ಕೇರಳದಲ್ಲಿ ಭಾರೀ ವಿಕೋಪ, ಸೇನೆಯ ಮೂರೂ ವಿಭಾಗದಿಂದ ರಕ್ಷಣಾ ಕಾರ್ಯ, ನೇವಿ, ಹೆಲಿಕಾಪ್ಟರ್ ಕಾರ್ಯಾಚರಣೆ, ಅಣೆಕಟ್ಟು ಭಾಗದಲ್ಲಿ ಕಟ್ಟೆಚ್ಚರ, ಪ್ರಧಾನಿ ಮೋದಿಯಿಂದ ಆಪತ್ತಿನ ಬಗ್ಗೆ ನಿಗಾ

17-10-21 09:31 pm       Headline Karnataka News Network   ದೇಶ - ವಿದೇಶ

ಭಾರೀ ಮಳೆಯಿಂದಾಗಿ ಮಧ್ಯ ಕೇರಳದ ಜಿಲ್ಲೆಗಳು ಪೂರ್ತಿ ತತ್ತರಿಸಿದ್ದು, ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಭಾರೀ ವಿಕೋಪ ಸೃಷ್ಟಿಯಾಗಿದೆ.

Photo credits : ANI News

ತಿರುವನಂತಪುರಂ, ಅ.17: ಭಾರೀ ಮಳೆಯಿಂದಾಗಿ ಮಧ್ಯ ಕೇರಳದ ಜಿಲ್ಲೆಗಳು ಪೂರ್ತಿ ತತ್ತರಿಸಿದ್ದು, ಪಶ್ಚಿಮ ಘಟ್ಟದ ತಪ್ಪಲುಗಳಲ್ಲಿ ಭಾರೀ ವಿಕೋಪ ಸೃಷ್ಟಿಯಾಗಿದೆ. ಅಣೆಕಟ್ಟುಗಳಲ್ಲಿ ಆಪತ್ತಿನ ಸ್ಥಿತಿ ಎದುರಾಗಿದ್ದು, ನದಿ ಮತ್ತು ಅಣೆಕಟ್ಟು ಇರುವ ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ 100ಕ್ಕೂ ಹೆಚ್ಚು ಗಂಜಿಕೇಂದ್ರಗಳನ್ನು ತೆರೆಯಲಾಗಿದೆ.

