ಮಧ್ಯ ಕೇರಳದಲ್ಲಿ ಮಳೆಯ ರೌದ್ರನರ್ತನ ; ಇಡುಕ್ಕಿ, ಕೊಟ್ಟಾಯಂ ಜಿಲ್ಲೆಗಳಲ್ಲಿ ಭೂಕುಸಿತ, ಭೀಕರ ಪ್ರವಾಹಕ್ಕೆ ಜನ ತತ್ತರ, 23 ಸಾವು, ನೂರಾರು ಮಂದಿ ನಾಪತ್ತೆ !!

17-10-21 08:13 pm       Headline Karnataka News Network   ದೇಶ - ವಿದೇಶ

ದೇವರನಾಡು ಕೇರಳ ಮತ್ತೆ ಪ್ರಳಯ ಸದೃಶ ಮಳೆಯ ರೌದ್ರನರ್ತನಕ್ಕೆ ಸಾಕ್ಷಿಯಾಗಿದೆ. ಮಧ್ಯ ಕೇರಳ ಮತ್ತು ದಕ್ಷಿಣ ಕೇರಳದಲ್ಲಿ ಎರಡು ದಿನಗಳಲ್ಲಿ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿ ಮಳೆಯಾಗಿದ್ದು ಬೆಟ್ಟಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದೆ.

ತಿರುವನಂತಪುರಂ, ಅ.17: ದೇವರನಾಡು ಕೇರಳ ಮತ್ತೆ ಪ್ರಳಯ ಸದೃಶ ಮಳೆಯ ರೌದ್ರನರ್ತನಕ್ಕೆ ಸಾಕ್ಷಿಯಾಗಿದೆ. ಮಧ್ಯ ಕೇರಳ ಮತ್ತು ದಕ್ಷಿಣ ಕೇರಳದಲ್ಲಿ ಎರಡು ದಿನಗಳಲ್ಲಿ ಇತಿಹಾಸದಲ್ಲೇ ಕಂಡುಕೇಳರಿಯದ ರೀತಿ ಮಳೆಯಾಗಿದ್ದು ಬೆಟ್ಟಗಳಲ್ಲಿ ಭಾರೀ ಭೂಕುಸಿತ ಸಂಭವಿಸಿದೆ. ಇದರಿಂದಾಗಿ ಪಶ್ಚಿಮ ಘಟ್ಟದ ತಪ್ಪಲು ಪ್ರದೇಶದಲ್ಲಿ ಭಾರೀ ಪ್ರವಾಹ ಉಂಟಾಗಿದ್ದು, ಭಾನುವಾರ ಸಂಜೆಯ ವರೆಗಿನ ಮಾಹಿತಿ ಪ್ರಕಾರ 23 ಮಂದಿ ಸಾವನ್ನಪಿದ್ದಾರೆ. ನೂರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಯಲ್ಲಿ ಮಳೆಯ ರೌದ್ರನರ್ತನಕ್ಕೆ ಕಳೆದ ಬಾರಿ ಕೊಡಗಿನಲ್ಲಾದಂತೆ ಭಾರೀ ವಿಕೋಪ ಸಂಭವಿಸಿದೆ. ಘಟ್ಟಗಳ ಭಾಗದಲ್ಲಿ ಭೂಕುಸಿತ ಉಂಟಾಗಿದ್ದು, ಊರಿಗೆ ಊರೇ ನಾಶವಾಗಿದೆ. ನೂರಾರು ಮನೆಗಳು ಮಣ್ಣು ಮತ್ತು ನೀರಿನ ಪ್ರವಾಹದಲ್ಲಿ ಕೊಚ್ಚಿ ಹೋಗಿವೆ. ರಸ್ತೆಗಳಲ್ಲಿ ಹತ್ತಾರು ಮೀಟರ್ ಎತ್ತರಕ್ಕೆ ಮಣ್ಣು ಬಿದ್ದಿದ್ದು, ಭೂಕುಸಿತ ಪ್ರದೇಶಕ್ಕೆ ರಕ್ಷಣಾ ತಂಡಗಳು ತಲುಪಲಾಗದ ಸ್ಥಿತಿ ಎದುರಾಗಿದೆ.

