಹೊಂದಿದೆ. ಅಂದಾಜು 410 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದೆ ಎನ್ನಲಾಗಿದೆ. ವಾಟ್ಸಪ್, ಮೆಸೇಜಿಂಗ್ ಪ್ಲಾಟ್ ಫಾರ್ಮ್ 530 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಇನ್ ಸ್ಟಾಗ್ರಾಮ್ 210 ಮಿಲಿಯನ್ ಬಳಕೆದಾರರನ್ನು ಹೊಂದಿದೆ ಎಂದು ಸರ್ಕಾರದ ಅಂಕಿ ಅಂಶಗಳು ಹೇಳುತ್ತವೆ.

Facebook, Instagram and WhatsApp at least partially reconnected to the global internet late on Monday afternoon, nearly six hours into an outage that paralyzed the social media platform..