ಹವಾಮಾನ ಮಾಹಿತಿ ಪ್ರಕಾರ, ಭಾನುವಾರ ರಾತ್ರಿ ವರೆಗೂ ಭಾರೀ ಮಳೆಯ ಸೂಚನೆ ನೀಡಲಾಗಿದೆ. ಅರಬ್ಬೀ ಸಮುದ್ರ ಮಧ್ಯೆ ಲಕ್ಷದ್ವೀಪದ ಬಳಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದಾಗಿ ಮಳೆಯಾಗುತ್ತಿದೆ. ಸಮುದ್ರ ಮಧ್ಯೆ ಎದ್ದಿರುವ ಚಂಡಮಾರುತ ನಿಧಾನಕ್ಕೆ ಪಶ್ಚಿಮದತ್ತ ಚಲಿಸುತ್ತಿದ್ದು, ಸೋಮವಾರದ ವೇಳೆಗೆ ಕ್ಷೀಣವಾಗಲಿದೆ ಎನ್ನುವ ಮಾಹಿತಿ ನೀಡಲಾಗಿದೆ. ಪತ್ತನಂತಿಟ್ಟ, ಆಲಪ್ಪುಝ, ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ, ತೃಶೂರು, ಮಲಪ್ಪುರಂ, ಪತ್ತನಂತಿಟ್ಟ ಜಿಲ್ಲೆಗಳಲ್ಲಿ ಎನ್ ಡಿಆರ್ ಎಫ್ ಮತ್ತು ಡಿಫೆನ್ಸ್ ಸೆಕ್ಯುರಿಟಿ ಕಾರ್ಪ್ಸ್ ಪಡೆಯ ಸಿಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ಪತ್ತನಂತಿಟ್ಟು ಜಿಲ್ಲೆಯ ಮಲ್ಲಪಳ್ಳಿ ಎಂಬಲ್ಲಿ ವಾಯುಪಡೆಯ ವಿಮಾನದ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಅಲ್ಲಿ ಹಲವಾರು ಮಂದಿ ಭೂಕುಸಿತ ಮತ್ತು ಪ್ರವಾಹದ ಮಧ್ಯೆ ಸಿಲುಕಿದ್ದಾರೆ ಎನ್ನಲಾಗುತ್ತಿದ್ದು, ರಕ್ಷಣಾ ತಂಡ ಅಲ್ಲಿಗೆ ತೆರಳಿದೆ. ಕೊಕ್ಕಯಾರ್ ಭೂಕುಸಿತ ಪ್ರದೇಶದಲ್ಲಿ ನೌಕಾಪಡೆಯ ಹೆಲಿಕಾಪ್ಟರ್ ಕಾರ್ಯಾಚರಣೆ ನಡೆಸುತ್ತಿದೆ. ಕೇಂದ್ರ ಹವಾಮಾನ ಇಲಾಖೆಯ ಎಚ್ಚರಿಕೆ ಹಿನ್ನೆಲೆಯಲ್ಲಿ ಕೇರಳ, ಕರ್ನಾಟಕ, ಲಕ್ಷದ್ವೀಪ ವ್ಯಾಪ್ತಿಯಲ್ಲಿ ಮೀನುಗಾರಿಕೆಯನ್ನು ಮುಂದಿನ ಆದೇಶದ ವರೆಗೆ ಸಂಪೂರ್ಣ ನಿಷೇಧ ಮಾಡಲಾಗಿದೆ.

ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳ ಅಣೆಕಟ್ಟುಗಳಿರುವ ಭಾಗದಲ್ಲಿ ಹೆಚ್ಚುವರಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.  ಪತ್ತನಂತಿಟ್ಟ ಜಿಲ್ಲೆಯ ಕಾಕಿ ಡ್ಯಾಮ್, ತೃಶೂರು ಜಿಲ್ಲೆಯ ಶೋಲಯಾರ್, ಇಡುಕ್ಕಿ ಜಿಲ್ಲೆಯ ಇಡುಕ್ಕಿ ಡ್ಯಾಮ್, ಪೆರಿಂಗಾಲ್ ಕುತ್ತು, ಕುಂಡಾಲ, ಕಲ್ಲಾರ್ ಕುಟ್ಟಿ, ಮುತ್ತುಪೆಟ್ಟಿ, ಕಲ್ಲಾರ್ ಡ್ಯಾಮ್ ವ್ಯಾಪ್ತಿಯಲ್ಲೂ ರೆಡ್ ಅಲರ್ಟ್ ನೀಡಲಾಗಿದೆ. ಪೊನ್ಮುಡಿ, ಪಂಪಾ, ಇಡುಕ್ಕಿ ಡ್ಯಾಮ್ ಪ್ರದೇಶದಲ್ಲಿ ಬ್ಲೂ ಎಲರ್ಟ್ ಮಾಡಲಾಗಿದೆ.

ಭಾರೀ ವಿಕೋಪಕ್ಕೇನು ಕಾರಣ ?

