ಮನೆಯಲ್ಲಿ ಐದು ಸದಸ್ಯರಿದ್ದರೂ ಬಿಜೆಪಿ ಅಭ್ಯರ್ಥಿಗೆ ಸಿಕ್ಕಿದ್ದು ತನ್ನ ಒಂದು ಓಟು ಮಾತ್ರ !ಕೊಯಮತ್ತೂರಿನಲ್ಲಿ ರಾಷ್ಟ್ರೀಯ ಪಕ್ಷಕ್ಕೆ ಅವಮಾನ

12-10-21 09:05 pm       Headline Karnataka News Network   ದೇಶ - ವಿದೇಶ

ತಮಿಳುನಾಡಿನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತ ಪಡೆದು ಸುದ್ದಿಯಾಗಿದ್ದಾರೆ. 

ಚೆನ್ನೈ, ಅ.12 : ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಯೊಬ್ಬರು ಕೇವಲ ಒಂದು ಮತವನ್ನಷ್ಟೇ ಪಡೆದು ಸುದ್ದಿಯಾಗಿದ್ದಾರೆ. 

ಆದರೆ, ಅವರು ಕೇವಲ ಚುನಾವಣೆಯಲ್ಲಿ ಒಂದು ಮತವನ್ನು ಪಡೆದಿದ್ದು ಮಾತ್ರ ಸುದ್ದಿಯಾಗಿದ್ದಲ್ಲ. ಅಭ್ಯರ್ಥಿಯ ಮನೆಯಲ್ಲಿ 5 ಮಂದಿ ಇದ್ದರೂ ಅವರು ಒಂದು ಮತವನ್ನು ಮಾತ್ರ ಪಡೆದಿದ್ದರು. ಮನೆಯಲ್ಲಿದ್ದ ಸದಸ್ಯರೇ ಅವರಿಗೆ ಮತ ಹಾಕದೆ, ಬೇರೆಯವರನ್ನು ಆಯ್ಕೆ ಮಾಡಿದ್ದಾರೆ ಎನ್ನುವುದು ದೊಡ್ಡ ಸುದ್ದಿಯಾಗಿದೆ.‌

ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್ ಎಂಬವರು ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ ವಾರ್ಡ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಆದರೆ ಕೇವಲ ಒಂದು ಮತವನ್ನು ಮಾತ್ರ ಪಡೆದು ವಿಪಕ್ಷ ನಾಯಕರ ಅಣಕಕ್ಕೆ ಕಾರಣವಾಗಿದ್ದಾರೆ. 

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಕ್ಟೋಬರ್ 6 ಮತ್ತು 9 ರಂದು ನಡೆದಿತ್ತು. ಒಟ್ಟಾರೆಯಾಗಿ, 79,433 ಅಭ್ಯರ್ಥಿಗಳು 27,003 ಸ್ಥಾನಗಳಿಗೆ ಸ್ಪರ್ಧಿಸಿದ್ದರು. ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಕೇಂದ್ರ ನಾಯಕರ ಫೋಟೋಗಳನ್ನು ಪೋಸ್ಟರ್‌ನಲ್ಲಿ ಹಾಕಿ ಕಾರ್ತಿಕ್ ಚುನಾವಣೆಗೆ ಭಾರೀ ಪ್ರಚಾರ ನಡೆಸಿದ್ದರು.

ಬರಹಗಾರ್ತಿ ಮತ್ತು ಸಾಮಾಜಿಕ ಕಾರ್ಯಕರ್ತೆ ಮೀನಾ ಕಂದಸಾಮಿ ಈ ಬಗ್ಗೆ ಟ್ವಿಟ್ವರ್ ನಲ್ಲಿ ಬರೆದುಕೊಂಡಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ಹೆಮ್ಮೆ ಇದೆ ಎಂದು ಬರೆದಿದ್ದು ವೈರಲ್ ಆಗಿದೆ. 

ತಮಿಳುನಾಡು ಕಾಂಗ್ರೆಸ್ ಮುಖಂಡರು ಸೇರಿದಂತೆ ಹಲವು ನಾಯಕರು ಬಿಜೆಪಿ ಅಭ್ಯರ್ಥಿ ಒಂದು ಮತ ಪಡೆದ ವಿಚಾರವನ್ನು ಅಣಕಿಸಿದ್ದಾರೆ.

In the recently held local body poll in Tamil Nadu, BJP candidate D Karthik secured only one vote, despite having five members in the family. He had contested for the post of a ward member in Periyanaickenpalayam union in Coimbatore district. His candidature became a mockery with the incident and the news spread through the media and went viral with #Single_Vote_BJP which went trending on Twitter.