ಕೊಟ್ಟಾಯಂ ಜಿಲ್ಲೆಯಲ್ಲಿ 12 ಮಂದಿ ಸಾವು ಕಂಡಿದ್ದಾರೆ ಎನ್ನಲಾಗುತ್ತಿದೆ. ಇದೇ ವೇಳೆ, ಇಡುಕ್ಕಿ ಜಿಲ್ಲೆಯಲ್ಲಿ ಮೃತರ ಸಂಖ್ಯೆ 9ಕ್ಕೇರಿದೆ. ಇದಲ್ಲದೆ, ಪತ್ತನಂತಿಟ್ಟ, ತೃಶೂರು ಜಿಲ್ಲೆಯಲ್ಲೂ ಹಲವಾರು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಯಿದೆ. ಘಟ್ಟಗಳ ನಡುವೆ ಇದ್ದ ಪಟ್ಟಣಗಳು, ಪೇಟೆಗಳಿಗೆ ಸಂಪರ್ಕ ಸಾಧ್ಯವಾಗದೆ ಅಲ್ಲಿ ಏನಾಗಿದೆ ಎನ್ನುವುದರ ಬಗ್ಗೆ ಮಾಹಿತಿ ಸಿಗುತ್ತಿಲ್ಲ. ಫೋನ್, ಕೇಬಲ್, ರಸ್ತೆ ಎಲ್ಲವೂ ಸಂಪರ್ಕ ಕಡಿತವಾಗಿದ್ದು, ಕೇರಳದ ಜನರು ಕಂಡು ಕೇಳರಿಯದ ಸ್ಥಿತಿ ಎದುರಾಗಿದೆ.

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ರಾಜ್ಯದ ಸ್ಥಿತಿ ತುಂಬ ಸೀರಿಯಸ್ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಕೂತ್ತಿಕ್ಕಲ್ ಹಾಗೂ ಇಡುಕ್ಕಿ ಜಿಲ್ಲೆಯ ಪೆರುವಂತಾನಂ ಎಂಬ ಎರಡು ಗ್ರಾಮಗಳ ಸ್ಥಿತಿ ಭೀಕರವಾಗಿದ್ದು, ಅಲ್ಲಿ ಸೇನಾ ಯೋಧರು ಕಾರ್ಯಾಚರಣೆಗೆ ಇಳಿದಿದ್ದಾರೆ. ಕೂತ್ತಿಕ್ಕಲ್ ಒಂದರಲ್ಲೇ ಈವರೆಗೆ 14 ಮಂದಿಯ ಶವಗಳು ಪತ್ತೆಯಾಗಿವೆ. ನೇವಿ ಮತ್ತು ವಾಯುಪಡೆ ಹೆಲಿಕಾಪ್ಟರ್ ಗಳ ಮೂಲಕ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ. ಆದರೆ, ಇವರೆಡು ಜಿಲ್ಲೆಗಳಲ್ಲಿ ಸ್ಥಿತಿ ಭೀಕರ ಆಗಿರುವುದರಿಂದ ಹೆಲಿಕಾಪ್ಟರ್ ಕಾರ್ಯಾಚರಣೆಯೂ ಮಳೆಯ ಹೊಡೆತದಿಂದಾಗಿ ಸಾಧ್ಯವಾಗುತ್ತಿಲ್ಲ ಎಂದು ಅಲ್ಲಿನ ಮೂಲಗಳು ತಿಳಿಸಿವೆ.

ಕೇರಳದಲ್ಲಿ ಮಳೆಯಿಂದಾಗಿ ಗಂಭೀರ ಸ್ಥಿತಿ ಎದುರಾಗಿರುವ ಬಗ್ಗೆ ಪ್ರಧಾನಿ ಮೋದಿ, ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದಾರೆ. ಸೇನಾ ಪಡೆಯ ಮೂಲಕ ಎಲ್ಲ ರೀತಿಯ ನೆರವು ಒದಗಿಸುವುದಾಗಿ ಮೋದಿ ತಿಳಿಸಿದ್ದಾರೆ. ಇದಲ್ಲದೆ, ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಕೇರಳದ ಗಂಭೀರ ಸ್ಥಿತಿಯ ಬಗ್ಗೆ ಗಮನ ಹರಿಸಿದ್ದಾರೆ. ಹತ್ತಕ್ಕೂ ಹೆಚ್ಚು ಎನ್ ಡಿಆರ್ ಎಫ್ ಪಡೆಗಳು ನಾಲ್ಕು ಜಿಲ್ಲೆಗಳಲ್ಲಿ ಕಾರ್ಯಾಚರಣೆಗೆ ಇಳಿದಿವೆ.

Several people have been injured and displaced while 23 have died as heavy rains pounded south and central Kerala causing flash floods and landslides in many parts of the state. Fourteen deaths were reported in Kottayam’s Koottickal and eight deaths were reported in Idukki. A child has drowned in Kozhikode district. Read More