ಅ.14ರಿಂದಲೇ ಅರಬ್ಬೀ ಸಮುದ್ರ ಮಧ್ಯೆ ವಾಯುಭಾರ ಕುಸಿತದಿಂದಾಗಿ ಚಂಡಮಾರುತ ಕಾಣಿಸಿಕೊಂಡಿತ್ತು. ಇದರಿಂದಾಗಿ ಒಂದೆಡೆ ಭಾರೀ ಗಾಳಿ ಮತ್ತು ಭಾರೀ ಮಳೆ ಕೇರಳ ಕರಾವಳಿಗೆ ಅಪ್ಪಳಿಸಿದ್ದು, ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರವಾಹ ಕಾಣಿಸಿಕೊಂಡಿದೆ. ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ 24 ಗಂಟೆಗಳಲ್ಲಿ 200 ಮಿಮೀಗೂ ಹೆಚ್ಚು ಮಳೆಯಾಗಿದ್ದು, ಇದರಿಂದಾಗಿ ಘಟ್ಟದ ತಪ್ಪಲು ಪ್ರದೇಶದಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿದೆ. ಐದು ಜಿಲ್ಲೆಗಳ ವ್ಯಾಪ್ತಿಯಲ್ಲಿ ಗುರುವಾರ ಮತ್ತು ಶುಕ್ರವಾರ ಭಾರೀ ಮಳೆಯಾಗಿದ್ದು, ಅದರ ಪರಿಣಾಮ ಭಾರೀ ವಿಕೋಪ ಸೃಷ್ಟಿಯಾಗಿದೆ.

ಇಡುಕ್ಕಿ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭಾರೀ ನಾಶ- ನಷ್ಟ ಉಂಟಾಗಿದ್ದು, ಮಹಿಳೆಯರು ತಮ್ಮ ಮಕ್ಕಳನ್ನು ಎತ್ತಿಕೊಂಡು ಬೀದಿ ಪಾಲಾಗಿದ್ದಾರೆ. ಕೆಲವು ಕಡೆ ಮಹಿಳೆಯರು, ಮಕ್ಕಳು ಎಲ್ಲವನ್ನೂ ಕಳಕೊಂಡು ಗೋಳಿಡುತ್ತಿರುವ ದೃಶ್ಯ ಕಂಡುಬಂದಿದೆ. ರಕ್ಷಣಾ ಕಾರ್ಯಕರ್ತರು ಜನರನ್ನು ಸುರಕ್ಷಿತ ಸ್ಥಳಗಳಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಆದರೆ, ಭೂಕುಸಿತದ ಮಧ್ಯೆ ಸಿಲುಕಿರುವ ಜನರು ಅಲ್ಲಿಂದ ಹೊರಬರಲಾಗದೆ ಗೋಳಿಡುತ್ತಿದ್ದಾರೆ. ಹೆಲಿಕಾಪ್ಟರ್ ಮೂಲಕ ಮಕ್ಕಳು, ಮಹಿಳೆಯರನ್ನು ಅಲ್ಲಿಂದ ಮೇಲೆತ್ತಲಾಗುತ್ತಿದೆ.

ಕೇಂದ್ರ ಗೃಹ ಸಚಿವ ಅಮಿತ್ ಷಾ ಟ್ವಿಟರ್ ಮೂಲಕ ಪ್ರತಿಕ್ರಿಯಿಸಿದ್ದು, ಕೇರಳದ ಪ್ರಳಯ ಸದೃಶ ಸ್ಥಿತಿಯ ಬಗ್ಗೆ ಗಮನ ಹರಿಸಲಾಗಿದ್ದು, ಎನ್ ಡಿಆರ್ ಎಫ್, ಸೇನೆ ಸೇರಿದಂತೆ ಎಲ್ಲ ನೆರವನ್ನೂ ನೀಡಲಾಗಿದೆ. ಸೇನೆಯ ಮೂರೂ ವಿಭಾಗದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಕಾವಲಿ ಎಂಬಲ್ಲಿ ನೇವಿಯ ಹೆಲಿಕಾಪ್ಟರ್ ಮೂಲಕ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಐಎನ್ಎಸ್ ಗರುಡದ ಮೂಲಕ ನೇವಿಯ ಯೋಧರು ರಕ್ಷಣಾ ಕಾರ್ಯ ನಡೆಸುತ್ತಿದ್ದಾರೆ.  

Torrential rain pummelled southern and central Kerala districts throughout Saturday, triggering landslips and floods which left eight dead and wreaked havoc across Pathanamthitta, Kottayam and Idukki districts. Heavy rainfall, accompanied by thunderstorms in some cases, pounded region due to a low pressure area over the south-east Arabian Sea since the early hours of the day.